ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎನ್ ಡಿಎ ಮೈತ್ರಿಕೂಟ ಮಾಜಿ ಮಿತ್ರಪಕ್ಷವಾದ ಶಿವಸೇನೆ, ಕೇಂದ್ರ ಸರ್ಕಾರ 370ನೇ ವಿಧಿ ರದ್ದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಲು ಯತ್ನಿಸುತ್ತಿರುವುದಾಗಿ ಆರೋಪಿಸಿದೆ.
ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಕುರಿತು ಬರೆದಿರುವುದಾಗಿ ವರದಿ ತಿಳಿಸಿದೆ. ಯಾವುದೇ ರೀತಿಯ ಒತ್ತಡ ಬಂದರೂ 370ನೇ ವಿಧಿ ರದ್ದು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮತ್ತೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ಮೋದಿ ವಾರಣಾಸಿಯಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಮತ್ತು ಶಾ ಪದೇ, ಪದೇ ಸರ್ಕಾರ ವಾಪಸ್ ಪಡೆಯೋದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಕೇಂದ್ರದ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ನಮಗೂ ತಿಳಿಬೇಕು. ಅಲ್ಲದೇ ಸರ್ಕಾರದ ಈ ನಿರ್ಧಾರದಿಂದ ಎಷ್ಟು ಉಪಯೋಗವಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
ಸಿಎಎ ವಿರುದ್ಧ ಪ್ರತಿಭಟನೆ ಮುಂದುವರಿದಿದೆ, ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ನಿಗೂಢವಾಗಿದೆ. ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರವೂ ಕಾಶ್ಮೀರಿ ಪಂಡಿತರ ಪರಿಸ್ಥಿತಿ ಅದೇ ಸ್ಥಿತಿಯಲ್ಲಿದೆ. 370ನೇ ವಿಧಿ ರದ್ದು ಮಾಡುವ ಮೊದಲು ಹೇಗಿತ್ತೋ ಅದೇ ಪರಿಸ್ಥಿತಿ ಈಗಲೂ ಇದೆ ಎಂದು ಟೀಕಿಸಿದೆ.
ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಸಿಎಎ ಮತ್ತು 370ನೇ ವಿಧಿ ರದ್ದು ಕುರಿತು ಮಾಡಿದ ಮೋಡಿ ಭಾಷಣ ಯಾವುದೇ ರೀತಿಯಲ್ಲೂ ಸಫಲವಾಗಿಲ್ಲ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.