ಗುರುಮಠಕಲ್: ಕಳೆದ ಒಂದು ವರ್ಷದಿಂದ ಯಾವುದೇ ಗೊಂದಲ ಇಲ್ಲದೆ ಗುರುಮಠಕಲ್ ಪುರಸಭೆಯಲ್ಲಿ ಮತ್ತೆ ಮುಖ್ಯಾಧಿಕಾರಿಗಳ ವರ್ಗಾವಣೆ ಗೊಂದಲ ಮತ್ತೆ ಪ್ರಾರಂಭವಾಗಿ ಅಧಿಕಾರಕ್ಕಾಗಿ ಮತ್ತೊಮ್ಮೆ ಇಬ್ಬರ ಅಧಿಕಾರಿಗಳ ಮಧ್ಯೆ ಗುದ್ದಾಟ ಪ್ರಾರಂಭಗೊಂಡಿದೆ.
ಸರಕಾರದ ನಿರ್ದೇಶನದಂತೆ ವರ್ಗಾವಣೆಯಾದ ಈ ಮೊದಲು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀಭಾಯಿ ಜಿಲ್ಲಾಧಿಕಾರಿಗಳ ಆದೇಶದಂತೆ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿಯಾಗಿ ಮಾ.30ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಆದರೆ ಈ ಮೊದಲು ಮುಖ್ಯಾಧಿಕಾರಿಯಾಗಿದ್ದ ಶರಣಪ್ಪ ಮಡಿವಾಳ ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಪುನಃ ಶರಣಪ್ಪ ಮಡಿವಾಳ ಅಧಿಕಾರ ಸ್ವೀಕರಿಸಿದ್ದಾರೆ. ಲಕ್ಷ್ಮೀಭಾಯಿ ಅವರು ಏ.8 ರಂದು ಕೋರ್ಟ್‌ಗೆ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಆದೇಶ ಮೀರಿ ಅಧಿಕಾರ ಸ್ವೀಕರಿಸಿರುವ ಶರಣಪ್ಪ ಮಡಿವಾಳ ಅವರ ವಿರುದ್ಧ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸ ಲಾಗುವುದೆಂದು ಲಕ್ಷ್ಮೀಭಾಯಿ ಪ್ರಕಟಣೆಯಲ್ಲಿ ಹೇಳಿದರು.
ಕಳೆದ ಒಂದು ವರ್ಷದಿಂದ ಮುಖ್ಯಾಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ ಈಗ ಮತ್ತೆ ಅಧಿಕಾರಕ್ಕಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ಗುದ್ದಾಟ ಪ್ರಾರಂಭವಾಗಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದ ಪುರಸಭೆ ಮುಖ್ಯಾಧಿಕಾರಿಗಳ ಖುರ್ಚಿ ಖಾಲಿ ಇರುವುದರಿಂದ ಜನರ ಕೆಲಸಗಳು ಕುಂಠಿತಗೊಂಡಿವೆ. ಅಭಿವೃದ್ದಿ ಕಾಮಗಾರಿಗಳ ವೇಗವೂ ನಿಂತಿದೆ. ತೆರಿಗೆ ವಸೂಲಾತಿ ಇಲ್ಲದಂತಾಗಿದೆ. ಒಟ್ಟಾರೆ ಮುಖ್ಯಾಧಿಕಾರಿ ನಿಯೋಜನೆ ಮಾಡಿ ಕೆಲಸಗಳು ಸುಗಮವಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.