Advertisement

ಚೆನ್ನಗಿರಿಯಲ್ಲಿ BJP ಅಭ್ಯರ್ಥಿ ಯಾರು ?

02:56 PM Mar 07, 2023 | Team Udayavani |

„ರಾ.ರವಿಬಾಬು
ದಾವಣಗೆರೆ: ಲೋಕಾಯುಕ್ತ ಪ್ರಕರಣದಲ್ಲಿ ಸ್ವತಃ ಶಾಸಕ ಮಾಡಾಳು ವಿರೂಪಾಕ್ಷಪ್ಪ ಎ 1 ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅಡಕೆ ನಾಡು ಚನ್ನಗಿರಿಯಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿಯ ತಲಾಶ್‌ ನಡೆಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಪ್ರಶಾಂತ್‌ ಕೆಎಸ್‌ಡಿಎಲ್‌ಗೆ ಕೆಮಿಕಲ್ಸ್‌ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆ ಕೊಡಿಸುವುದಾಗಿ 40 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

Advertisement

ಈ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರೇ ಪ್ರಮುಖ ಆರೋಪಿ ಆಗಿರುವುದು ವಿರೂಪಾಕ್ಷಪ್ಪ ಅವರಿಗೆ ಮಾತ್ರವಲ್ಲ, ಬಿಜೆಪಿಗೂ ನುಂಗಲಾರದ ತುತ್ತಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆಯುತ್ತಿರುವಾಗಲೇ ಶಾಸಕರು ಲೋಕಾ ಬಲೆಯಲ್ಲಿ ಸಿಲುಕಿರುವುದು ಚುನಾವಣಾ ದೃಷ್ಟಿಯಿಂದ ಬಿಜೆಪಿಗೆ ಉತ್ತಮ ಬೆಳವಣಿಗೆಯಲ್ಲ. ಹಾಗಾಗಿ ಚನ್ನಗಿರಿಯಲ್ಲಿ ಸೂಕ್ತ, ಪರ್ಯಾಯ ಅಭ್ಯರ್ಥಿಯ ಆಯ್ಕೆಗೆ ಹುಡುಕಾಟ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ 150+ ಸ್ಥಾನಗಳ ಗುರಿ ಇಟ್ಟುಕೊಂಡು ರಾಜ್ಯದಲ್ಲಿ ಅಧಿಕಾರಕ್ಕೇರುವ ರಣೋತ್ಸಾಹದಲ್ಲಿರುವ ಬಿಜೆಪಿಗೆ ಒಂದೊಂದು ಸ್ಥಾನವೂ ಅತಿ ಮುಖ್ಯ. ಇಂತಹ ಸ್ಥಿತಿಯಲ್ಲಿ ಗೆಲ್ಲಬಹುದಾದ ಕ್ಷೇತ್ರದ ಶಾಸಕರೇ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವುದು ಕಮಲ ಪಾಳೆಯ ಕನಲುವಂತೆ ಮಾಡಿದೆ.

ವಿಪಕ್ಷಗಳಿಗೆ ಪ್ರಬಲ ಅಸ್ತ್ರ: ಪ್ರಧಾನಿ ಮೋದಿ ಪದೇ ಪದೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂಬ ಸಂದೇಶ ಸಾರುತ್ತಿದ್ದಾರೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಬಿಜೆಪಿಯ ಶಾಸಕರ ಪುತ್ರ ಕೋಟಿಗಟ್ಟಲೆ ಹಣದೊಂದಿಗೆ ಲೋಕಾಯುಕ್ತರ ಬಲೆಗೆ ಬಿದ್ದಿರುವುದು, ಶಾಸಕ ಮಾಡಾಳು ವಿರೂಪಾಕ್ಷಪ್ಪ ಎ 1 ಆರೋಪಿ ಸ್ಥಾನದಲ್ಲಿ ಇರುವುದರಿಂದ ಬಿಜೆಪಿ ವಿರುದ್ಧ ಮುಗಿ ಬೀಳಲು ವಿಪಕ್ಷ ನಾಯಕರಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ.

ಶಾಸಕ ಮಾಡಾಳು ಪ್ರಕರಣದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್‌ ತಡೆಗೆ ಬಿಜೆಪಿ ಮಾಡಾಳು ವಿರೂಪಾಕ್ಷಪ್ಪ ಅವರಿಂದ ರಾಜೀನಾಮೆ ಪಡೆಯುವ ಇಲ್ಲವೇ ಪಕ್ಷದ ಪ್ರಾಥಮಿಕ ಸ್ಥಾನದಿಂದಲೇ ಹೊರ ಹಾಕುವ ಚಿಂತನೆಯಲ್ಲಿದೆ. ಮಾಡಾಳು ವಿರೂಪಾಕ್ಷಪ್ಪ ಅವರ ಹಿರಿಯ ಪುತ್ರ ವಿ.ಎಂ. ಮಲ್ಲಿಕಾರ್ಜುನ್‌ ವಿರುದ್ಧವೂ ಲೋಕಾಯುಕ್ತದಿಂದ ನೋಟಿಸ್‌ ಜಾರಿಯಾಗಿರುವ ಜತೆಗೆ ಸಾಕಷ್ಟು ಆಸ್ತಿ ಮಾಡಿಕೊಂಡಿರುವ ಆರೋಪ ಕೂಡ ಕೇಳಿ ಬರುತ್ತಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಬಿಜೆಪಿ ಚನ್ನಗಿರಿಯಲ್ಲಿ ಸಮರ್ಥ ಹಾಗೂ ಪರ್ಯಾಯ ಅಭ್ಯರ್ಥಿಗೆ ಹುಡುಕಾಟ ನಡೆಯುತ್ತಿದೆ. ಬಿಜೆಪಿ ಯಾವ ರಾಜಕೀಯ ದಾಳ ಉರುಳಿಸುತ್ತದೋ, ಯಾರನ್ನು ಪರ್ಯಾಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಶಿವಕುಮಾರ್‌ಗೆ ಮತ್ತೆ ಮಣೆ ?

Advertisement

ಹಾಲಿ ಶಾಸಕರಿದ್ದಾಗಲೂ ಬಿಜೆಪಿಯಿಂದ ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌, ವಕೀಲ ಮಂಜಪ್ಪ ಕಾಕನೂರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. 2013ರ ಚುನಾವಣೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಕೆಜೆಪಿ ಜತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎಚ್‌.ಎಸ್‌. ಶಿವಕುಮಾರ್‌ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸೋಲು ಕಂಡಿದ್ದರೂ ಪಕ್ಷ ನಿಷ್ಠೆ ಮೆರೆದಿರುವುದು ಕಮಲ ಪಾಳೆಯದ ನಾಯಕರು ಅವರತ್ತ ಗಮನ ಹರಿಸುವಂತೆ ಮಾಡಿದೆ. ಬಿಜೆಪಿಯಲ್ಲೇ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಶಿವಕುಮಾರ್‌ ತುಮ್ಕೋಸ್‌ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಪ್ರಬಲ ಸಮುದಾಯದ ಹಿನ್ನೆಲೆಯನ್ನೂ ಹೊಂದಿರುವ ಅವರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ವಾದವೂ ಇದೆ. ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ವಕೀಲ ಮಂಜಪ್ಪ ಕಾಕನೂರು ಬಿಜೆಪಿ ಮುಂದಿರುವ ಇನ್ನೊಂದು ಆಯ್ಕೆ.

Advertisement

Udayavani is now on Telegram. Click here to join our channel and stay updated with the latest news.

Next