ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣ ರಾಜಕಾರಣದಿಂದ ಹಿಂದೆ ಸರಿದಿರುವುದರಿಂದ ಬಿಜೆಪಿಯಲ್ಲಿ ಮುಂದಿನ ಲಿಂಗಾಯತ ನಾಯಕ ಯಾರೆಂಬುದಕ್ಕಿಂತಲೂ ಈಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕ ಯಾರು ಎಂಬ ಜಿಜ್ಞಾಸೆ ಉಂಟಾಗಿದೆ. ಈ ಕುರಿತು ಪಕ್ಷದೊಳಗೆ ವಿಭಿನ್ನ ಹಾಗೂ ವ್ಯಾಪಕ ಚರ್ಚೆಗಳು ನಡೆದಿವೆ.
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಜತೆ ಬಲವಾಗಿ ನಿಂತಿದ್ದ ವೀರಶೈವ- ಲಿಂಗಾಯತ ಮತಗಳು ಈ ಚುನಾ ವಣೆಯಲ್ಲಿ ಚದುರಿ ಹೋಗಲಿವೆ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿ ದ್ದರೆ, ಚದುರಿದ ಮತಗಳು ನಮಗೆ ಬೀಳಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರಶೈವ-ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ “ಯಾರು ನಾಯಕ’ ಎಂಬ ಪ್ರಶ್ನೆಗಳು ಮೂಡಿವೆ.
ಯಡಿಯೂರಪ್ಪ ಅವರನ್ನು ಬಿಜೆಪಿ ಹಾಗೂ ವೀರಶೈವ-ಲಿಂಗಾಯತ ಸಮಾಜ ಪ್ರಶ್ನಾತೀತ ನಾಯಕನೆಂದು ಒಪ್ಪಿಕೊಂಡಂತೆ ಕಾಂಗ್ರೆಸ್‌ನಲ್ಲಿ ಈ ಸಮಾಜದ ಪ್ರಶ್ನಾತೀತ ನಾಯಕ ಯಾರು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಸಮಾಜದ ಹಿರಿಯರು ಹಾಗೂ ಪಕ್ಷದ ಅತ್ಯಂತ ಹಿರಿಯ ನಾಯಕರೂ ಆಗಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಪಕ್ಷ ಹಾಗೂ ಸಮಾಜದಲ್ಲಿ ಅವರದೇ ಆದ ಹಿರಿತನ, ಗೌರವವಿದೆ. ವೀರಶೈವ ಮಹಾಸಭಾ ಬೆಳವಣಿಗೆಗೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಅವರಿಗಿಂತ ಮೊದಲೇ ರಾಜಕಾರಣ ಪ್ರವೇಶಿಸಿದ್ದರೂ ದಾವಣಗೆರೆಯಿಂದ ಆಚೆಗೆ ಯಡಿಯೂರಪ್ಪನವರಂತೆ ರಾಜಕೀಯವಾಗಿ ದೊಡ್ಡಮಟ್ಟದಲ್ಲಿ ಬೆಳೆಯಲಿಲ್ಲ, ಹತ್ತಾರು ವರ್ಷಗಳ ಕಾಲ ಕಾಂಗ್ರೆಸ್‌ಗೆ ಖಾಯಂ ಖಜಾಂಚಿಯಾಗಿದ್ದು ದೊಡ್ಡ ಮಟ್ಟದಲ್ಲಿ ಧನ ಸಹಾಯ ಮಾಡಿದ್ದಾರೆ. ಆದರೂ ಅವರಿಗೆ ಸಿಕ್ಕ ಅವಕಾಶಗಳು ಕಡಿಮೆ.
ಸದ್ಯ ಶಾಮನೂರು ಶಿವಶಂಕರಪ್ಪ ಅವರು ವಯಸ್ಸು ಹಾಗೂ ಆರೋಗ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ “ಪೋಷಕ ನಟ’ನ ಪಾತ್ರದಲ್ಲಿದ್ದಾರೆ. ಸದ್ಯ ನಮಗೆ ಮತಗಳನ್ನು ತಂದುಕೊಡುವ ಜನಾಕರ್ಷಕ, ಜನಮನ್ನಣೆ ಪಡೆದಿರುವ “ಹೀರೋ’ ಬೇಕಿದೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದೊಳಗೆ ಕೇಳಿ ಬರುತ್ತಿವೆ. ಈ ದೃಷ್ಟಿಯಿಂದ ನೋಡುವುದಾದರೆ ಕಾಂಗ್ರೆಸ್‌ನಲ್ಲಿ ಲಿಂಗಾಯತರ ಸಂಖ್ಯೆಯೇನೂ ಕಡಿಮೆ ಇಲ್ಲ, ಅದರೆ “ನಾಯಕತ್ವ’ ನೀಡಬಲ್ಲವರು ಬೆರಳೆಣಿಕೆಯಷ್ಟು. ಇದ್ದವರನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈ ಕೊರತೆ ನಿವಾರಣೆಯಾದರೆ ಪಕ್ಷ ಹಾಗೂ ಸಮಾಜ ಎರಡಕ್ಕೂ ಉತ್ತಮ ಭವಿಷ್ಯವಿದೆ. ಈಗ ಅದು ಸಕಾಲ ಎಂಬುದು ಲಿಂಗಾಯತ ನಾಯಕರ ಅನಿಸಿಕೆಯಾಗಿದೆ.
Related Articles
ಈ ಸಾಲಿನಲ್ಲಿ ಬಂದು ನಿಲ್ಲುವವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ. ಇಬ್ಬರಿಗೂ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಖಂಡ್ರೆ ಅವರು ವೀರಶೈವ ಮಹಾಸಭಾದಲ್ಲೂ ಗುರು ತಿಸಿಕೊಂಡವರು. ರಾಜ್ಯವ್ಯಾಪಿ ಸುತ್ತಿದ ಅನುಭವವಿದೆ. ಮಠಗಳು, ಮಠಾಧೀಶರ ಸಂಪರ್ಕವಿದೆ, ಮಾತುಗಾರಿಕೆ ಬಲ್ಲವರು, ಗಟ್ಟಿತನ ರೂಪಿಸಿಕೊಂಡಿದ್ಧಾರೆ. ನಾಯಕತ್ವದ ಗುಣಗಳನ್ನು ಇನ್ನಷ್ಟು ಬೆಳೆಸಿಕೊಂಡರೆ ಸಮುದಾಯದ ನಾಯಕತ್ವ ಪಡೆಯುವ ಸಾಮರ್ಥ್ಯ ಇವರಿಗಿದೆ.
ಇನ್ನು ಎಂ.ಬಿ.ಪಾಟೀಲರು ಪ್ರಭಾವಿ ನಾಯಕ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರೂಪಿಸಿ ಅಲ್ಪಸಂಖ್ಯಾಕ ಸ್ಥಾನಮಾನ, ಮೀಸ ಲಾತಿಗಾಗಿ ಸ್ವತಂತ್ರ ಧರ್ಮ ಹೋರಾಟದ ಮೂಲಕ ಲಿಂಗಾಯತರಲ್ಲಿ ಜಾಗೃತಿ ಮೂಡಲು ಎಂ.ಬಿ.ಪಾಟೀಲರು ಕಾರಣ ಎಂಬ ಮಾತಿದೆ. ಈಗ ಎಂ.ಬಿ.ಪಾಟೀಲರು “ರಾಜತಾಂತ್ರಿಕ’ವಾಗಿ ಹೆಜ್ಜೆ ಇಡಲು ಹೊರಟಿದ್ದಾರೆ ಎನ್ನಲಾಗಿದೆ. ಕಾವೇರಿ ಜಲ ವಿವಾದವೂ ಸಹಿತ ನೀರಾವರಿ ಖಾತೆ ನಿರ್ವಹಿಸಿದ ಬಗ್ಗೆ ಅನುಭವ ಹೊಂದಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ವರಿಷ್ಠರೊಂದಿಗಿನ ಒಳ್ಳೆಯ ಸಂಪರ್ಕ, ಸಂಬಂಧವಿಟ್ಟುಕೊಂಡು ಪ್ರಭಾವಿ ನಾಯಕರಾಗಿದ್ದಾರೆ. ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ಹಲವು ಸಲ ಹೇಳಿಕೊಂಡಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕತ್ವಕ್ಕೆ ಖಂಡ್ರೆ ಮತ್ತು ಎಂ.ಬಿ.ಪಾಟೀಲರ ನಡುವೆ ಪೈಪೋಟಿ ಇದೆ. ಆದರೆ ಪಾಟೀಲರು ಪಕ್ಷಕ್ಕೆ “ಸಂಪನ್ಮೂಲ’ ವ್ಯಕ್ತಿಯಾಗಬಲ್ಲವರಾಗಿರುವುದರಿಂದ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ.
ಒಕ್ಕಲಿಗರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು, ಕುರುಬ ಸಮುದಾಯದ ಮಂದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಗೂ ಲಿಂಗಾಯತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತಮ್ಮ ಸಮಾಜದ ನಾಯಕರಾಗಿ ಒಪ್ಪಿಕೊಂಡಿದ್ಧಾರೆ. ಆದರೆ ಈಗ ಯಡಿಯೂರಪ್ಪ ಅವರ ರಾಜಕೀಯ ಚಿತ್ರಣ ಬದಲಾಗಿರುವುದರಿಂದ ಲಿಂಗಾ ಯತರಿಗೆ ಮತ್ತೂಬ್ಬ ನಾಯಕ ಬೇಕಿದೆ. ಹೀಗಾಗಿ ಸದ್ಯಕ್ಕೆ ಲಿಂಗಾ ಯತರು ಕಾಂಗ್ರೆಸ್ ಕಡೆ ಮುಖ ಮಾಡುವ ಸಾಧ್ಯತೆಗಳಿರು ವುದರಿಂದ ಅವರನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ ಲಿಂಗಾಯತರ ನಾಯಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ದಿಲ್ಲಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ವೀರೇಂದ್ರ ಪಾಟೀಲರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತರುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. 1989ರಲ್ಲಿ 178 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ತಂದುಕೊಟ್ಟ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕ್ರಮದಿಂದಾಗಿ ಲಿಂಗಾಯತ ಸಮಾಜ ಅಂದಿನಿಂದಲೂ ಕಾಂಗ್ರೆಸ್‌ನಿಂದ ದೂರ ಉಳಿದಿದೆ ಎಂಬುದನ್ನು ಕಾಂಗ್ರೆಸಿಗರೇ ಒಪ್ಪುತ್ತಾರೆ.
ಲಿಂಗಾಯತರಿಗೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಯಡಿಯೂರಪ್ಪ ಅನಂತರ ಯಾರು ನಾಯಕರಾಗಬಲ್ಲರು ಎನ್ನುವುದು ಎಲ್ಲ ಪಕ್ಷಗಳಿಗೂ ಕಾಡುವ ಯಕ್ಷ ಪ್ರಶ್ನೆಯಾಗಿದೆ.
-ಎಂ.ಎನ್.ಗುರುಮೂರ್ತಿ