Advertisement

ಯಾರು ಮುಖ್ಯಮಂತ್ರಿ? ಹಿಮಾಚಲ ಪ್ರದೇಶದಲ್ಲಿ ಸಿಎಂ ಹುದ್ದೆ ಬಿಕ್ಕಟ್ಟು

11:36 PM Dec 09, 2022 | Team Udayavani |

ಶಿಮ್ಲಾ/ಅಹ್ಮದಾಬಾದ್‌: ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿರುವ  ಹಿಮಾಚಲ ಪ್ರದೇಶ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ತಲೆನೋವಾಗಿದ್ದು, ಶುಕ್ರವಾರ ಸಂಜೆ ನಡೆದ ಶಾಸಕಾಂಗ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಲಿಲ್ಲ. ಹೀಗಾಗಿ ಈ ವಿಚಾರವನ್ನು ಹೈಕಮಾಂಡ್‌ಗೆ ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಸಿಎಂ ಹುದ್ದೆಯ ಸ್ಪರ್ಧೆಯಲ್ಲಿರುವ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌, ಮಾಜಿ ಅಧ್ಯಕ್ಷ ಸುಖ್‌ವಿಂದರ್‌ ಸಿಂಗ್‌ ಸುಖು ಮತ್ತು ವಿಪಕ್ಷ ನಾಯಕರಾಗಿದ್ದ ಮುಕೇಶ್‌ ಅಗ್ನಿಹೋತ್ರಿ ನಡುವೆ ತೀವ್ರ ಪೈಪೋಟಿ ಉಂಟಾಗಿದೆ. ಈ ಮೂವರು ನಾಯಕರೂ ಶುಕ್ರವಾರ ತಮ್ಮ ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

ಅಲ್ಲದೆ ಶುಕ್ರವಾರ ಸಂಜೆ ಕೇಂದ್ರ ವೀಕ್ಷಕರಾದ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌, ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ಹಿಮಾಚಲ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ರಾಜೇಶ್‌ ಶುಕ್ಲಾ ಅವರ ಉಪಸ್ಥಿತಿಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಸಭೆ ನಡೆಯಿತಾದರೂ ಯಾವುದೇ ನಿರ್ಧಾರ ಹೊರಬರಲಿಲ್ಲ. ಹೀಗಾಗಿ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂಬ ಒಂದು ಸಾಲಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ದಿ| ವೀರಭದ್ರ ಸಿಂಗ್‌ ಅವರ ಹೆಸರಿನಲ್ಲೇ ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದ್ದು, ಅವರ ಕುಟುಂಬಸ್ಥರನ್ನು ಕಡೆಗಣನೆ ಮಾಡುವಂತಿಲ್ಲ ಎಂಬುದು ಪ್ರತಿಭಾ ಸಿಂಗ್‌ ಅವರ ಒತ್ತಾಯ. ಬೆಳಗ್ಗೆಯಿಂದಲೇ ಸ್ಪರ್ಧೆಯಲ್ಲಿ ಇರುವುದಾಗಿ ಹೇಳಿದ್ದ ಸುಖ್‌ವಿಂದರ್‌ ಸಿಂಗ್‌ ಸುಖು ಸಂಜೆ ವೇಳೆಗೆ ವರಸೆ ಬದಲಿಸಿದ್ದು, ಹೈಕಮಾಂಡ್‌ ಹೇಳಿದಂತೆ ಕೇಳುವೆ ಎಂದಿದ್ದಾರೆ.

ಭೂಪೇಂದ್ರ ಪ್ರಮಾಣ ವಚನ ಸಮಾರಂಭಕ್ಕೆ ಬಿಎಸ್‌ವೈ
ಗುಜರಾತ್‌ನಲ್ಲಿ ಹೊಸ ಸರಕಾರ ರಚನೆಯ ಪ್ರಯತ್ನಗಳು ಸದ್ದಿಲ್ಲದೆ ಸಾಗಿವೆ. ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ರಾಜೀನಾಮೆ ನೀಡಿದ್ದು, ಡಿ. 12ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

Advertisement

ಶನಿವಾರ ಬೆಳಗ್ಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಸಭೆ ನಡೆಯಲಿದ್ದು, ಇದರಲ್ಲಿ ಹೊಸ ಶಾಸಕಾಂಗ ನಾಯಕರ ಆಯ್ಕೆ ನಡೆಯಲಿದೆ. ಚುನಾವಣ ವೀಕ್ಷಕರಾಗಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಕರ್ನಾಟಕದ ಹಿರಿಯ ಬಿಜೆಪಿ ನಾಯಕ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅರ್ಜುನ್‌ ಮುಂಡಾ ಶುಕ್ರವಾರ ಸಂಜೆಯೇ ಅಹ್ಮದಾಬಾದ್‌ಗೆ ಆಗಮಿಸಿದ್ದಾರೆ.

ಯಡಿಯೂರಪ್ಪ ಅವರು ಈ ಸಭೆಯಲ್ಲಿ ಭಾಗಿಯಾದ ಬಳಿಕ ಭೂಪೇಂದ್ರ ಪಟೇಲ್‌ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next