ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 2 ನೇ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದ್ದು, ಗೃಹ ಖಾತೆಯನ್ನು ಯಾರಿಗೆ ವಹಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ಡಾ.ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ತೆರವಾಗಿರುವ ಗೃಹಖಾತೆಗೆ ಸದ್ಯ ಇಬ್ಬರ ಹೆಸರು ಅಂತಿಮಗೊಂಡಿದೆ ಎಂದು ವರದಿಯಾಗಿದ್ದು , ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಯುವ ಶಾಸಕ,ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹೆಸರನ್ನು ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಸದ್ಯ ಸಹಕಾರ ಸಚಿವ, ಅಬಕಾರಿ ಮತ್ತು ಗೃಹ ಖಾತೆ ಖಾಲಿ ಉಳಿದಿದ್ದು,ನಾಳೆ ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿ ಬರಲಿದ್ದಾರೆ ಎಂದು ಹೇಳಲಾಗಿದೆ.
ಅಕ್ರಮ ಅದಿರು ರಫ್ತು ಆರೋಪದ ನಿಟ್ಟಿನಲ್ಲಿ ಸಂತೋಷ್ ಲಾಡ್ 2013ರ ನವೆಂಬರ್ 23ರಂದು ವಾರ್ತಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮತ್ತೆ ಸಂಪುಟ ವಿಸ್ತರಣೆಯಾದಾಗ ಕಾರ್ಮಿಕ ಸಚಿವರಾಗಿದ್ದರು.
ಲಾಡ್ ವಿರುದ್ಧ ಕೆಲ ಆರೋಪಗಳಿದ್ದ ಹಿನ್ನಲೆಯಲ್ಲಿ ಹಿರಿಯ ಶಾಸಕ, ಅನುಭವಿ ರಾಮಲಿಂಗಾ ರೆಡ್ಡಿ ಅವರನ್ನೇ ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.