ಪಣಜಿ: ಗೋವಾ ರಾಜ್ಯದಲ್ಲಿ ಸದ್ಯ ಗೋಂಯಚೆ ಸಾಹೇಬ್ ಯಾರು ಎಂಬುದು ಗೋವಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಗೊಂಯಚೆ ಸಾಹೆಬ್ ಎಂದೇ ಕರೆಯಲ್ಪಡುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರ ಬಗ್ಗೆ ಪ್ರಾಚಾರ್ಯ ಸುಭಾಷ ವೇಲಿಂಗ್‍ಕರ್ ನೀಡಿರುವ ವಿವಾದಾತ್ಮಕ ಹೇಳಿಕೆ ಸದ್ಯ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮಾತ್ರ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದೆಯೇ ವಿವಾದದಿಂದ ದೂರ ಉಳಿದಂತೆ ಕಂಡುಬರುತ್ತಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಏಕತೆ ಕಾಪಾಡಲು ಗೋವಾ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಇದು ರಾಜ್ಯಕ್ಕೆ ಬೇಕಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದೇ ಪಕ್ಷಪಾತ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಗೋವಾದ ಸಾಂಸ್ಕೃತಿಕ ವೈಭವವನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ಏಕತೆಯನ್ನು ಅಖಂಡವಾಗಿರಿಸಲು ಗೋವಾದಲ್ಲಿ ಖಾಯ್ದೆ ಅಸ್ತಿತ್ವದಲ್ಲಿದೆ. ಗೋವಾ ರಾಜ್ಯವು ಏಕತೆಗೆ ಹೆಸರುವಾಸಿಯಾಗಿದೆ. ಅಲ್ಲದೆಯೇ ರಾಜ್ಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಗೋವಾ ಸರ್ಕಾರವೂ ಅದೇ ರೀತಿಯಲ್ಲಿ ಜನರಿಗಾಗಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಪ್ರಾಚಾರ್ಯ ಸುಭಾಷ್ ವೇಲಿಂಗ್‍ಕರ್, ”ಪರಶುರಾಮ ಗೋವಾದ ರಕ್ಷಕರಾಗಿದ್ದಾರೆ. ಸಂತ ಫ್ರಾನ್ಸಿಸ್ ಕ್ಸೇವಿಯರ್ ರವರನ್ನು ಗೋವಾದ ಸಾಹೇಬ್ ಎಂದು ಕರೆಯುವುದು ತಪ್ಪು” ಎಂಬ ಹೇಳಿಕೆಯನ್ನು ನೀಡಿದ್ದರು.
”ಗೋವಾದ ಕ್ಲಿ ಹೋಲಿ ಇಂಕ್ವಿಜೀಶನ್ ಎಂಬ ಕ್ರೂರ ಪದ್ಧತಿಯನ್ನು ತರಲು ಫ್ರಾನ್ಸಿಸ್ ಕ್ಸೇವಿಯರ್ ರವರು ಸಂಪೂರ್ಣ ಜವಾಬ್ದಾರರಾಗಿದ್ದಾರೆ. ಗೋವಾದಲ್ಲಿ ಇನ್ನೂರೈವತ್ತು ವರ್ಷಗಳ ಕಾಲ ಇಂತಹ ದೌರ್ಜನ್ಯವೆಸಗಿರುವುದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಇದರಿಂದಾಗಿ ಮೇ 3 ರಂದು ಗೋವಾ ಪೈಲ್ಸ್ ಅನ್ನು ಗೋವಾದ ಜನರ ಮುಂದೆ ಇಡಲಾಗುವುದು” ಎಂದು ಸುಭಾಷ ವೇಲಿಂಗ್‍ಕರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರಿ ಚರ್ಚೆ ಮತ್ತು ವಿರೋಧಕ್ಕೂ ಕಾರಣವಾಗಿದೆ.