ಹುಣಸೂರು : ನಗರದಲ್ಲಿ ಹಂದಿ, ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ನಿಯಂತ್ರಿಸುವಲ್ಲಿ ನಗರಸಭೆ ವಿಫಲವಾಗಿದೆ. ಸಾರ್ವಜನಿಕರು ಅಸಹ್ಯ, ಆತಂಕದ ನಡುವೆ ಜೀವನ ನಡೆಸುವಂತಾಗಿದೆ.
ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು ರಸ್ತೆಯಲ್ಲಿ ಓಡಾಡಲಾಗದ ಸ್ಥಿತಿ ಇದ್ದರೆ. ಮತ್ತೊಂದೆಡೆ ಬಹುತೇಕ ಬಡಾವಣೆಗಳ ಚರಂಡಿಗಳಲ್ಲಿ ಹೊರಳಾಡುವ ಹಂದಿಗಳು ವಾಲ್ವ್ ಗಳಲ್ಲಿ ಲೀಕ್ ಆಗಿ ಹೊರಬರುವ ನೀರನ್ನು ಕುಡಿಯುತ್ತಿವ, ಮತ್ತೆ ನೀರು ಬಿಡುವ ಸಂದರ್ಭದಲ್ಲಿ ಚರಂಡಿಯ ಗಲೀಜು ವಾಲ್ವ್ ನೊಳಕ್ಕೆ ಹೋಗಿ ಮನೆಗಳಿಗೆ ಬಿಡುವ ನೀರಿನೊಂದಿಗೆ ಸೇರಿ ಅದೇ ನೀರನ್ನು ಸೇವಿಸುವಂತಾಗಿದೆ.
ಈ ಬಗ್ಗೆ ನಾಯಿ, ಹಂದಿ ಮತ್ತು ಕೋತಿಗಳ ನಿಯಂತ್ರಣಕ್ಕೆ ನಾಗರಿಕರು ಸಭೆಗಳಲ್ಲಿ ಮನವಿ ಮಾಡಿದ ವೇಳೆ ಚರ್ಚಿಸಿದ್ದ ಇಲ್ಲಿನ ಜನಪ್ರತಿನಧಿಗಳು ನಂತರದಲ್ಲಿ ಸಂಬಂಧವೇ ಇಲ್ಲದಂತೆ ಮೌನಕ್ಕೆ ಶರಣಾಗಿರುವುದರಿಂದ ಹಂದಿ ಸಾಕಣೆದಾರರಿಗೆ ಹೇಳುವವರು ಕೇಳುವವರು ಇಲ್ಲಂತಾಗಿದೆ.
ಇತ್ತೀಚೆಗೆ ಹುಚ್ಚು ನಾಯಿ ಕಚ್ಚಿ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾದ ವೇಳೆ ಹುಚ್ಚು ನಾಯಿಯನ್ನು ಕೊಲ್ಲುಲು ತೋರಿದ ಕಾಳಜಿ ಈಗ ನಾಯಿ ಹಾವಳಿ ನಿಯಂತ್ರಿಸಲು ತೋರದಿರುವುದು ನಾಗರಿಕರಲ್ಲಿ ಆಕ್ರೋಶ ಮೂಡಿಸಿದೆ.
ನಗರದಲ್ಲಿ ಕೋತಿಗಳ ಕಾಟವೂ ವಿಪರೀತವಾಗಿದ್ದು. ಚಿಕ್ಕಮಕ್ಕಳನ್ನು ಅಂಗಡಿಗೆ ಕಳುಹಿಸಲಾಗದ ಪರಿಸ್ಥಿತಿ ಇದೆ. ಮಕ್ಕಳು, ಮಹಿಳೆಯರು ಹಾಲು ಮತ್ತಿತರ ಸಾಮಾನುಗಳನ್ನು ತರುವ ವೇಳೆ ಕೈಯಿಂದಲೇ ಕಿತ್ತೊಯ್ಯುತ್ತಿವೆ. ಮನೆ ಬಾಗಿಲು ಹಾಕದಿದ್ದಲ್ಲಿ ಅನ್ನ ಸೇರಿದಂತೆ ಅಡುಗೆ ಪಾತ್ರೆಗಳನ್ನೇ ಹೊತ್ತುಯ್ಯುತ್ತಿವೆ. ಇನ್ನಾದರೂ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುವರೇ ಎಂದು ಕಾದು ನೋಡಬೇಕಾಗಿದೆ.