Advertisement

ಕಾಂಗ್ರೆಸ್‌ನಲ್ಲಿ ಯಾರು ಅತೃಪ್ತರಿಲ್ಲ

01:44 PM Jun 13, 2018 | Team Udayavani |

ಮೈಸೂರು: ಕಾಂಗ್ರೆಸ್‌ ಪಕ್ಷದಲ್ಲಿ ಅತೃಪ್ತರು ಯಾರಿಲ್ಲ, ಎಲ್ಲರೂ ತೃಪ್ತರಾಗಿದ್ದಾರೆ. ಜನರ ತೀರ್ಪು ಐದು ವರ್ಷಕ್ಕೆ ಇರುವುದರಿಂದ ಈ ಸರ್ಕಾರ ಐದು ವರ್ಷ ಪೂರೈಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ನಂತರ ಎಂ.ಬಿ.ಪಾಟೀಲ್‌, ಬಿ.ಸಿ.ಪಾಟೀಲ್‌, ಸುಧಾಕರ್‌, ಎಂ.ಟಿ.ಬಿ.ನಾಗರಾಜ್‌, ಸಂಗಮೇಶ್‌, ಈಶ್ವರ ಖಂಡ್ರೆ, ಎಸ್‌.ಆರ್‌.ಪಾಟೀಲ್‌ ಸೇರಿದಂತೆ ಎಲ್ಲರ ಜೊತೆಯೂ ಮಾತನಾಡಿದ್ದೇನೆ, ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಇನ್ನೂ ಯಾರಾದ್ರು ಇದ್ದರೆ ಹೇಳಿ ಅವರ ಜೊತೆಯೂ ಮಾತನಾಡುತ್ತೇನೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಹಣ, ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿಯವರು ನಮ್ಮ ಶಾಸಕರಿಗೆ ದೂರವಾಣಿ ಕರೆ ಮಾಡಿ ಸೆಳೆಯಲು ಪ್ರಯತ್ನ ಮಾಡಿದ್ದಾರೆ. ಅವರು ಆಮಿಷ ಒಡ್ಡಿದ್ದನ್ನು ಬಿ.ಸಿ.ಪಾಟೀಲ್‌, ರಹೀಂಖಾನ್‌ ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಜನಾರ್ದನರೆಡ್ಡಿ, ಶ್ರೀರಾಮುಲು ಬಹಳ ಪ್ರಯತ್ನ ಮಾಡಿದ್ದರು, ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಮ್ಮ ಶಾಸಕರು ಉಳಿದುಕೊಂಡಿದ್ದಾಗ ಜನಾರ್ದನರೆಡ್ಡಿ ಕಡೆಯವರು ಅಲ್ಲಿಗೂ ಬಂದಿದ್ದರು, ಅವರು ಎಷ್ಟೇ ಆಮಿಷ ಒಡ್ಡಿದರು ನಮ್ಮ ಶಾಸಕರ್ಯಾರು ಬಿಜೆಪಿ ಜೊತೆಗೆ ಹೋಗಲ್ಲ ಎಂದರು. 

ಯಡಿಯೂರಪ್ಪ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ಯಾವಾಗ ಏನು ಮಾತನಾಡುತ್ತಾರೋ ಗೊತ್ತಾಗಲ್ಲ. ಇತ್ತೀಚೆಗೆ ನನ್ನ ಮೇಲೆ ಪ್ರೀತಿ ತೋರುತ್ತಿರುವುದಕ್ಕೆ ಅವರಿಗೊಂದು ಥ್ಯಾಂಕ್ಸ್‌ ಎಂದರು.

ವಿಶ್ಲೇಷಣೆ ಮಾಡಲ್ಲ: ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ನನ್ನ ಸೋಲು ಮಾಧ್ಯಮಗಳಿಗೆ ಶಾಕಿಂಗ್‌ ಆಗಿರಬಹುದು, ನನಗೆ ಶಾಕಿಂಗ್‌ ಅಲ್ಲ. ಸೋಲಿನ ಬಗ್ಗೆ ನಾನು ಯಾರ ಜೊತೆಗೂ ಚರ್ಚೆ ಮಾಡಿಲ್ಲ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಹೀಗಾಗಿ ಸೋಲಿನ ವಿಶ್ಲೇಷಣೆ ಮಾಡಲು ಹೋಗಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.

Advertisement

ತಡೆಯಲಿ: ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೆ, ಅವರ ಕೈಯಲ್ಲೇ ಅಧಿಕಾರವಿದೆ ನಿಲ್ಲಿಸಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನಂತು ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಂಡಿಲ್ಲ. ಕುಮಾರಸ್ವಾಮಿ ಅವರ ಕಣ್ಣಿಗೆ ಕಂಡರೆ ನಿಯಂತ್ರಣ ಮಾಡಲಿ ಎಂದರು.

ಬಾದಾಮಿ ಪ್ರವಾಸ ಚೆನ್ನಾಗಿತ್ತು. ಅಲ್ಲಿನ ಎಲ್ಲಾ ಹಳ್ಳಿಗಳಿಗೆ, ಪಂಚಾಯ್ತಿ ಕೇಂದ್ರಗಳಿಗೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿಬಂದಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನ ಕೈ ಹಿಡಿದಿಲ್ಲ. ಬಾದಾಮಿ ಕ್ಷೇತ್ರದ ಜನತೆ ಕೈ ಹಿಡಿದಿದ್ದೀರಿ ನಿಮಗೆ ನಮೋಃ ನಮಃ ಎಂದಿದ್ದೇನೆ. 

ನಕಾರ: ನನಗೆ ಮುಖ್ಯಮಂತ್ರಿ ಹುದ್ದೆ ಬೇಕಿರಲಿಲ್ಲ. ಬೇಡ ಬೇಡ ಎಂದರೂ ಕಾಂಗ್ರೆಸ್‌ನವರೇ ಕೊಟ್ಟರು ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಯಾವತ್ತೂ ಆ ಬಗ್ಗೆ ಅವರ ಜೊತೆಗೆ ಮಾತನಾಡಿಲ್ಲ. ಹಾಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಚುನಾವಣೆ ನಿವೃತ್ತಿ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೆ, ಆ ಮಾತಿಗೆ ಬದ್ಧನಾಗಿದ್ದೇನೆ ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದರು.

ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್‌ ಜೊತೆಗೆ ಮೈತ್ರಿ ಮುಂದುವರಿಯಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಹೇಳಿರುವುದರಿಂದ ನನ್ನದೇನಿದೆ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ರಾಹುಲ್‌ ಗಾಂಧಿ ಅವರ ಜೊತೆಗೆ ಮಾತನಾಡುವುದಾಗಿ ತಿಳಿಸಿದರು. ಇದೇ 14ರಂದು ಸಮ್ಮಿಶ್ರ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ ಕರೆದಿರುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next