ರಷ್ಯಾ-ಉಕ್ರೇನ್ ನಡುವಿನ ಯುದ್ಧ 43 ದಿನಕ್ಕೆ ಕಾಲಿಟ್ಟಿದೆ. ಏತನ್ಮಧ್ಯೆ ಉಕ್ರೇನ್ ನ ಪ್ರಮುಖ ನಗರಗಳಲ್ಲಿ ರಷ್ಯಾ ಪಡೆ ಪ್ರಬಲ ಪ್ರತಿರೋಧ ಎದುರಿಸುವ ಮೂಲಕ ಅತಂತ್ರ ಸ್ಥಿತಿಗೆ ತಲುಪುವಂತಾಗಿದೆ. ಉಕ್ರೇನ್ ನಲ್ಲಿ ನಮ್ಮ ಪಡೆ ಭಾರೀ ನಷ್ಟ ಅನುಭವಿಸಿದ್ದು, ಇದೊಂದು ದೊಡ್ಡ ದುರಂತ ಎಂದು ರಷ್ಯಾ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾ ಸೈನಿಕರ ಸಾವಿನ ಸಂಖ್ಯೆ ಅಧಿಕವಾಗಿದೆ. ಯುದ್ಧದಲ್ಲಿ ನಾವು ಅಪಾರ ನಷ್ಟವನ್ನು ಅನುಭವಿಸಿರುವುದಾಗಿ ಕ್ರೆಮ್ಲಿನ್ ವಕ್ತಾರ ಡಮಿಟ್ರಿ ಪೆಸ್ಕೋವ್ ಲಾಮೆಂಟೆಡ್ ಸ್ಕೈ ನ್ಯೂಸ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.
ರಷ್ಯಾ ಕಳೆದ ಆರು ವಾರಗಳಿಂದ ಉಕ್ರೇನ್ ನಲ್ಲಿ ಯುದ್ಧ ಮುಂದುವರಿಸಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ನೆರೆಯ ದೇಶಗಳಿಗೆ ಪಲಾಯನಗೈದಿದ್ದಾರೆ. ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನ ಹಲವಾರು ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧ ಹೇರಿವೆ. ಮತ್ತೊಂದೆಡೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸಲಾಗಿದೆ.
ಉಕ್ರೇನ್ ಪ್ರತಿರೋಧಕ್ಕೆ ರಷ್ಯಾ ಪಡೆ ಕಂಗಾಲು:
ಫೆಬ್ರವರಿ 24ರಂದು ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇನೆಯನ್ನು ಕಳುಹಿಸಿದ್ದರೂ ಕೂಡಾ ಉಕ್ರೇನ್ ವಶಪಡಿಸಿಕೊಳ್ಳಲು ಯಾವುದೇ ನಿಖರ ಸಮಯದ ಗಡುವನ್ನು ನೀಡಿಲ್ಲವಾಗಿತ್ತು. ಆದರೆ ಉಕ್ರೇನ್ ಸೇನಾ ಪಡೆ ಶೀಘ್ರವೇ ತಮಗೆ ಶರಣಾಗಬಹುದು ಎಂಬುದು ರಷ್ಯಾ ಸೇನೆಯ ನಿರೀಕ್ಷೆಯಾಗಿತ್ತು ಎಂದು ವರದಿ ವಿಶ್ಲೇಷಿಸಿದೆ.
ಉಕ್ರೇನ್ ನ ತೀವ್ರ ಪ್ರತಿರೋಧದಿಂದಾಗಿ ತನ್ನ ಕೈತಪ್ಪಿ ಹೋಗಿದ್ದ ಪ್ರದೇಶಗಳನ್ನು ಉಕ್ರೇನ್ ಪಡೆ ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ರಷ್ಯಾ ಪಡೆ ಆರಂಭಿಕವಾಗಿ ಉಕ್ರೇನ್ ಪ್ರದೇಶ ತನ್ನ ವಶಕ್ಕೆ ಪಡೆದುಕೊಂಡಿದ್ದರೂ ಕೂಡಾ ಪುಟಿನ್ ಸೇನಾಪಡೆಗೆ ಕೀವ್ ನಗರದೊಳಕ್ಕೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಪ್ರಮುಖ ನಗರಗಳಲ್ಲಿನ ತನ್ನ ಸೇನಾಪಡೆಯನ್ನು ರಷ್ಯಾ ವಾಪಸ್ ಪಡೆದಿದ್ದು, ಬೆಲಾರಸ್ ಮತ್ತು ಪಶ್ಚಿಮ ರಷ್ಯಾದ ಗಡಿಯತ್ತ ಮುಖ ಮಾಡಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಕೀವ್ ಮತ್ತು ರಷ್ಯಾ ನಡುವಿನ ಚೆರ್ನಿಹಿವ್ ನಗರದ ಪ್ರಮುಖ ಪ್ರದೇಶಗಳನ್ನು ಉಕ್ರೇನ್ ಪಡೆ ಮರಳಿ ತನ್ನ ವಶಕ್ಕೆ ಪಡೆದಿದೆ. ದಕ್ಷಿಣ ಭಾಗದಲ್ಲಿ ರಷ್ಯಾ ಸೇನಾ ಪಡೆ ಖೇರ್ಸನ್ ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ನಗರವನ್ನು ವಶಪಡಿಸಿಕೊಳ್ಳಲು ವಿಫಲವಾಗಿದೆ. ಬಂದರು ನಗರಿ ಮರಿಯುಪೋಲ್ ನಲ್ಲಿಯೂ ಉಕ್ರೇನ್ ರಷ್ಯಾ ಪಡೆಗೆ ಪ್ರಬಲ ಪ್ರತಿರೋಧ ಒಡ್ಡಿದೆ.
ಏತನ್ಮಧ್ಯೆ ನಾವು ನಮ್ಮ ಮುಖ್ಯ ಗುರಿಯನ್ನು ತಲುಪಲು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ. ಡೋನ್ಬಾಸ್ ಸ್ವತಂತ್ರಗೊಂಡಿರುವುದಾಗಿ ರಷ್ಯಾ ಹೇಳಿದೆ. ಆದರೆ ಡೋನ್ಬಾಸ್ ಈಗಾಗಲೇ ರಷ್ಯಾ ಬೆಂಬಲಿತ ಬಂಡುಕೋರರ ಹಿಡಿತದಲ್ಲಿದೆ. ಡೋನೆಸ್ಕ್ ಮತ್ತು ಲುಹಾನ್ಸ್ಕ್ ಸ್ವತಂತ್ರ ರಾಜ್ಯಗಳೆಂದು ಪುಟಿನ್ ಘೋಷಿಸಿರುವುದಾಗಿ ವರದಿ ತಿಳಿಸಿದೆ.ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಈ ಯುದ್ಧವನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದು, ಯುರೋಪಿಯನ್ ಒಕ್ಕೂಟ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿರುವ ಈ ಯುದ್ಧ ಯಾವ ರೀತಿಯಲ್ಲಿ ಕೊನೆಗೊಳ್ಳಲಿದೆ ಎಂಬುದು ನಿಗೂಢ ಪ್ರಶ್ನೆಯಾಗಿದೆ.