Advertisement

ಕರಾವಳಿಯ ಯಾರಿಗೆ ಸಚಿವಗಿರಿ?

12:22 AM Aug 20, 2019 | Team Udayavani |

ಮಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಕರಾವಳಿಯಲ್ಲಿ ಯಾರಿಗೆ ಸ್ಥಾನ ಲಭಿಸಬಹುದು ಎಂಬುದಾಗಿ ಒಂದು ತಿಂಗಳಿನಿಂದ ನೆಲೆಸಿದ್ದ ಕುತೂಹಲಕ್ಕೆ ಮಂಗಳವಾರ ತೆರೆ ಬೀಳುವ ಸಾಧ್ಯತೆಗಳಿವೆ. ಯಡಿಯೂರಪ್ಪ ಸಚಿವ ಸಂಪುಟ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ನಿರ್ಧಾರವಾಗಲಿದೆ.

Advertisement

ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿರುವ ಸಂಭಾವ್ಯ ಸಚಿವರ ಪಟ್ಟಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಬಳಿ ಇದ್ದು, ತನ್ನದೇ ಮೂಲಗಳಿಂದ ಅಭಿಪ್ರಾಯಗಳನ್ನು ಕಲೆ ಹಾಕುತ್ತಿದ್ದಾರೆ. ಪ್ರಸ್ತುತ ಲಭ್ಯ ಮಾಹಿತಿ ಪ್ರಕಾರ, ಪ್ರಥಮ ಹಂತದಲ್ಲಿ 14 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬಹುದು.

ದಕ್ಷಿಣ ಕನ್ನಡ ಮತ್ತು ಉಡುಪಿಗೆ ಒಂದೊಂದು ಸಚಿವ ಸ್ಥಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಹಿರಿಯ ಶಾಸಕರಿಗೆ ಪ್ರಾತಿನಿಧ್ಯ ನೀಡುವುದಾದರೆ ಸುಳ್ಯ ಕ್ಷೇತ್ರದಲ್ಲಿ 6 ಬಾರಿ ಗೆದ್ದಿರುವ ಅಂಗಾರ ಮತ್ತು ಕುಂದಾಪುರ ಕ್ಷೇತ್ರ ದಿಂದ 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸ್ಥಾನ ದೊರಕುವ ಸಾಧ್ಯತೆಗಳಿವೆ. ಪ್ರಸ್ತುತ ಮುಂಚೂಣಿಯಲ್ಲಿರುವುದು ಇವರಿಬ್ಬರ ಹೆಸರೇ. ಜತೆಗೆ ಉಭಯ ಜಿಲ್ಲೆಗಳಲ್ಲಿ ಪಕ್ಷದಲ್ಲಿ ಪ್ರಭಾವಿ ವಲಯದಲ್ಲಿರುವ
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್‌ ಕುಮಾರ್‌ ಹೆಸರುಗಳೂ ಕೇಳಿಬರುತ್ತಿವೆ.

ಬುಡಮೇಲಾದೀತೇ ನಿರೀಕ್ಷೆ?
ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಮುಂದಿನ ತಂತ್ರಗಾರಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಮಿತ್‌ ಶಾ ಅವರು ಸಚಿವ ಸ್ಥಾನಗಳ ಹಂಚಿಕೆಯ ಲೆಕ್ಕಾಚಾರ ನಡೆಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳ ಹಿಂದೆ ನೀಡಿರುವ ಸಚಿವರ ಪಟ್ಟಿಗೆ ತತ್‌ಕ್ಷಣ ಅನುಮೋದನೆ ನೀಡಿಲ್ಲ ಎನ್ನಲಾಗಿದೆ. ಅಮಿತ್‌ ಶಾ ಅವರ ಲೆಕ್ಕಾಚಾರ ಪ್ರಸ್ತುತ ಚರ್ಚೆಯಲ್ಲಿರುವ ಸಚಿವರಾಗಬಲ್ಲವರ ಯಾದಿಯನ್ನು ಬುಡಮೇಲು ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಹೊಸಬರು – ಹಿರಿಯರ ಸಮ್ಮಿಶ್ರಣ
ಉಭಯ ಜಿಲ್ಲೆಗಳ ಒಟ್ಟು 13 ಶಾಸಕ ಸ್ಥಾನಗಳ ಪೈಕಿ ಹನ್ನೆರಡನ್ನು ಬಿಜೆಪಿ ಹೊಂದಿದೆ. ಇವರಲ್ಲಿ ಹೊಸಬರು ಮತ್ತು ಹಿರಿಯರ ಸಮ್ಮಿಶ್ರಣವಿದೆ. ಅನುಕ್ರಮವಾಗಿ ಆರು ಮತ್ತು ಐದು ಬಾರಿ ಆಯ್ಕೆಯಾಗಿರುವ ಅಂಗಾರ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಿರಿಯರು.

ವೇದವ್ಯಾಸ ಕಾಮತ್‌, ಹರೀಶ್‌ ಪೂಂಜಾ, ಡಾ| ಭರತ್‌ ಶೆಟ್ಟಿ ಯುವ ಶಾಸಕರು. ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾೖಕ್‌, ಸಂಜೀವ ಮಠಂದೂರು, ಸುಕುಮಾರ ಶೆಟ್ಟಿ ಹೊಸ ಶಾಸಕರು. ಲಾಲಾಜಿ ಮೆಂಡನ್‌, ರಘುಪತಿ ಭಟ್‌ ತಲಾ 3 ಬಾರಿ ಶಾಸಕರಾದವರು.

Advertisement

Udayavani is now on Telegram. Click here to join our channel and stay updated with the latest news.

Next