Advertisement
2016ರ ಮೇ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ 18 ಸದಸ್ಯರನ್ನು ಹೊಂದಿರುವ ಜೆಡಿಎಸ್ ಮತ್ತು 8 ಸದಸ್ಯರನ್ನು ಹೊಂದಿರುವ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳುವ ಮೂಲಕ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಜಿಪಂ ಅಧಿಕಾರ ಸಿಗದಂತೆ ನೋಡಿಕೊಂಡಿದ್ದರು. ಜಿಪಂ ಅಧ್ಯಕ್ಷರಾಗಿ ಜೆಡಿಎಸ್‌ನ ನಯಿಮಾ ಸುಲ್ತಾನ, ಉಪಾಧ್ಯಕ್ಷರಾಗಿ ಬಿಜೆಪಿಯ ಜಿ.ನಟರಾಜ್ ಅಧಿಕಾರವಹಿಸಿಕೊಂಡಿದ್ದರು.
Related Articles
Advertisement
ಆದರೂ ಪಟ್ಟು ಬಿಡದ ಜೆಡಿಎಸ್ ಸದಸ್ಯರು, ಡಿಸೆಂಬರ್ 21ರಂದು ಸಾಮಾನ್ಯ ಸಭೆ ಕರೆದಿದ್ದ ನಯಿಮಾಸುಲ್ತಾನ ಅವರನ್ನು ಸಭೆ ನಡೆಸಲು ಬಿಡದೆ ರಾಜೀನಾಮೆ ಪತ್ರ ಬರೆಸಿಕೊಂಡು, 22ರಂದು ತಾವೇ ಬೆಂಗಳೂರಿಗೆ ಕರೆದೊಯ್ದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಡಿಸುವಲ್ಲಿ ಸಫಲರಾಗಿದ್ದರು. ಕಳೆದ ಆಗಸ್ಟ್‌ನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದು ಅಧಿಕಾರದಲ್ಲಿ ಮುಂದುವರಿದಿದ್ದ ಜಿ.ನಟರಾಜ್ ಅವರು ಎರಡನೇ ಬಾರಿಗೆ ರಾಜೀನಾಮೆ ಕೊಟ್ಟಿದ್ದಾರೆ.
ಜನವರಿ 5ರಂದು ಕಡೆಯದಾಗಿ ಜಿಪಂ ಸಾಮಾನ್ಯ ಸಭೆ ನಡೆಸಿ ನಯಿಮಾಸುಲ್ತಾನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದರಿಂದ ತೆರವಾದ ಸ್ಥಾನಕ್ಕೆ ಪಂಚಾಯತ್ ರಾಜ್ ಇಲಾಖೆ ನಿಯಮಾವಳಿಯಂತೆ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಸಹೋದರ ಸಾ.ರಾ.ನಂದೀಶ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸುವವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ವಿರೋಧ: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯಮಟ್ಟದಲ್ಲಿ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿರುವ ಜೊತೆಗೆ ಬಿಬಿಎಂಪಿ, ಮೈಸೂರು ಮಹಾ ನಗರಪಾಲಿಕೆಯಲ್ಲೂ ಮೈತ್ರಿ ಮಾಡಿಕೊಂಡಿರುವಂತೆ ಜಿಪಂನಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಬೇಕು ಎಂಬ ಹೊಸ ದೋಸ್ತಿ ಲೆಕ್ಕಾಚಾರಗಳು ನಡೆದಿವೆ.
ಆದರೆ, ಜಿಪಂನ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಸಿದ್ಧರಿಲ್ಲ. ಬದಲಿಗೆ ಬಿಜೆಪಿ ಜೊತೆಗಿನ ಹೊಂದಾಣಿಕೆಯನ್ನೇ ಮುಂದುವರಿಸಿಕೊಂಡು ಹೋಗುವಂತೆ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳುತ್ತಾರೆ. ಜಿಪಂ ಅಧ್ಯಕ್ಷರ ಅವಧಿ ಇನ್ನು 28 ತಿಂಗಳು ಮಾತ್ರ ಉಳಿದಿದೆ. ಈ ಎಲ್ಲಾ ರಾಜಕೀಯ ಪ್ರಹಸನಗಳು ಮುಗಿದು ಹೊಸದಾಗಿ ಅಧ್ಯಕ್ಷರಾಗುವವರಿಗೆ ಎಷ್ಟು ತಿಂಗಳ ಅಧಿಕಾರ ಅವಧಿ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮೈಸೂರು ಮಹಾ ನಗರಪಾಲಿಕೆಯಂತೆ ಜಿಲ್ಲಾ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ. ಬಿಜೆಪಿ ಜೊತೆಗೇ ಮೈತ್ರಿ ಮುಂದುವರಿಸಿಕೊಂಡು ಹೋಗಲು ಜೆಡಿಎಸ್ ಸದಸ್ಯರೆಲ್ಲರ ಒಮ್ಮತ ಅಭಿಪ್ರಾಯವಿದೆ. ಪಕ್ಷದ ನಾಯಕರಿಗೆ ಈ ಅಂಶವನ್ನು ಮನವರಿಕೆ ಮಾಡಿಕೊಡುತ್ತೇವೆ.-ಸಾ.ರಾ.ನಂದೀಶ್, ಜಿಪಂ ಹಂಗಾಮಿ ಅಧ್ಯಕ್ಷ * ಗಿರೀಶ್ ಹುಣಸೂರು