Advertisement

ಸಿನಿಜಾತ್ರೆಯಲ್ಲಿ ಆಕರ್ಷಣೆ ಯಾರು?

11:33 AM Aug 22, 2018 | |

ಈ ವಾರ ಸಿನಿ ಪ್ರೇಕ್ಷಕನಿಗೆ ಜಾತ್ರೆ… ಹೌದು, ಸಾಮಾನ್ಯವಾಗಿ ವಾರಕ್ಕೆ ನಾಲ್ಕು, ಐದು, ಆರು ಚಿತ್ರಗಳು ಬಿಡುಗಡೆಯಾಗಿರುವುದುಂಟು. ಎರಡು ವಾರದ ಹಿಂದೆ ಬರೋಬ್ಬರಿ ಹತ್ತು ಚಿತ್ರಗಳು ಚಿತ್ರಮಂದಿರಗಳನ್ನು ಆವರಿಸಿದ್ದವು. ಯಾವ ಚಿತ್ರ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿದ್ದ ಪ್ರೇಕ್ಷಕ ಒಂದಷ್ಟು ಆಯ್ಕೆ ಮಾಡಿಕೊಂಡಿದ್ದುಂಟು. ಈಗ ಮತ್ತೆ ನೋಡುಗನಿಗೆ ಸವಾಲು. ಈ ವಾರವೂ ಎಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಹಳಬರ ಜೊತೆಗೆ ಹೊಸಬರೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುತ್ತಿರುವುದು ಇನ್ನೊಂದು ವಿಶೇಷ. ಆ ಕುರಿತು ಒಂದು ವರದಿ.

Advertisement

ಲೈಫ್ ಜೊತೆ ಒಂದ್‌ ಸೆಲ್ಫಿ: ಏಳು ವರ್ಷಗಳ ಬಳಿಕ ದಿನಕರ್‌ ತೂಗುದೀಪ “ಲೈಫ್ ಜೊತೆ ಒಂದ್‌ ಸೆಲ್ಫಿ’ ಚಿತ್ರ ನಿರ್ದೇಶಿಸಿದ್ದು, ಈ ಚಿತ್ರ ಈ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಪ್ರಜ್ವಲ್‌ ದೇವರಾಜ್‌, ಪ್ರೇಮ್‌ ಹಾಗೂ ಹರಿಪ್ರಿಯಾ ಅಭಿನಯದ ಈ ಚಿತ್ರಕ್ಕೆ ದಿನಕರ್‌ ಪತ್ನಿ ಮಾನಸ ದಿನಕರ್‌ ಅವರದೇ ಕಥೆ ಇದೆ. ಇದೊಂದು ಗೆಳೆತನದ ಮೇಲೆ ಸಾಗುವ ಚಿತ್ರ. ಮೂವರು ಒಂದೊಂದು ಸಮಸ್ಯೆಯಲ್ಲಿ ಸಿಲುಕಿ, ಬೇಸರಗೊಂಡಿರುತ್ತಾರೆ.

ಒತ್ತಡದ ಬದುಕಲ್ಲಿ ಒಂದು ಬ್ರೇಕ್‌ ತೆಗೆದುಕೊಂಡು ಹಾಗೊಂದು ಸುತ್ತಾಟಕ್ಕೆ ಹೋಗುತ್ತಾರೆ. ಅಲ್ಲಿ ಭೇಟಿಯಾಗುವ ಮೂವರು ಗೆಳೆಯರ ಮಧ್ಯೆ ನಡೆಯುವುದೇ ಕಥೆ. ಸುಮಾರು 160 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ವಿ.ಹರಿಕೃಷ್ಣ ಸಂಗೀತ ನೀಡಿದರೆ, ನಿರಂಜನ್‌ ಬಾಬು ಛಾಯಾಗ್ರಹಣ ಮಾಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು -ಕೊಡುಗೆ ರಾಮಣ್ಣ ರೈ” ಚಿತ್ರ ಕೂಡ ತೆರೆಗೆ ಬರುತ್ತಿದೆ. ರಿಷಭ್‌ಶೆಟ್ಟಿ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನಂತ್‌ನಾಗ್‌ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬಹುತೇಕ ಮಕ್ಕಳೇ ತುಂಬಿದ್ದಾರೆ. ಇದೊಂದು ಕನ್ನಡ ಶಾಲೆಯ ಸ್ಥಿತಿಗತಿ ಕುರಿತಾದ ಕಥೆ. ಹಾಡುಗಳ ಮೂಲಕವೇ ಚಿತ್ರದ ಕಥೆಯನ್ನು ಬಿಚ್ಚಿಡುವ ಈ ಚಿತ್ರ, ಹೊಸ ಪ್ರತಿಭೆಗಳ ಮೂಲಕ ಹೊರಬರುತ್ತಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ. 

ಒಂದಲ್ಲಾ ಎರಡಲ್ಲಾ: ಸತ್ಯ ಪ್ರಕಾಶ್‌ ನಿರ್ದೇಶನದ “ಒಂದಲ್ಲಾ ಎರಡಲ್ಲಾ’ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರವನ್ನು ಮಕ್ಕಳ ಚಿತ್ರ ಎಂದೇ ಭಾವಿಸಿದ್ದಾರೆ. ಆದರೆ, ಇದು ಮಕ್ಕಳ ಚಿತ್ರವಲ್ಲ. ಇದೊಂದು ಭಾವನಾತ್ಮಕ ಸಂಬಂಧಗಳ ಮೇಲೆ ಹೆಣೆದಿರುವ ಕಥೆ. ಚಿತ್ರದಲ್ಲಿ ಹುಡುಗನೊಬ್ಬ ಹೈಲೆಟ್‌. ಇಲ್ಲಿ ಸೆಂಟಿಮೆಂಟ್‌, ಎಮೋಷನ್ಸ್‌ಗೆ ಹೆಚ್ಚು ಜಾಗವಿದೆ. ಸ್ಮಿತಾ ಉಮಾಪತಿ ನಿರ್ಮಾಣವಿದೆ. ವಾಸುಕಿ ವೈಭವ್‌ ಸಂಗೀತವಿದೆ. ಲವಿತ್‌ ಛಾಯಾಗ್ರಹಣ ಮಾಡಿದ್ದಾರೆ.

Advertisement

ಮೇ 1: ಜೆಕೆ ಅಭಿನಯದ “ಮೇ 1′ ಚಿತ್ರ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದೆ. ನಾಗೇಂದರ ಅರಸ್‌ ನಿರ್ದೇಶನದ ಈ ಚಿತ್ರಕ್ಕೆ ವಾಣಿ ರಾಜು ಅವರ ನಿರ್ಮಾಣವಿದೆ. ಸತೀಶ್‌ ಬಾಬು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಟ್ರೇಲರ್‌ ಬಿಡುಗಡೆಯಾಗಿದ್ದು, ತಕ್ಕಮಟ್ಟಿಗೆ ನಿರೀಕ್ಷೆ ಹೆಚ್ಚಿಸಿರುವ ಚಿತ್ರವಿದು.

ಧೂಳಿಪಟ: ಹೊಸಬರ “ಧೂಳಿಪಟ’ ಚಿತ್ರ ಕೂಡ ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರದಲ್ಲಿ ಲೂಸ್‌ ಮಾದ ಯೋಗಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರೂಪೇಶ್‌ ಈ ಚಿತ್ರದ ಹೀರೋ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆಯೂ ಅವರದೇ. ಇನ್ನು, ರಶ್ಮಿ ಕಾರ್ಚಿ ನಿರ್ದೇಶಕಿ. ಚಿತ್ರವನ್ನು ಶಿರಗಣ್ಣನವರ್‌ ನಿರ್ಮಿಸಿದ್ದು, ಇವರಿಗೆ ಗಿರೀಶ್‌ ಜಿ.ರಾಜ್‌ ಮತ್ತು ನಿಂಗರಾಜ್‌ ಅವರ ಸಾಥ್‌ ಕೂಡ ಇದೆ. ಅರುಣ್‌ ಶೆಟ್ಟಿ ಸಾಹಿತ್ಯ ಸಂಗೀತವಿದೆ. ಪ್ರಜ್ವಲ್‌ ಶೆಟ್ಟ ಸಂಭಾಷಣೆ ಬರೆದಿದ್ದಾರೆ.

ಕವಿ: “ಕವಿ” ಎಂಬ ಚಿತ್ರವೂ ಈ ವಾರ ತೆರೆಕಾಣುತ್ತಿದೆ.  ಈ ಚಿತ್ರದ ಮೂಲಕ ಪುನೀತ್‌ ಗೌಡ ನಾಯಕರಾಗಿ ಪರಿಚಯವಾಗುತ್ತಿದ್ದಾರೆ. .ಎಸ್‌.ತ್ಯಾಗರಾಜ ಅವರ ನಿರ್ದೇಶನವಿದೆ. ನಿರ್ಮಾಣವನ್ನು ಪುನೀತ್‌ ಮಾಡಿದ್ದಾರೆ. ಈಗಾಗಲೇ ಸಂಗೀತ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್‌ ಕಂಪೋಸ್‌ ಮಾಡಿರುವವರು ತ್ಯಾಗರಾಜ್‌. ಕವಿ ಚಿತ್ರದ ಮೂಲಕ ಮೊದಲ ಬಾರಿಗೆ ತ್ಯಾಗರಾಜ್‌ ಚಿತ್ರನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಈ ಚಿತ್ರಕ್ಕೆ ಶರತ್‌ಕುಮಾರ್‌, ಕಾರ್ತಿಕ್‌ ಶರ್ಮ ಛಾಯಾಗ್ರಹಣ, ಧನು ಆರ್‌. ಸಂಭಾಷಣೆ, ಮಧುಸೂದನ್‌, ಪ್ರೇಮ್‌ಋಷಿ, ಎಂ.ಎಸ್‌. ತ್ಯಾಗರಾಜ್‌ ಸಾಹಿತ್ಯ, ಸಿ.ರವಿಚಂದ್ರನ್‌ ಸಂಕಲನ, ಜಯಪ್ರಕಾಶ್‌ ನ್ಯತ್ಯ ನಿರ್ದೇಶನ, ಪುನೀತ್‌ಗೌಡ, ಶೋಭಿತಾ ಶಿವಣ್ಣ, ಸ್ನೇಹ, ಉಮೇಶ್‌, ರಾಕ್‌ಲೈನ್‌ ಸುಧಾಕರ್‌, ಮಹೇಶ್‌ ಇನ್ನು ಮುಂತಾದವರ ತಾರಾಬಳಗವಿದೆ.

ಗುಡ್‌ಬೈ: ಹೊಸಬರೇ ಸೇರಿ ಮಾಡಿದ “ಗುಡ್‌ ಬೈ’ ಚಿತ್ರಕ್ಕೆ ವಿ.ರವಿಚಂದ್ರನ್‌ ನಾಯಕರಾಗಿದ್ದಾರೆ. ಇವರಿಗಿದು ಮೊದಲ ಚಿತ್ರ. ಅವರದೇ ನಿರ್ದೇಶನ ಚಿತ್ರಕ್ಕಿದೆ. ರಮಾದೇವಿ ವೆಂಕಟೇಶ್‌ ಅವರ ನಿರ್ಮಾಣ ಚಿತ್ರಕ್ಕಿದೆ. ವೆಸ್ಲಿಬ್ರೌನ್‌ ಛಾಯಾಗ್ರಹಣ ಮಾಡಿದರೆ, ಯುಗಂತ್‌ ಸಂಗೀತವಿದೆ.

ಮುಕ್ತಿ: ವೀರಯೋಧ ಹನುಮಂತಪ್ಪ ಕೊಪ್ಪದ್‌ ಅವರಿಂದ ಸ್ಫೂರ್ತಿ ಪಡೆದ “ಮುಕ್ತಿ’ ಎಂಬ ದೇಶಪ್ರೇಮ ಸಾರುವ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಕೆ.ಶಂಕರ್‌ ಅವರ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರದಲ್ಲಿ ರಂಜಿತ್‌, ನಕುಲ್‌, ಪಾಟೀಲ್‌ ಸೇರಿದಂತೆ ಇತರರು ನಟಿಸಿದ್ದಾರೆ. ಸಿ.ಕೆ.ರಾಮಮೂರ್ತಿ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.  ಸದ್ಯಕ್ಕೆ ಈ ವಾರದ ಬಿಡುಗಡೆಯ ಚಿತ್ರಗಳಿವು. ಇನ್ನೆರೆಡು ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆ ಸಾಲಿಗೆ ಸೇರ್ಪಡೆಯಾದರೆ ಅಚ್ಚರಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next