ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯದ ಕುರಿತು ಪ್ರಸಕ್ತ ಚುನಾವಣೆಯಲ್ಲಿ ಯಾರೂ ಪ್ರಸ್ತಾಪಿಸಿಲ್ಲ. ಆದರೂ ಸಚಿವ ಡಿ.ಕೆ. ಶಿವಕುಮಾರ್ ಪದೇಪದೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಕ್ಷಮೆ ಕೇಳುವ ಮೂಲಕ ನಮ್ಮನ್ನು ಕೆಣಕುತ್ತಿದ್ದಾರೆ.
ಚುನಾವಣೆ ಮುಗಿದ ಬಳಿಕ ಇವರ ಹೇಳಿಕೆ ಹಿಂದಿರುವ ಹುನ್ನಾರ ಹಾಗೂ ಡಿಕೆಶಿ ಬಣ್ಣ ಬಯಲು ಮಾಡುತ್ತೇನೆ ಎಂದು ಗೃಹ ಸಚಿವ ಡಾ| ಎಂ.ಬಿ. ಪಾಟೀಲ ಗುಡುಗಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಆದರೂ ಡಿ.ಕೆ.ಶಿವಕುಮಾರ್ ಮಾತ್ರ ಅನಗತ್ಯವಾಗಿ ಕಾಂಗ್ರೆಸ್ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕಾರಣ, ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆಂದು ಬಹಿರಂಗವಾಗಿ ಹೇಳುತ್ತಿದ್ದಾರೆ.
ಒಕ್ಕಲಿಗರ ಪ್ರಾಬಲ್ಯವಿರುವ ಮೈಸೂರು ಭಾಗದಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳಲು ಹಾಗೂ ಕರಾವಳಿ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವುದಕ್ಕೆ ಮೊದಲು ಕ್ಷಮೆ ಕೇಳಲಿ ಎಂದರು.
ತಮ್ಮನ್ನು ತಾವು ಸಾಮಾನ್ಯ ಕಾರ್ಯಕರ್ತ ಎಂದು ಕರೆದುಕೊಳ್ಳುವ ಡಿ.ಕೆ.ಶಿವಕುಮಾರ್‌ಗೆ ನಮ್ಮ ಧರ್ಮದ ಕುರಿತು ಮಾತನಾಡುವ ಅಧಿಕಾರ ನೀಡಿದವರು ಯಾರು? ಚುನಾವಣೆಯಲ್ಲಿ ಪಕ್ಷಕ್ಕೆ ಮುಜುಗರ ಆಗಬಾರದೆಂದು ಸುಮ್ಮನಿದ್ದೇನೆ. ಅವರ ಕ್ಷಮಾಪಣೆ ಹುನ್ನಾರದ ಹಿಂದೆ ಯಾರಿದ್ದಾರೆ ಎಂದು ಬಹಿರಂಗ ಮಾಡುತ್ತೇನೆ ಎಂದರು.
ಡಿಕೆಶಿ ವರ್ತನೆ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಗಮನಕ್ಕೆ ತರುತ್ತೇನೆ. ಸದ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು ಚುನಾವಣೆವರೆಗೆ ಸುಮ್ಮನಿರುವಂತೆ ಸೂಚಿಸಿರುವ ಕಾರಣ ಈ ಕುರಿತು ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದರು.