Advertisement

ಛತ್ತೀಸ್‌ಗಡಕ್ಕೆ ಸಿಎಂ ಯಾರು? ಇಂದು ಘೋಷಣೆ ಸಂಭವ

06:00 AM Dec 16, 2018 | |

ಹೊಸದಿಲ್ಲಿ/ಐಜ್ವಾಲ್‌:  ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ನಾಯಕತ್ವ ಕಗ್ಗಂಟ್ಟನ್ನು ಬಗೆಹರಿಸಿದ ಬಳಿಕ ಕಾಂಗ್ರೆಸ್‌ ವರಿಷ್ಠರು ಛತ್ತೀಸ್‌ಗಡದ ಬಗ್ಗೆ ಗಮನ ಹರಿಸಿದ್ದಾರೆ. 2 ದಿನಗಳಿಂದ ಮುಖ್ಯಮಂತ್ರಿ ಹುದ್ದೆಗಳ ಆಕಾಂಕ್ಷಿಗಳ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸತತ ಸಮಾಲೋಚನೆ ನಡೆಸಿದ್ದು, ರವಿವಾರ ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿ ಯಾರು ಎನ್ನುವುದನ್ನು ಘೋಷಿಸಲಿದ್ದಾರೆ.

Advertisement

ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಉಸ್ತುವಾರಿ ಪಿ.ಎಲ್‌.ಪೂನಿಯಾ ಮಾತನಾಡಿ, ಭಾನುವಾರ 12 ಗಂಟೆಗೆ ಮತ್ತೂಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ರಾಜ್ಯಪಾಲರು ಡಿ.17ರ ಸಂಜೆ 4.30ರ ವರೆಗೆ ಸಮಯ ನೀಡಿದ್ದಾರೆ ಎಂದು ಪೂನಿಯಾ ಹೇಳಿರುವ ಹಿನ್ನೆಲೆಯಲ್ಲಿ ಅದೇ ದಿನವೇ ಛತ್ತೀಸ್‌ಗಡದಲ್ಲಿಯೂ ಮುಖ್ಯಮಂತ್ರಿ ಪ್ರಮಾಣ ಸ್ವೀಕಾರ ನಡೆಯುವ ಸಾಧ್ಯತೆ ಇದೆ.

ಅದಕ್ಕೆ ಪೂರಕವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿರುವ ಟಿ.ಎಸ್‌.ಸಿಂಗ್‌ ದೇವ್‌, ಚರಣ ದಾಸ್‌ ಮಹಾಂತ್‌, ತಾಮ್ರಧ್ವಜ ಸಾಹೂ, ಭೂಪೇಶ್‌ ಬಘೇಲ್‌ ಜತೆಗೆ ಇರುವ ಫೋಟೋ ಟ್ವೀಟ್‌ ಮಾಡಿ ಅಮೆರಿಕದ ಇಂಟರ್‌ನೆಟ್‌ ಉದ್ಯಮಿ ರೀಡ್‌ ಹೋಫ್ಮ್ಯಾನ್‌ರ ಉಕ್ತಿ “ನೀವು ಎಷ್ಟು ಬುದ್ಧಿವಂತ ಅಥವಾ ನಿಮ್ಮ ಮನಸ್ಸಿನಲ್ಲಿ ಉತ್ತಮ ಸಲಹೆಗಳಿವೆ ಎನ್ನುವುದು ಮುಖ್ಯವಲ್ಲ. ಒಂದು ಉತ್ತಮ ತಂಡದ ಎದುರು ಏಕಾಂಗಿ ಹೋರಾಟ ವ್ಯರ್ಥವಾಗುತ್ತದೆ’ ಎನ್ನುವುದನ್ನು ಟ್ವೀಟ್‌ನಲ್ಲಿ  ಪ್ರಸ್ತಾಪಿಸಿದ್ದಾರೆ.
 
ತಾಂಗ ಪ್ರಮಾಣ: ಈಶಾನ್ಯ ರಾಜ್ಯ ಮಿಜೋರಾಂನ ಐದನೇ ಮುಖ್ಯಮಂತ್ರಿ ಯಾಗಿ ಮಿಜೋ ನ್ಯಾಷನಲ್‌ ಫ್ರಂಟ್‌ ಅಧ್ಯಕ್ಷ ಝೊರಾಂತಾಂಗ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ 12 ಮಂದಿ ಸಚಿವರಾಗಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಸ್ವೀಕರಿಸಿದ್ದಾರೆ. ರಾಜ್ಯಪಾಲ ಕುಮ್ಮನಂ ರಾಜಶೇಖರನ್‌ ಪ್ರಮಾಣ ವಚನ ಬೋಧಿಸಿದರು. ತಾಂಗ ಅವರು ಮುಖ್ಯಮಂತ್ರಿಯಾಗುತ್ತಿರುವುದು ಮೂರನೇಯ ಬಾರಿಗೆ. 1998 ಮತ್ತು 2003ರಲ್ಲಿ ಅವರು ಸತತವಾಗಿ 2 ಬಾರಿ ಅಧಿಕಾರದಲ್ಲಿದ್ದರು. ಬಳಿಕ ಮಾತನಾಡಿದ ನೂತನ ಮುಖ್ಯಮಂತ್ರಿ, ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಈಶಾನ್ಯ ರಾಜ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಎಂಎನ್‌ಎಫ್ ವಿದಾಯ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಬ್ಬನೇ ಪ್ರಮಾಣ: ಇದೇ ವೇಳೆ ಭೋಪಾಲದಲ್ಲಿ ಶನಿವಾರ ಮಾತನಾಡಿದ ಮಧ್ಯಪ್ರದೇಶದ ನಿಯೋಜಿತ ಮುಖ್ಯ ಮಂತ್ರಿ ಕಮಲ್‌ನಾಥ್‌ 17ರಂದು ತಾವೊ ಬ್ಬರೇ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ. ಹದಿನೈದು ವರ್ಷಗಳ ಬಳಿಕ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ವಹಿಸುತ್ತಿದೆ. 2003ರಲ್ಲಿ ದಿಗ್ವಿಜಯ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೊನೆಯದಾಗಿ ಆಡಳಿತ ನಡೆಸಿತ್ತು. ಕಮಲ್‌ನಾಥ್‌ ಸದ್ಯ ಛಿಂದ್ವಾರಾ ಲೋಕ ಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅವರು ಸ್ವಕ್ಷೇತ್ರದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಛಿಂದ್ವಾರಾದಲ್ಲಿ ರುವ ಮೂರು ಕ್ಷೇತ್ರಗಳ ಪೈಕಿ 1 ರಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.  

ಛಿಂದ್ವಾರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಮೂರು ಕ್ಷೇತ್ರ ಗಳು ಸಾಮಾನ್ಯ ಕ್ಷೇತ್ರಗಳಾಗಿದ್ದರೆ, 2 ಕ್ಷೇತ್ರ ಎಸ್‌ಟಿ, 2 ಕ್ಷೇತ್ರ ಎಸ್‌ಸಿಗೆ ಮೀಸಲಾಗಿವೆ. ನಿಯಮ ಪ್ರಕಾರ ಮುಖ್ಯಮಂತ್ರಿ ಅಥವಾ ಸಚಿವರಾದವರು  6 ತಿಂಗಳ ಒಳಗಾಗಿ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಬೇಕು. ರಾಜಸ್ಥಾನದಲ್ಲಿ ಅಶೋಕ್‌ ಗೆಹೊÉàಟ್‌, ಸಚಿನ್‌ ಪೈಲಟ್‌ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ 17 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Advertisement

2 ಪ್ರಥಮಗಳು
ಮಿಜೋ ನ್ಯಾಷನಲ್‌ ಫ್ರಂಟ್‌ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಐಜ್ವಾಲ್‌ನಲ್ಲಿ 2 ಪ್ರಥಮಗಳು ನಡೆದಿವೆ. ಮೊದಲನೇಯದಾಗಿ ಬೈಬಲ್‌ ಪಠಣ ಮತ್ತು ಕ್ರಿಶ್ಚಿಯನ್‌ ಹಾಡುಗಳನ್ನು ಹಾಡಲಾಯಿತು. ಎರಡನೇಯದಾಗಿ ಸಚಿವರೆಲ್ಲರೂ ಮಿಜೋ ಭಾಷೆಯಲ್ಲಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಸ್ವೀಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next