Advertisement

ಜಗತ್ತಿನಲ್ಲಿ ಸಂಗೀತ ಇಷ್ಟವಿಲ್ಲದವರು ಯಾರಿದ್ದಾರೆ?: ಎನ್‌. ರಾಜಮ್‌

10:03 AM Jan 20, 2020 | mahesh |

ಸಂಗೀತ ಜಗತ್ತಿನಲ್ಲಿ ಬಹುಮನ್ನಣೆ ಪಡೆದಿರುವ ಪಿಟೀಲು ವಾದಕಿ ಪದ್ಮಭೂಷಣ ಡಾ| ಎನ್‌. ರಾಜಮ್‌ ಅವರು ಶ್ರೀ ಅದಮಾರು ಮಠದ ಪರ್ಯಾಯೋತ್ಸವದ ಅಂಗವಾಗಿ ಹಮ್ಮಿಕೊಂಡ “ದರ್ಬಾರ್‌ ಸಂಗೀತ ಕಚೇರಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ “ಉದಯವಾಣಿ’ಗೆ ಸಂದರ್ಶನ ನೀಡಿದರು.

Advertisement

ಸಂಗೀತ ಯಾಕೆ ಕಲಿಯಬೇಕು?
ಜೀವನದಲ್ಲಿ ಸಂತೋಷವಾಗಿ ಇರಬೇಕು ಎನ್ನುವುದು ಪ್ರತಿಯೊಬ್ಬರ ಆಶಯ. ಜಗತ್ತಿನಲ್ಲಿ ಸಂಗೀತ ಇಷ್ಟವಿಲ್ಲದವರು ಯಾರಿದ್ದಾರೆ? ಸಂಗೀತ ದೇವರು ಕೊಟ್ಟ ವರ. ಪ್ರೀತಿಯ ಸಂಕೇತವಾಗಿದೆ. ಮನಸ್ಸಿನ ಕೊಳೆಯನ್ನು ತೊಳೆದು ಹಾಕಬಹುದು. ನಮ್ಮ ನೋವನ್ನು ಸಂಗೀತದ ಮೂಲಕ ಮರೆಯಬಹುದು. ನಮ್ಮ ಅನೇಕ ಹಿರಿಯರು ಸಂಗೀತದ ಮೂಲಕ ಭಗವಂತನ ದರ್ಶನ ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಸಂಗೀತ ಕಲಿಕೆಯ ಮೂಲಕ ಭಗವಂತನ ಕಾಣಲು ಸಾಧ್ಯ.

ಸಂಗೀತದ ಮೂಲಕ ಅರಿವು ಹೇಗೆ ಸಾಧ್ಯ?
ಪ್ರಸ್ತುತ ಕಾಲಘಟ್ಟದಲ್ಲಿ ಫ್ಯೂಷನ್‌ನಿಂದ ಶಾಸ್ತ್ರೀಯ ಸಂಗೀತ ಮೂಲೆಗುಂಪಾಗುತ್ತಿದೆ ಎನ್ನುವ ಮಾತುಗಳಿವೆ. ಆದರೆ ಎಲ್ಲ ಬಗೆಯ ಸಂಗೀತಗಳ ಮೂಲ ಶಾಸ್ತ್ರೀಯ ಸಂಗೀತ. ಇದರಿಂದಲೇ ಜಾನಪದ, ಫ್ಯೂಷನ್‌ ಹುಟ್ಟಿಕೊಂಡಿದೆ. ಕೆಲವರು ಫ್ಯೂಷನ್‌ ಇಷ್ಟಪಟ್ಟರೆ, ಇನ್ನು ಕೆಲವರು ಶಾಸ್ತ್ರೀಯ ಸಂಗೀತವನ್ನು ಇಷ್ಟಪಡುತ್ತಾರೆ. ಫ್ಯೂಷನ್‌ನಲ್ಲಿ ಶಾಸ್ತ್ರೀಯ ಸಂಗೀತವನ್ನು ಹೆಚ್ಚಾಗು ಬಳಸುವ ಮೂಲಕ ಯುವ ಜನರಲ್ಲಿ ಒಲವು ಮೂಡಿಸಲು ಸಾಧ್ಯ.

ನಿಮ್ಮ ಬನಾರಸ್‌ನ ಜೀವನದ ಬಗೆಗೆ…?
ಬನಾರಸ್‌ನಲ್ಲಿ 40 ವರ್ಷ ಇದ್ದೆ. ಅಲ್ಲಿನ ಹಿಂದೂ ವಿ.ವಿ.ಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ. ಅಲ್ಲಿ ನನಗೆ ಬನಾರಸಿಯ ಸಂಗೀತದ ವೈವಿಧ್ಯಗಳು ಕೇಳಲು ಸಿಕ್ಕಿವೆ. ಪಂಡಿತ್‌ ಮಹಾದೇವ್‌ ಪ್ರಸಾದ್‌ ಮಿಶ್ರ ಅವರ ಬನಾರಸಿ ಸಂಗೀತ ಶೈಲಿಯನ್ನು ಆಭ್ಯಾಸವನ್ನು ಮಾಡಿದ್ದೆ.

ಕೃಷ್ಣನಿಗೂ ನಿಮಗೂ ಎಂತಹ ನಂಟು?
ಉಡುಪಿ ಹಲವು ಬಾರಿ ಬಂದಿ ದ್ದೇನೆ. ಆದರೆ ಎಂದೂ ಶ್ರೀಕೃಷ್ಣ ಮಠಕ್ಕೆ ಬರುವ ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಶ್ರೀಕೃಷ್ಣ ಮಠದ ಪರ್ಯಾಯದಲ್ಲಿ ಭಾಗವಹಿಸಲು ಅವಕಾಶ ದೊರಕಿದೆ. ನಮ್ಮ ಭಜನೆ ಯಲ್ಲಿ ಕೃಷ್ಣನೂ ಇದ್ದಾನೆ. ಇಂದು ಅವನ ಸ್ಥಾನದಲ್ಲಿ ಬಂದು ಕಛೇರಿ ನಡೆಸುತ್ತಿರುವುದು ನಮ್ಮ ಪುಣ್ಯ.

Advertisement

ಪಿಟೀಲು ಪರಂಪರೆಯನ್ನು ಹೇಗೆ ಕಾಪಾಡಿಕೊಂಡು ಬರುತ್ತಿದ್ದೀರಿ?
ನಾನು, ಮಗಳು ಸಂಗೀತಾ, ಮೊಮ್ಮಗಳು ರಾಗಿಣಿ ಮತ್ತು ನಂದಿನಿ ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತೇವೆ. ನಮ್ಮಲ್ಲಿ ಹುಟ್ಟಿದ ಮಗುವಿಗೆ ಮೂರು ವರ್ಷವಾಗುತ್ತಿದಂತೆ ಪಿಟೀಲು ಅಭ್ಯಾಸ ಮಾಡಿಸುತ್ತೇವೆ. ನನ್ನ ಪ್ರತಿಯೊಂದು ಯಶಸ್ಸಿಗೆ‌ ಮನೆಯವರ ಸಹಕಾರವಿದೆ. ರಾಗಿಣಿ ಮತ್ತು ನಂದಿನಿ ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಇವರು ಮುಂದೆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next