ಚಂಡೀಗಢ: ದಿಢೀರ್ ಬೆಳವಣಿಗೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಯನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಅಮರೀಂದರ್ ಸಿಂಗ್ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ.
ಇದೀಗ ಪಂಜಾಬ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಸಿಎಂ ರೇಸ್ ನಲ್ಲಿ ಈಗಾಗಲೇ ಹಲವರ ಹೆಸರು ಕೇಳಿಬರುತ್ತಿದೆ. ವರ್ಷದೊಳಗೆ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಕಾರಣ ಸಿಎಂ ಆಯ್ಕೆ ಮಹತ್ವ ಪಡೆದಿದೆ.
ಪಕ್ಷದ ಮೂಲಗಳ ಪ್ರಕಾರ, ಚಂಡೀಗಢದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ?
ಮೂಲಗಳ ಪ್ರಕಾರ, ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಾಖರ್, ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಅಂಬಿಕಾ ಸೋನಿ, ರಾಜಿಂದರ್ ಸಿಂಗ್ ಬಾಜ್ವಾ, ಬ್ರಹ್ಮ ಮೊಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಲ್ಜಿತ್ ಸಿಂಗ್ ನಾಗ್ರಾ ಮತ್ತು ಸಂಸದ ಪರ್ತಾಪ್ ಸಿಂಗ್ ಬಾಜ್ವಾ ಸೇರಿದಂತೆ ಇತರ ಹೆಸರುಗಳು ರೇಸ್ ನಲ್ಲಿದೆ.