ಪಂಜಾಬ್: ಪಂಜಾಬ್ ನ ಖಾದೂರ್ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದ ಖಲಿಸ್ತಾನಿ ಬೆಂಬಲಿಗ, ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಜಯಗಳಿಸಿದ್ದು, ಅಚ್ಚರಿ ಏನಂದರೆ ಸಿಂಗ್ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದಿಬ್ರುಗಢ್ ಜೈಲಿನಲ್ಲಿದ್ದಾನೆ!
ಇದನ್ನೂ ಓದಿ:Hasana Crime: ರೌಡಿಶೀಟರ್ ಚೈಲ್ಡ್ ರವಿ ಬರ್ಬರ ಹತ್ಯೆ
ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿದ್ದುಕೊಂಡೇ ಲೋಕಸಭೆಗೆ ಸ್ಪರ್ಧಿಸಿದ್ದ ಅಮೃತ್ ಪಾಲ್ ಸಿಂಗ್ ಚುನಾವಣ ಪ್ರಚಾರ ನಡೆಸದೇ ಖಾದೂರ್ ಸಾಹಿಬ್ ಕ್ಷೇತ್ರದಲ್ಲಿ 4,04,430 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕುಲ್ಬೀರ್ ಸಿಂಗ್ ಝಿರಾ ಅವರನ್ನು ಪರಾಜಯಗೊಳಿಸಿದ್ದಾನೆ. ಝಿರಾ ಪಡೆದ ಮತ ಕೇವಲ 2,07,310!
ಆಪ್ ಆದ್ಮಿ ಪಕ್ಷದ ಲಾಲ್ ಜಿತ್ ಸಿಂಗ್ ಭುಲ್ಲಾರ್ 1,94,836 ಮತ ಪಡೆಯುವ ಮೂಲಕ ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಚುನಾವಣ ಆಯೋಗದ ಅಂಕಿಅಂಶದ ಪ್ರಕಾರ ಅಮೃತ್ ಪಾಲ್ ಸಿಂಗ್ 1,97,120 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿರುವುದಾಗಿ ತಿಳಿಸಿದೆ.
ಯಾರೀತ ಅಮೃತ್ ಪಾಲ್ ಸಿಂಗ್?
ಅಮೃತ್ ಪಾಲ್ ಸಿಂಗ್ ವಾರಿಸ್ ಪಂಜಾಬ್ ಡಿ ಮುಖ್ಯಸ್ಥ, ಖಲಿಸ್ತಾನಿ ಉಗ್ರ ಸಂಘಟನೆಯ ಬೆಂಬಲಿಗ. 2023ರ ಫೆಬ್ರವರಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಸಿಂಗ್ ಬೆಂಬಲಿಗನೊಬ್ಬನನ್ನು ಬಂಧಿಸಿದ ನಂತರ ಅಮೃತ್ ಪಾಲ್ ಸಿಂಗ್ ಪತ್ರಿಕೆಗಳಿಗೆ ಹೆಡ್ ಲೈನ್ಸ್ ಆಗಿದ್ದ.
ಠಾಣೆ ಮೇಲೆ ದಾಳಿ ನಡೆದ ಒಂದು ವರ್ಷದ ನಂತರ ಅಮೃತ್ ಪಾಲ್ ಸಿಂಗ್ ನನ್ನು ಎನ್ ಐಎ ಬಂಧಿಸಿತ್ತು. ನಂತರ ಈತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲಿಸಿ ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿ ಇರಿಸಲಾಗಿತ್ತು.