“ನಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಕೇಳಲು ಮೋದಿ ಯಾರು? ಮಿಸ್ಟರ್ ಮೋದಿಯವರೇ, ನೀವು ತಲೆಕೆಡಿಸಿಕೊಳ್ಳಬೇಡಿ. ಜನರಿಗೆ ಏನನ್ನು ಕೊಡಬೇಕೆಂದು ನಮಗೆ ಗೊತ್ತು. ನಾಯಕನನ್ನು ಆಯ್ಕೆ ಮಾಡುವುದೂ ಗೊತ್ತು. ದೇಶವನ್ನು ಆಳಲು ಯಾರಾದರೊಬ್ಬರು ಇದ್ದೇ ಇರುತ್ತಾರೆ.’
ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಬಗ್ಗೆ ಪ್ರಶ್ನೆ ಮಾಡಿದ ಬಿಜೆಪಿಗೆ ಈ ರೀತಿಯಾಗಿ ಖಾರ ಮಾತುಗಳಿಂದ ಉತ್ತರಿಸಿದ್ದು ಬೇರಾರೂ ಅಲ್ಲ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ರವಿವಾರ ವಿಶಾಖಪಟ್ಟಣದಲ್ಲಿ ನಡೆದ ಟಿಡಿಪಿ ಬೃಹತ್ ರ್ಯಾಲಿಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ ದೀದಿ, “ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. ಕರ್ನಾಟಕ, ಪ.ಬಂಗಾಳ, ಆಂಧ್ರ, ಒಡಿಶಾ… ಹೀಗೆ ಎಲ್ಲ ರಾಜ್ಯಗಳಿಗೂ ಬೆದರಿಕೆ ಹಾಕುವವರು’ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಮಾತನಾಡಿದ ಸಿಎಂ ಕೇಜ್ರಿವಾಲ್, “ಭಾರತವನ್ನು ಧರ್ಮದ ಆಧಾರದಲ್ಲಿ ಒಡೆಯಬೇಕು ಎಂದು ಪಾಕಿಸ್ತಾನ ಪ್ರಯತ್ನಿಸುತ್ತಲೇ ಬಂದಿತ್ತು. ಆದರೆ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಮಾಡಲು ಸಾಧ್ಯವಾಗದ್ದನ್ನು ಕೇವಲ 5 ವರ್ಷಗಳಲ್ಲಿ ಮೋದಿ-ಅಮಿತ್ ಶಾ ಮಾಡಿ ತೋರಿಸಿದರು. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಿಬಿಟ್ಟರು’ ಎಂದು ಆರೋಪಿಸಿದ್ದಾರೆ. ಜತೆಗೆ, ಪ್ರಧಾನಿ ಮೋದಿ ನೇತೃತ್ವದ ಸರಕಾರವು ಸ್ವಾತಂತ್ರಾéನಂತರ ದೇಶ ಕಂಡ ಅತಿ ಭ್ರಷ್ಟ ಸರಕಾರ ಎಂದೂ ಹೇಳಿದ್ದಾರೆ.