ಬೆಂಗಳೂರು: “ಬಿಜೆಪಿ ಜತೆ ಕೈಜೋಡಿಸದ ಪಕ್ಷ ದೇಶದಲ್ಲಿ ಯಾವುದಿದೆ ತೋರಿಸಿ’ ಎಂದು ಹೇಳುವ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ರಾಜಕೀಯ ಕುತೂಹಲ ಹೆಚ್ಚಿಸಿದ್ದಾರೆ. ಅವರ ಈ ಹೇಳಿಕೆ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ ಸಂಭಾವ್ಯ ರಾಜಕೀಯ ಧ್ರುವೀಕರಣದ ಮುನ್ಸೂಚನೆಯಂತಿದೆ.ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ವಿಪಕ್ಷಗಳನ್ನು ಒಗ್ಗೂಡಿಸುವ ನಿತೀಶ್ ಕುಮಾರ್ ಪ್ರಯತ್ನಕ್ಕೆ ಜೆಡಿಎಸ್ ಬೆಂಬಲ ನೀಡಲಿದೆಯೇ ಹಾಗೂ ಸಮಾನಮನಸ್ಕ ಪಕ್ಷಗಳು ಒಂದಾದರೆ, ಆ ಒಕ್ಕೂಟದ ನೇತೃತ್ವ ವಹಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೈಜೋಡಿಸದಿರುವ ಪಕ್ಷವಿದ್ದರೆ ತೋರಿಸಿ, ಆ ಬಳಿಕ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟು, ಸಮಾನ ಮನಸ್ಕ ಪಕ್ಷಗಳ ನೇತೃತ್ವದ ಬಗ್ಗೆ ಮಾತನಾಡುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಕರ್ನಾಟಕವೂ ಸೇರಿ ಅನೇಕ ರಾಜ್ಯಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನೇಕ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂದರು.