ಒಳ್ಳೆಯ ಸರ್ಕಾರಿ ಶಾಲೆಗಳಿರುವ ಹಳ್ಳಿಗಳಲ್ಲಿ ಅಥವಾ ನಾಲ್ಕಾರು ಖಾಸಗಿ ಶಾಲೆಗಳಿರುವ ಮಧ್ಯಮ ಪಟ್ಟಣ ಪ್ರದೇಶದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವುದು ಪೋಷಕರ ಪಾಲಿಗೆ ಯಾವತ್ತಿಗೂ ತಲೆನೋವಿನ ಸಂಗತಿಯೆಂದು ಪರಿಗಣಿತವಾಗಿಲ್ಲ. ಯಾವುದಾದರೊಂದು ಶಾಲೆಗೆ ಸೇರಿಸಿದರಾಯಿತು ಎನ್ನುವುದು ಪೋಷಕರ ನಿಲುವು. ಇರುವ ನಾಲ್ಕಾರು ಶಾಲೆಗಳ ನಡುವೆ ಉತ್ತಮ ಯಾವುದು ಎನ್ನುವುದು ಊರ ಜನರ ಮಾತಿನ ಮೂಲಕವೇ ನಿರ್ಧಾರವಾಗಿರುತ್ತದೆ. ಆದರೆ, ಮಧ್ಯಮ ವರ್ಗದವರ ಪಾಲಿಗೆ ಬೆಂಗಳೂರಿನಂತಹ ಮಹಾನಗರದಲ್ಲಿ ಮಗುವಿಗೆ ಸೂಕ್ತವಾದ ಶಾಲೆಯೊಂದನ್ನು ಅಂತಿಮಗೊಳಿಸುವಷ್ಟು ದೊಡ್ಡ ತಲೆನೋವಿನ ವಿಷಯ ಇನ್ನೊಂದಿಲ್ಲ.
ಅತಿ ಶುಲ್ಕದ ಹೆದರಿಕೆ ಕಾರಣದಿಂದ ಬಡ ಪೋಷಕರು ಸರ್ಕಾರಿ ಅಥವಾ ಬಿಬಿಎಂಪಿ ಶಾಲೆಗಳನ್ನು ಬಿಟ್ಟು ಬೇರೆ ಶಾಲೆಗಳ ಕ್ಯಾಂಪಸ್‌ನತ್ತ ತಲೆಹಾಕಿ ಮಲಗುವುದಿಲ್ಲ. ಶಿಕ್ಷಣ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ 25 ಪ್ರತಿಶತ ಸೀಟು ಬಡಮಕ್ಕಳಿಗೆ ದೊರೆಯಲಾರಂಭಿಸಿದ ಬಳಿಕ, ಈ ನಿಲುವಿನಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಶ್ರೀಮಂತರಿಗೆಂದೇ ಮೀಸಲಾದ ಅಂತಾರಾಷ್ಟ್ರೀಯ ಶಾಲೆಗಳಿವೆ. ಕುಳಿತಲ್ಲೇ ಲಕ್ಷ ಲಕ್ಷ ಡೊನೇಷನ್ ನೀಡಿದರೆ ಸುಲಭವಾಗಿ ಸೀಟು ಸಿಗುತ್ತದೆ. ಆದರೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿರುವುದು ಮಧ್ಯಮ ವರ್ಗದ ಕುಟುಂಬಗಳು!
ಈ ಕುಟುಂಬಗಳ ಹೆತ್ತವರಿಗೆ ತಮ್ಮ ಮಕ್ಕಳಿಗೆ ಆದರ್ಶಯುತ ಶಿಕ್ಷಣ ದೊರಕಬೇಕು; ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆದ್ಯತೆ ದೊರೆಯಬೇಕು; ಆಂಗ್ಲ ಮಾಧ್ಯಮವಿರಬೇಕು; ಶಿಕ್ಷಕರು ಹೆಚ್ಚಿನ ಅರ್ಹತೆ ಹೊಂದಿರಬೇಕು… ಹೀಗೆ ನಾನಾ ಕನಸುಗಳಿರುತ್ತವೆ. ಮನೆಯ ಪಕ್ಕದಲ್ಲೇ ಶಾಲೆಯಿದ್ದರೆ ಉತ್ತಮ ಎಂಬುದು ಇನ್ನೊಂದು ಕನಸು. ತಮ್ಮೆಲ್ಲಾ ಕನಸಿನ ಶಾಲೆ ಹುಡುಕುವುದೆಂದರೆ ಪೋಷಕರಿಗೆ ದೊಡ್ಡ ತಲೆ ನೋವಿನ ಕೆಲಸ. ಪ್ರಿಧಿ-ಕೆಜಿ, ಎಲ್‌ಕೆಜಿಗೆ ಪ್ರವೇಶ ನೀಡಲು ಮಕ್ಕಳಿಗೆ ಕನಿಷ್ಠ ಎರಡು ವರ್ಷ ಹತ್ತು ತಿಂಗಳುಗಳಾದರೂ ಆಗಿರಬೇಕು. ಆದರೆ ಬಹುತೇಕ ಪೋಷಕರು ತಮ್ಮ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ ಸೂಕ್ತ ಶಾಲೆಗಾಗಿ ಹುಡುಕಾಟ ಆರಂಭಿಸುತ್ತಾರೆ. ಶಾಲೆಗಳು ಕೂಡಾ ಅಷ್ಟೇ. ಕನಿಷ್ಠ ಆರು ತಿಂಗಳ ಮೊದಲೇ ಪ್ರವೇಶ ಮುಗಿಸುತ್ತವೆ.
ಈ ಶಾಲೆ ಹುಡುಕಾಟದ ಅನುಭವವನ್ನು, ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ಅವುಗಳನ್ನು ಅನುಭವಿಸಿದವರಿಗೆ ಮಾತ್ರ ಈ ಶಾಲೆ ಹುಡುಕಾಟದ ತಳಮಳ ಅರ್ಥವಾಗಬಹುದು. ಮಗುವಿಗೆ ಇನ್ನೂ ಒಂದು ವರ್ಷ ತುಂಬುವ ಮುನ್ನವೇ ಪೋಷಕರ ನಡುವೆ ಸಣ್ಣದೊಂದು ಭಿನ್ನಾಭಿಪ್ರಾಯಕ್ಕೆ ಈ ಶಾಲಾ ಆಯ್ಕೆಯ ಗೊಂದಲ ಕಾರಣವಾಗುತ್ತದೆ. ಅದರಲ್ಲೂ ಉದ್ಯೋಗಸ್ಥ ದಂಪತಿಗೆ ಶಾಲೆ ಹುಡುಕಾಟ ಎಲ್ಲಿ ನಡೆಸುವುದೆಂಬುದೇ ಮೊದಲ ಗೊಂದಲ. ಮಕ್ಕಳ ಶಾಲೆಯ ಬಳಿಗೆ ಮನೆಯನ್ನು ಸ್ಥಳಾಂತರಿಸುವುದೋ ಅಥವಾ ಅಮ್ಮನ ಕಚೇರಿ ಸಮೀಪ ಮಗುವಿಗೆ ಶಾಲೆ ಹುಡುಕುವುದೋ ಎಂಬುದು ಬಹುದೊಡ್ಡ ಗೊಂದಲದ ಪ್ರಶ್ನೆ. ಇನ್ನು ಯಾವ ಬೋರ್ಡ್‌ನ ಶಾಲೆ ಎಂಬುದನ್ನು ನಿರ್ಣಯಿಸುವುದು ಮತ್ತೂಂದು ಸವಾಲು. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಸಿ, ಐಸಿಎಸ್‌ಸಿ ಹೀಗೆ ಯಾವುದು ಮಗುವಿಗೆ ಒಳಿತು ಎಂಬುದರ ಬಗ್ಗೆ ಒಂದಿಷ್ಟು ಚರ್ಚೆ; ಗೊಂದಲ. ರಾಜ್ಯ ಪಠ್ಯಕ್ರಮ ಮಕ್ಕಳಿಗೆ ಉನ್ನತ ಶಿಕ್ಷಣ ಹಂತದಲ್ಲಿ ಸಮಸ್ಯೆ ತಂದೊಡ್ಡಬಹುದು ಎಂಬ ವ್ಯಾಖ್ಯಾನಗಳು ಹೆತ್ತವರ ತಲೆಕೆಡಿಸಿರುತ್ತದೆ. ಆದರೆ ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮವಾದರೆ, ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅವು ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದೆ ಬೀಳಬಹುದು ಎಂಬ ಸಂಶಯ ಕಾಡುತ್ತದೆ.
ಈ ಎಲ್ಲ ಗೊಂದಲಗಳಿಗೆ ಉತ್ತರ ಹುಡುಕಿಕೊಂಡು ಶಾಲೆಗಳತ್ತ ತೆರಳಿದರೆ ಅಲ್ಲಿ ಇನ್ನೊಂದಿಷ್ಟು ಸಮಸ್ಯೆಗಳು. ಶುಲ್ಕ ಕೇಳಿದರೆ ಹೆತ್ತವರ ಮೈನಲ್ಲಿ ಬೆವರಿಳಿಯುತ್ತದೆ. ಇನ್ನು ಶಾಲೆಯ ಸೆಕ್ಯುರಿಟಿ ಗಾರ್ಡ್‌ನಿಂದ ಹಿಡಿದು, ಆಯಾವರೆಗೆ ಎಲ್ಲರೂ ಹೆತ್ತವರನ್ನು ಹೆದರಿಸುವವರೇ. ನಿಮ್ಮ ಮಕ್ಕಳು ಹಾಗಿರಬೇಕು, ಹೀಗಿರಬೇಕು ಎಂಬ ವರ್ತನಾವಿಧಾನಗಳ ದೊಡ್ಡ ಪಟ್ಟಿಯನ್ನೇ ಅವರು ಶಾಲೆಗೆ ಅರ್ಜಿ ಹಾಕುವ ಮುನ್ನವೇ ನೀಡುತ್ತಾರೆ. ಅವರ ಹಾವಭಾವ ನೋಡಿ ಪುಟ್ಟ ಮಕ್ಕಳು ಬೆಚ್ಚಿ ಬೀಳುವುದೊಂದು ಬಾಕಿ ಇರುತ್ತದೆ. ಹೀಗೆ, ಸಾಗುತ್ತದೆ ಈ ಶಾಲೆ ಹುಡುಕಾಟದ ಕಥೆ. ಇನ್ನು ಮಕ್ಕಳಿಗೆ ಪ್ರವೇಶ ಪರೀಕ್ಷೆ, ಸಂದರ್ಶನಗಳ ಕಾಟ ಕೊಡದ ಶಾಲೆಗಳಿಲ್ಲ. ಎರಡು ವರ್ಷ ಹತ್ತು ತಿಂಗಳ ಮಗುವಿನ ಬಳಿ ಅಮೆರಿಕ ಅಧ್ಯಕ್ಷನ ಹೆಸರು ಕೇಳಿ, ಉತ್ತರ ಸಿಗದಿದ್ದಾಗ ಮಗುವಿಗೆ ಜನರಲ್ ನಾಲೆಡ್ಜ್ ಸ್ವಲ್ಪ ಕಡಿಮೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಹೇಳುವಂತಾದರೆ ಹೆತ್ತವರ ಕಷ್ಟ ದೇವರಿಗೆ ಪ್ರೀತಿ!
ಇನ್ನು ಶಾಲಾ ಪ್ರವೇಶಕ್ಕೆ ನಿಗದಿಪಡಿಸಿರುವ ವಯೋಮಾನ ಹಾಗೂ ಇತರ ಶರತ್ತುಗಳ ಕಥೆ ಇನ್ನೊಂದು ತೆರನಾದದ್ದು. ಪ್ರವೇಶ ನೀಡಲು ಒಂದೊಂದು ಶಾಲೆಯಲ್ಲಿ ಒಂದೊಂದು ರೀತಿಯ ವಯೋಮಾನ ನಿಗದಿಪಡಿಸಲಾಗಿರುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಸರ್ಕಾರಿ ಆದೇಶಗಳಿಗೆ ಯಾವುದೇ ಬೆಲೆ ಇರುವುದಿಲ್ಲ. ಶಾಲೆಗಳು ನಿಗದಿ ಪಡಿಸಿರುವ ವಯೋಮಾನಕ್ಕಿಂತ ಒಂದು ದಿನ ಕಡಿಮೆಯಾದರೂ ಪ್ರವೇಶ ನಿರಾಕರಿಸಲಾಗುತ್ತದೆ. ಕೆಲವು ಶಾಲೆಗಳಲ್ಲಿ ಮುಖ್ಯಮಂತ್ರಿ ಕಚೇರಿಯ ಪತ್ರ ನೀಡಿದರೂ ಪ್ರವೇಶ ದೊರೆಯುವುದಿಲ್ಲ. ಆದರೆ ಶಾಲೆಯ ಯಕಶ್ಚಿತ್ ಗುಮಾಸ್ತನಿಗೆ ಒಂದಿಷ್ಟು ಸಾವಿರ ನೀಡಿ ಕೈ ಬೆಚ್ಚಗೆ ಮಾಡಿದರೆ ಸೀಟು ದೊರೆಯುತ್ತದೆ. ಸೆಲೆಕ್ಷನ್ ಲಿಸ್ಟ್ ಬದಲಾಯಿಸುವ ಸಾಮರ್ಥ್ಯ ಇರುವುದು ಈ ಗುಮಾಸ್ತರಿಗೆ ಮಾತ್ರ! “ಕಾರ್ಯವಾಸಿ ಕತ್ತೆ ಕಾಲು’ ಎನ್ನುವ ಅನುಭವ ಹೆತ್ತವರಿಗೆ.
ಸರ್ಕಾರವೇನೋ ಸಮಾನ ಪ್ರವೇಶ ನೀತಿ, ಪ್ರವೇಶ ಕ್ಯಾಲೆಂಡರ್ ಹೀಗೆ ನಾನಾ ಕ್ರಮಗಳ ಮೂಲಕ ಖಾಸಗಿ ಶಾಲೆಗಳಲ್ಲಿನ ಪ್ರವೇಶಾತಿಯನ್ನು ನಿಯಂತ್ರಿಸಲು ಯತ್ನಿಸಿದೆ. ಆದರೆ ಅದೆಲ್ಲಾ ವಾಸ್ತವದಲ್ಲಿ ಏನೂ ಪರಿಣಾಮಕಾರಿಯಾಗಿಲ್ಲ. ಒಟ್ಟಾರೆ ಹತ್ತಾರು ಶಾಲೆಗಳ ಬಾಗಿಲು ಬಡಿದು, ಸಾವಿರಾರು ರೂಪಾಯಿ ಖರ್ಚು ಮಾಡಿದ ಬಳಿಕ ಸಾಮಾನ್ಯ ಶಾಲೆಯೊಂದರಲ್ಲಿ ಕಷ್ಟಪಟ್ಟು ಸೀಟು ಗಿಟ್ಟಿಸಿಕೊಂಡಾಗ ಹೆತ್ತವರಿಗೆ ಏಳು ಸಮುದ್ರದ ನೀರು ಕುಡಿದ ಅನುಭವ. ಇಷ್ಟೆಲ್ಲಾ ಕಷ್ಟ ಪಟ್ಟರೂ ಕೊನೆಗೆ ಶಾಲೆಯಲ್ಲಿ ಮಕ್ಕಳಿಗೆ ಕಲಿಸುವುದು ಇಷ್ಟೇ. ಮತ್ತೂಂದು ಸುತ್ತಿನಲ್ಲಿ ಟ್ಯೂಷನ್, ಹೋಮ್‌ವರ್ಕ್ ಹೀಗೆ ಸಾಗುತ್ತದೆ ಹೆತ್ತವರ ಕಷ್ಟ. ಮಕ್ಕಳಿಗೆ ಯಾಕಾದರೂ ಶಾಲೆಗೆ ಹೋಗುವ ವಯಸ್ಸಾಯಿತೋ ಅನ್ನುವ ಭಾವನೆ ಮೂಡದಿದ್ದರೆ ಕೇಳಿ!
– ಎಸ್. ಎಂ.