Advertisement

ಕಂಪ್ಲಿಯಲ್ಲಿ ಯಾರಿಗೆ ಮನ್ನಣೆ ?

01:02 PM Apr 10, 2018 | |

ಕಂಪ್ಲಿ: ಕ್ಷೇತ್ರ ಪುನರ್‌ವಿಂಗಡಣೆಯಿಂದ ಹೊಸದಾಗಿ ರಚನೆಯಾದ ಕಂಪ್ಲಿ ಎಸ್‌ಟಿ ಮೀಸಲು ಕ್ಷೇತ್ರ. ಟಿ.ಎಚ್‌.ಸುರೇಶ್‌ ಬಾಬು ಅವರು ಕ್ಷೇತ್ರದ ಮೊದಲ ಶಾಸಕ. ದಶಕದಿಂದ ಕ್ಷೇತ್ರದ ಶಾಸಕರಾಗಿದ್ದ ಸುರೇಶ್‌ ಬಾಬು, ಒಂದಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರೂ ಇಂದಿಗೂ ಕಂಪ್ಲಿ ಪಟ್ಟಣ ಸೇರಿ ಹಲವಾರು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ನೀಗುತ್ತಿಲ್ಲ. ಪಕ್ಕದಲ್ಲೇ ತುಂಗಭದ್ರಾ ನದಿ ಹರಿದರೂ ಶಾಶ್ವತ ಪರಿಹಾರ ಒದಗಿಸಲಾಗುತ್ತಿಲ್ಲ. ಪ್ಲೋರೈಡ್‌ಯುಕ್ತ ನೀರನ್ನೇ ಜನ ಸೇವಿಸುತ್ತಿದ್ದು, ಕೆಲ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಕೆರೆ ನಿರ್ಮಿಸಿದ್ದರಿಂದ ಇಂದಿಗೂ ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಲ್ಲ. ಹೀಗೆ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದರೂ ಮೂರನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗುತ್ತಿರುವ ಸುರೇಶ್‌ಬಾಬು ಹ್ಯಾಟ್ರಿಕ್‌ ಸಾಧನೆಗಾಗಿ ಮತದಾರರ ಮನವೊಲಿಸುತ್ತಿದ್ದಾರೆ.

Advertisement

ಕಂಪ್ಲಿ ಪಟ್ಟಣದ ಬಹುಬೇಡಿಕೆಯಾಗಿದ್ದ ಐತಿಹಾಸಿಕ ಸೋಮಪ್ಪನ ಕೆರೆ ಅಭಿವೃದ್ಧಿ ಪಡಿಸುವುದಾಗಿ ಕೆರೆ ಸುತ್ತಲೂ
ವಾಸವಾಗಿದ್ದ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಕೆರೆ ಸರ್ವೇಮಾಡಿ, ಎಚ್‌ಕೆಆರ್‌ಡಿಬಿಯಿಂದ 6 ಕೋಟಿ ರೂ. ಅನುದಾನವೂ ಬಿಡುಗಡೆಯಾಗಿತ್ತು. ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ, ಸುತ್ತಲೂ ಫುಟ್‌ಪಾತ್‌ ನಿರ್ಮಿಸುವುದಾಗಿ ತಿಳಿಸಲಾಗಿತ್ತು. ಆದರೆ, ವರ್ಷಗಳು ಉರುಳಿದರೂ ಕೆರೆ ಅಭಿವೃದ್ಧಿಯಾಗಿಲ್ಲ. ಅನುದಾನ ಏನಾಗಿದೆ ಎಂಬುದು ತಿಳಿಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಇನ್ನು ಪಟ್ಟಣ ಸೇರಿ ಕ್ಷೇತ್ರದಾದ್ಯಂತ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಗೋನಾಳು, ಚಿಕ್ಕಜಾಯಿಗನೂರು, ಜವುಕು, ರೆಗುಲೇಟರ್‌ ಕ್ಯಾಂಪ್‌, ಉಪ್ಪಾರಹಳ್ಳಿ ಗ್ರಾಮಗಳಲ್ಲಿ ಇಂದಿಗೂ ಜನರಿಗೆ ಫ್ಲೊರೈಡ್‌ಯುಕ್ತ ನೀರೇ ಗತಿಯಾಗಿದೆ. ಕಂಪ್ಲಿ ಪಟ್ಟಣದಲ್ಲೂ ಕುಡಿವ ನೀರಿನ ಸಮಸ್ಯೆಯಿದೆ. ಉಪ್ಪಾರಳ್ಳಿ, ಜವುಕು, ದೇವಲಾಪುರ, ಎಮ್ಮಿಗನೂರು ಗ್ರಾಮಗಳಲ್ಲಿ ಬಹುಗ್ರಾಮ ಯೋಜನೆಯಡಿ ನಿರ್ಮಿಸಲಾಗಿರುವ ಕೆರೆಗಳು ಅವೈಜ್ಞಾನಿಕತೆಯಿಂದ ಕೂಡಿವೆ.

ಕೆಲ ಕೆರೆಗಳಲ್ಲಿ ನೀರು ನಿಲ್ಲದೆ ಸೋರಿಕೆಯಾದರೆ, ಇನ್ನು ಕೆಲವದರಲ್ಲಿ ಪಕ್ಕದ ಎಲ್‌ಎಲ್‌ಸಿ, ಎಚ್‌ಎಲ್‌ಸಿ ಕಾಲುವೆಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ಶಾಸಕರ ಗಮನಕ್ಕಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಿಲ್ಲ. ಸಮಯಕ್ಕೆ ಬಸ್‌ಗಳು ಸಹ ಓಡುತ್ತಿಲ್ಲ. ಅಲ್ಲದೇ, ಕೆಲ ಗ್ರಾಮಗಳಲ್ಲಿ ಶಾಸಕರನ್ನು ಒಮ್ಮೆಯೂ ನೋಡಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನೆ. 

ಕ್ಷೇತ್ರದ ಬೆಸ್ಟ್‌ ಏನು?
ಕಂಪ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆರಂಭಿಸಲಾಗಿದ್ದು, ಕಟ್ಟಡದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಇನ್ನು ಎರ್ರಂಗಳಿ ಹತ್ತಿರ ಮೊರಾರ್ಜಿ ವಸತಿ ಶಾಲೆ, ಕುರುಗೋಡಿನಲ್ಲಿ ಅಗ್ನಿಶಾಮಕ ಠಾಣೆ, ರಾಮಸಾಗರ, ಮುಷ್ಟಗಟ್ಟೆ ಸಿದ್ದಮ್ಮನಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಕೆಲವು ನೂತನ ಪ್ರೌಢಶಾಲೆ ಮಂಜೂರು ಮಾಡಲಾಗಿ¨.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ಕೇವಲ ತಾಲೂಕು ಘೋಷಣೆಗಷ್ಟೇ ಸೀಮಿತವಾಗಿದ್ದ ಕಂಪ್ಲಿ ಇತ್ತೀಚೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಕ್ಷೇತ್ರದ ಐತಿಹಾಸಿಕ ಸೋಮಪ್ಪನ ಕೆರೆ ಅಭಿವೃದ್ಧಿಯಾಗಿಲ್ಲ. 30 ವರ್ಷಗಳ ಹಿಂದೆ ಹಣ ಪಾವತಿಸಿದ್ದ ಶಿಬಿರದಿನ್ನಿ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಪಟ್ಟಣದಲ್ಲಿ ಸೂಕ್ತ ಕ್ರೀಡಾಂಗಣದ ವ್ಯವಸ್ಥೆ ಮಾಡಲಾಗಿಲ್ಲ. ಸಕ್ಕರೆ ಕಾರ್ಖಾನೆ ಆರಂಭಿಸಬೇಕೆಂಬ ಬೇಡಿಕೆ ಈವರೆಗೂ ಈಡೇರುತ್ತಿಲ್ಲ. ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಅಲ್ಲದೇ, ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದರೆ, ಕಂಪ್ಲಿಯಿಂದ ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ತುಂಬಿ ಹರಿಯುತ್ತದೆ. ಇದರಿಂದ ಸಂಪರ್ಕ ಕಡಿತವಾಗಲಿದೆ. ಹೀಗಾಗಿ ನೂತನ ಸೇತುವೆ ನಿರ್ಮಿಸಬೇಕಾಗಿದೆ

ಶಾಸಕರು ಏನಂತಾರೆ?
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಸಮುದಾಯ ಆರೋಗ್ಯ ಕೇಂದ್ರ, ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ರಸ್ತೆ ಅಭಿವೃದ್ಧಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಯಾಗಿದೆ. ಕಾಂಗ್ರೆಸ್‌ ಸರ್ಕಾರ ಕ್ಷೇತ್ರಕ್ಕೆ ಯಾವುದೇ ವಿಶೇಷ ಅನುದಾನ ನೀಡಿಲ್ಲವಾದರೂ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನದಲ್ಲಿಯೇ ಇಂದಿಗೂ ಕಾಮಗಾರಿ ಕೈಗೊಳ್ಳಲಾಗಿದೆ. ಜನರ ಸಂಪರ್ಕಕ್ಕಾಗಿ ಕ್ಷೇತ್ರದಲ್ಲಿ ಶಾಸಕರ ಕಚೇರಿ ತೆರೆಯಲಾಗಿದೆ. ಸೋಮಪ್ಪನಕೆರೆ ಅಭಿವೃದ್ಧಿಗೆ 8.50.ಲಕ್ಷರೂ ವೆಚ್ಚದಲ್ಲಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಚಾಲನೆ ಪಡೆದುಕೊಳ್ಳಲಿದೆ. ಕೆಯುಐಡಿಎಫ್ ಯೋಜನೆಯಡಿ 22 ಕೋಟಿ ವೆಚ್ಚದಲ್ಲಿ 24 x7 ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಟಿ.ಎಚ್‌. ಸುರೇಶ್‌ ಬಾಬು, ಶಾಸಕರು.

ಕ್ಷೇತ್ರ ಮಹಿಮೆ
ಕಂಪ್ಲಿ ಪಟ್ಟಣವು ನೊಳಂಬ ಪಲ್ಲವರ ರಾಜಧಾನಿಯಾಗಿತ್ತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ನೊಳಂಬರ ಕಾಲದ್ದೆಂದು ಹೇಳಲಾಗುವ ಹಾಗೂ ಗಂಡುಕಲಿ ಕುಮಾರ ರಾಮನ ಆರಾಧ್ಯದೇವರಾದ ಸೋಮೇಶ್ವರ (ಸೋಮಪ್ಪ) ದೇವಾಲಯವಿದೆ.  ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತದೆ. ತುಂಗಭದ್ರಾ ಜಲಾಶಯದಿಂದ ಕಂಪ್ಲಿವರೆಗಿನ ನದಿ ಪ್ರದೇಶವನ್ನು ನೀರುನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ನದಿಯ ಒಡಲಲ್ಲಿ ನೂರಾರು ಪ್ರಭೇದದ ಜೀವವೈವಿಧ್ಯತೆಯನ್ನು ಕಾಣಬಹುದು. ನದಿ ತೀರದ ಕೋಟೆ ಪ್ರದೇಶದಲ್ಲಿ ವಿಜಯನಗರ ಕಾಲದ ಮಹಾದ್ವಾರವಿದೆ. ಇತಿಹಾಸ ಪ್ರಸಿದ್ಧ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನವಿದೆ. ಕಳೆದ ಎರಡು ಅವ ಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ವಿವಿಧ ವಸತಿ ಯೋಜನೆಯಲ್ಲಿ ವಸತಿ ರಹಿತರಿಗೆ ಮನೆಗಳನ್ನು ನೀಡಿದ್ದಾರೆ. ಗ್ರಾಮಗಳಲ್ಲಿ ಒಂದಕ್ಕಿಂತ ಹೆಚ್ಚಿಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದಾರೆ. 
ಬಿ.ಎಸ್‌.ಶಿವಮೂರ್ತಿ,

ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದಿಂದ ನಿಗ ದಿತ ಪ್ರಮಾಣದಲ್ಲಿ ಅನುದಾನ ಬಂದಿದೆ. ಆದರೆ, ಅದನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಶಾಸಕರಾಗಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳ ಬಹುದಿತ್ತು, ಆದರೆ ಈ ಬಗ್ಗೆ ಗಮನ ಹರಿಸಿಲ್ಲ. ಕೆಲವೊಂದು ಜ್ವಲಂತ ಸಮಸ್ಯೆ ಇನ್ನು ಬಗೆಹರಿದಿಲ್ಲ.
ಕಾರೇಕಲ್‌ ಮನೋಹರ್‌

ಕ್ಷೇತ್ರದಲ್ಲಿ ಆರಂಭದಲ್ಲಿ ಶಾಸಕರ ಬೆಂಬಲಿಗರು, ಕಾರ್ಯಕರ್ತರ ದೌರ್ಜನ್ಯ ಅತಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಡಿಮೆಯಾಗಿದೆ. ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿಯಾಗಿದೆ. ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸಬಹುದಿತ್ತು. ನೀರಾವರಿ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಶಾಸಕರು ಗಮನ ಹರಿಸಬೇಕು.
ಕಾಟಂರಾಜು,

Advertisement

Udayavani is now on Telegram. Click here to join our channel and stay updated with the latest news.

Next