Advertisement
ಬಾಟಲಿಯಲ್ಲಿ ತುಂಬಿಸಿಟ್ಟ ಒಂದು ಲೀಟರ್ ಕುಡಿಯುವ ನೀರಿನ ಬೆಲೆ ಇಪ್ಪತ್ತು ರೂಪಾಯಿ. ಮನೆ ಬಳಕೆಯ ಟ್ಯಾಂಕರ್ ನೀರಿಗೆ ಸಾವಿರ ರೂಪಾಯಿ. ನೂರಾರು ಎಕರೆ ಕಬ್ಬು, ಭತ್ತ, ಅಡಿಕೆ, ತೆಂಗು, ಬಾಳೆಗಳು ನೀರಿಲ್ಲದೇ ಹಾನಿಯಾದಾಗ ನೀರಿನ ಹನಿಯ ಲೆಕ್ಕ ಲಕ್ಷ….ಕೋಟಿಯಾಗಿ ಕಾಣಿಸುತ್ತದೆ. ಆದರೆ ಯಾವತ್ತೂ ಟೊಮೆಟೊ, ದಾಳಿಂಬೆ, ಮಾವು, ಹೂವು, ಸಜ್ಜೆ ಸಂತೆಗಳಲ್ಲಿ ನೀರಿನ ನಿಖರ ಬೆಲೆ ಕಾಣಿಸುವುದಿಲ್ಲ. ಮಹಾನಗರ ಬೆಂಗಳೂರಿಗೆ ತಿಂಗಳಿಗೆ, ಒಂದೂವರೆ ಟಿಎಮ್‌ಸಿ ಕಾವೇರಿ ನೀರು ಕುಡಿಯಲು ಬೇಕು. ಈ ಪ್ರಮಾಣದ ನೀರಿನಿಂದ 4,500 ಎಕರೆಯಲ್ಲಿ ಭತ್ತ, ಕಬ್ಬು ಬೆಳೆ ಸಾಧ್ಯವೆಂದರೆ ಮಂಡ್ಯದ ರೈತರಿಗೆ ಸರಳಕ್ಕೆ ಅರ್ಥವಾಗುತ್ತದೆ. ಇದೇ ನೀರಿನಿಂದ 11,000 ಎಕರೆಯಲ್ಲಿ ಕಡಲೆ ಬೆಳೆಯಬಹುದೆಂದರೆ ಚಿತ್ರದುರ್ಗಕ್ಕೆ ಸಮೀಪವಿರುವ ಬರದ ನಾಡು ಚಳ್ಳಕೆರೆಯವರಿಗೆ ಹನಿ ನೀರಿನ ಪ್ರಾಮುಖ್ಯತೆ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತದೆ. ಟಿಎಮ್‌ಸಿಯನ್ನು ಹತ್ತು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗಳಲ್ಲಿ ಭರ್ತಿ ಮಾಡಿದರೆ ಬರೋಬ್ಬರಿ 28, 33, 000 ಟ್ಯಾಂಕರ್ ನೀರು. ಜಲ ಜಗತ್ತು ವಾಹನ ದಟ್ಟನೆಯಲ್ಲಿ ಓಡಾಡುವವರಿಗೆ ವಿವರಿಸಿದರೆ ಮಾತ್ರ ಅರ್ಥವಾಗುತ್ತದೆ. ಮಳೆ ಕಾಡಿನಲ್ಲಿ, ನದಿ ಮೂಲದಲ್ಲಿ ಹನಿಯ ಬೆಲೆ ಸರಳ ಲೆಕ್ಕಕ್ಕೆ ಸಿಗುವುದಿಲ್ಲ. ಮರದ ಬೇರು, ಹುಲ್ಲು ಹಾಸು, ಹ್ಯೂಮಸ್ ಹೊದಿಕೆ, ಗೆದ್ದಲ ಗೂಡು, ಕಲ್ಲು ಬಂಡೆ, ಮರಳ ದಿಬ್ಬ ಎಲ್ಲದರ ಕೊಡುಗೆ ಏಣಿಸಿದರೆ ಚಿನ್ನಕ್ಕಿಂತ ಅನ್ನದ ಬೆಲೆಯೇ ದುಬಾರಿಯಲ್ಲವೇ ಅನಿಸುತ್ತದೆ.
Related Articles
Advertisement
ಭೂಮಿಯ ಮಣ್ಣು, ನೀರು ಸಂರಕ್ಷಣೆಯ ಶಕ್ತಿ ಕುಂಠಿತವಾಗಿದೆ. ಭತ್ತ, ಕಬ್ಬಿನಂಥ ಏಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೀಟನಾಶಕಗಳಿಂದ ಕೀಟ, ಪಕ್ಷಿ ಸಂಕುಲಗಳ ಮೇಲೆ ಮಾರಕ ಪರಿಣಾಮವಾಗಿದೆಯೆಂದು ಆಯೋಗ ಹೇಳಿತ್ತು. ರೈತರು ತಮ್ಮ ಆದಾಯದ ಶೇಕಡಾ 30-35 ಭಾಗವನ್ನು ಗೊಬ್ಬರ, ಕೀಟನಾಶಕ ಖರೀದಿಗೆ ಖರ್ಚುಮಾಡುತ್ತಿದ್ದಾರೆ. ಭೂಮಿಯಲ್ಲಿ ನೀರು ಹಿಡಿದುಕೊಳ್ಳಲು ಮರ ಬೆಳೆಸಬೇಕು. ರಾಜ್ಯದ ಮುಕ್ಕಾಲು ಭಾಗ ಶುಷ್ಕ ಹಾಗೂ ಅರೆ ಶುಷ್ಕ ಭೂಮಿಯಾಗಿದ್ದು ಇಲ್ಲಿ ಉಷ್ಣತೆ ಏರುತ್ತಿದೆ. ಬಯಲು ಸೀಮೆಯಲ್ಲಿ ವೃಕ್ಷ ಸಂಪತ್ತು ಹೆಚ್ಚಿಸಿ ಕೃಷಿ ಪರಿಸರದಲ್ಲಿ ಬದಲಾವಣೆಯಾದರೆ ಉತ್ಪಾದನೆ ಹೆಚ್ಚುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೀರು ಆವಿಯಾಗುವುದು ಕಡಿಮೆಯಾಗುತ್ತದೆ. ಒಂದು ಲಕ್ಷ ಹೆಕ್ಟೇರಿಗೆ ನೀರುಣಿಸುವ ಈಗಿರುವ ಯೋಜನೆಯಿಂದ ಎರಡು ಲಕ್ಷ ಹೆಕ್ಟೇರ್‌ಗೆ ನೀರು ನೀಡಬಹುದೆಂದು ವಿವರಿಸಿತ್ತು. ವರದಿ ಏನಾಯ್ತು ? ಹೇಳುವವರಿಲ್ಲ, ಕೇಳುವವರಿಲ್ಲ.
ರಾಜ್ಯದ ಮುಕ್ಕಾಲು ಭಾಗದಲ್ಲಿ ವರ್ಷದ 200-210 ದಿನಗಳ ಕಾಲ ಉಷ್ಣತೆ 35 ಡಿಗ್ರಿ ಸೆಲಿÒಯಸ್ ಇದೆ. ಬೇಸಿಗೆಯ ಕೊನೆಯಲ್ಲಿ 44-45 ಡಿಗ್ರಿಗೆ ಏರುತ್ತದೆ. ಕೇವಲ 60-65 ಮಳೆ ದಿನಗಳು ಈ ಪ್ರದೇಶದ ಜನರ ಬದುಕನ್ನು ಸ್ವಲ್ಪ ತಣ್ಣಗೆ ಉಳಿಸುತ್ತವೆ. ಅಣೆಕಟ್ಟೆಯಲ್ಲಿ ನೀರು ಭರ್ತಿಯಾಗಿ ನೂರಾರು ಕಿಲೋ ಮೀಟರ್ ಕಾಲುವೆಯಲ್ಲಿ ಕೃಷಿ ಭೂಮಿ ತಲುಪಿದರೆ ರೈತರ ಬದುಕಿನಲ್ಲಿ ದೊಡ್ಡ ಸಂಚಲನ ಶುರುವಾಗುತ್ತದೆ. ನೀರಾವರಿ ವಿಸ್ತರಣೆಯಿಂದ ಮಳೆಯನ್ನೇ ನಂಬಿದ ಲಾಗಾಯ್ತಿನ ಬೇಸಾಯಕ್ಕೆ ಬದಲಾಗಿ ಇದೀಗ ಕಾಲುವೆ ನೀರಿನಲ್ಲಿ ಕೃಷಿಯ ಮುಖ ನೋಡುತ್ತಿದ್ದೇವೆ . ಸಮೂಹಸನ್ನಿಯಂತೆ ಅಧಿಕ ನೀರು ಬಳಸುವ ಭತ್ತ, ಕಬ್ಬಿನಂಥ ಏಕಜಾತಿ ಬೆಳೆಗಳು ವಿಸ್ತರಣೆಯಾಗಿವೆ. ಇವಕ್ಕೆ ನೀರುಣಿಸಲು ನಿರ್ಮಿಸಿದ ಕಾಲುವೆಗಳಿಂದ ಅಪಾರ ಪ್ರಮಾಣದ ನೀರು ಆವಿಯಾಗುತ್ತದೆ.
ನೀರಾವರಿ ಕಾಲುವೆಯ ಪಕ್ಕದಲ್ಲಿ ಮರ ಬೆಳೆಸುವುದಕ್ಕೂ, ನದಿ ಸಂರಕ್ಷಣೆಗೂ ಏನು ಸಂಬಂಧ ಎಂಬ ಪ್ರಶ್ನೆ ಏಳಬಹುದು. ನೈಸರ್ಗಿಕವಾಗಿ ಹರಿಯುವ ನೀರನ್ನು ಅಣೆಕಟ್ಟೆಯಲ್ಲಿ ನಿಲ್ಲಿಸಿ ಕಾಲುವೆ ಮೂಲಕ ಕೃಷಿಗೆ ಪಡೆಯುವ ಪ್ರಯತ್ನದಲ್ಲಿ ನೀರಿನ ಬೆಲೆ ಚಿನ್ನವಾಗಿದೆ. ಕೃಷಿಗೆ ನೀರು ನೀಡುವ ಕಾಡು, ಇಂದು ನಾಡಿನ ಜನಕ್ಕೆ ಉರುವಲು, ಉದ್ಯಮಗಳಿಗೆ ಕಚ್ಛಾವಸ್ತು ನೀಡುತ್ತಿದೆ. ನೈಸರ್ಗಿಕ ಕಾಡಿನ ಮೂಲಿಕೆಗಳನ್ನು ನಂಬಿ ನೂರಾರು ಆಯುರ್ವೇದ ಆಸ್ಪತ್ರೆಗಳು ಬದುಕಿವೆ. ನೀರಾವರಿ ನೆಲೆಯಲ್ಲಿ ಮರ ಬೆಳೆಸುವ ಕಾರ್ಯದಿಂದ ನದಿ ಮೂಲದ ಕಾಡಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಉಷ್ಣತೆಯ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಕೃಷಿ, ಜನಜೀವನದಲ್ಲಿ ಬದಲಾವಣೆಯಾಗುತ್ತದೆ. ಮುಖ್ಯವಾಗಿ, ಕೃಷಿ ನೆಲೆಯಲ್ಲಿ ಮರವಿಲ್ಲದ ಪರಿಣಾಮ, ಏಕಬೆಳೆಯ ಕ್ಷೇತ್ರದಲ್ಲಿ ರೋಗ ಬಾಧೆ ಉಲ್ಬಣಿಸಿದೆ, ಕೀಟ ನಿಯಂತ್ರಣಕ್ಕೆ ಪಕ್ಷಿ ಸಂಕುಲವಿಲ್ಲ. ಕೀಟನಾಶಕ ಕಂಪನಿಗಳೇ ಈಗ ಹೊಲ ಗದ್ದೆಗಳನ್ನು ಆಳುತ್ತಿವೆ. ತೀವ್ರ ವಿಷ ಸಿಂಪರಣೆಯಿಂದ ಜಲ ಮಾಲಿನ್ಯ ಮಿತಿ ಮೀರಿದೆ. ಕೃಷಿಕನ ಮಿತ್ರನಾಗಿದ್ದ ಹಾವು ಕಪ್ಪೆಗಳಿಗೂ ಸಂಚಕಾರ ಒದಗಿದೆ. ಹೀಗಾಗಿ ಮರ ಬೆಳೆಸುವ ಮೂಲಕ ನೀರಾವರಿ ನೆಲೆಯಲ್ಲಿ ಪರಿಸರ ಬದಲಾವಣೆಯಾಗುತ್ತದೆ, ನದಿ ರಕ್ಷಣೆಗೆ ಮಹತ್ವದ ಕೊಡುಗೆಯಾಗುತ್ತದೆ.
ಸಾಲಮನ್ನಾ, ರೈತರ ಪಾಲಿಗೆ ಮಹತ್ವದ್ದೆಂದು ಕೆಲವರು ಭಾವಿಸಿದ್ದಾರೆ. ರೈತರಿಗೆ ನೀರುಣಿಸುವ ಯೋಜನಾ ಕ್ಷೇತ್ರಗಳಲ್ಲಿ ಮರಗಳನ್ನು ಬೆಳೆಸುವುದೇ ಎಲ್ಲಕ್ಕಿಂತ ಮುಖ್ಯವೆಂಬುದು ಸರಕಾರಕ್ಕೆ ಮರೆತು ಹೋಗಿದೆ. ಹೀಗಾಗಿ, ವರದಿಗಳ ಮೇಲೆ ವರದಿ ಪಡೆಯುತ್ತ ದಶಕಗಳಿಂದ ನಿದ್ದೆ ಸಾಗಿದೆ. ಆಡಳಿತದ ಮಾತು ಹಾಗಿರಲಿ, ನಮ್ಮ ರೈತರು ಮರದ ಬೆಲೆ ತಿಳಿಯದಷ್ಟು ದಡ್ಡರಲ್ಲ. ಎಕರೆಗೆ ಹತ್ತಾರು ಮರಗಳನ್ನು ಸ್ವಂತ ಭೂಮಿಯಲ್ಲಿ ಬೆಳೆಸಿದರೆ ಹಸಿರು ಕಾಲುವೆಯ ಕನಸು ಕೈಗೂಡಬಹುದು. ನೀರಿಲ್ಲದೇ ಕಬ್ಬು, ಭತ್ತ ಕೈಕೊಟ್ಟಾಗ ಮರಗಳು ಆಸರೆಯಾಗಿ ಕೈಡಿಯಬಹುದು.
ಮುಂದಿನ ಭಾಗ – ನದಿ ಜೀವನದ ಹೊಸ ಅಧ್ಯಾಯಗಳು
– ಶಿವಾನಂದ ಕಳವ