Advertisement

ಯಾರ ಕೈಗೆ ಕಮಲ, ಮುಗಿಯದ ಗೊಂದಲ?

01:42 PM Oct 12, 2021 | Team Udayavani |

ಸಿಂಧನೂರು: ಮುಂದಿನ ತಾಪಂ-ಜಿಪಂ ಚುನಾವಣೆಗಿಂತಲೂ ಮುಖ್ಯವಾಗಿ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಕಸರತ್ತು ನಡೆಸಿದ್ದರೆ, ಮುಂದಿನ ಹುರಿಯಾಳು ವಿಷಯದಲ್ಲಿ ಬಿಜೆಪಿ ಮಾತ್ರ ಅತಂತ್ರ ಸನ್ನಿವೇಶದಲ್ಲಿದೆ.

Advertisement

ಮಸ್ಕಿ ಉಪ ಚುನಾವಣೆ ಪ್ರಭಾವ ಎಂಬಂತೆ ಒಂದೂವರೆ ವರ್ಷದ ಮೊದಲೇ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್‌ನಲ್ಲಿ ಮೂವರು ಆಕಾಂಕ್ಷಿಗಳು ನೇರವಾಗಿ ಸಂಘಟನೆ ಆರಂಭಿಸಿದ್ದರೆ, ಜೆಡಿಎಸ್‌ನಲ್ಲಿ ಹಾಲಿ ಶಾಸಕ, ಮಾಜಿ ಸಚಿವ ವೆಂಕಟರಾವ್‌ ನಾಡಗೌಡರ ಪರ ರಾಜಕೀಯ ಸಂಘಟನೆ ಶುರುವಾಗಿದೆ. ಆದರೆ ಬಿಜೆಪಿ ಪಾಳಯದಲ್ಲಿ ಮಾತ್ರ ಮುಂದಿನ ಅಭ್ಯರ್ಥಿಯೆಂಬ ಹುಮ್ಮಸ್ಸಿನಿಂದ ಯಾರೊಬ್ಬರೂ ಮುಂದೆ ಬಾರದೇ ಇರುವುದರಿಂದ ಕಮಲ ಮತ್ತೆ ವಿಲವಿಲ ಒದ್ದಾಡುವ ಮುನ್ಸೂಚನೆ ದಟ್ಟವಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಗದ್ದಲ: ಮಾಜಿ

ಶಾಸಕರು ಹಾಗೂ ಎಂಎಸ್‌ಐಎಲ್‌ ಮಾಜಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಬರೋಬ್ಬರಿ 36 ವರ್ಷಗಳ ಚುನಾವಣಾ ಅನುಭವ ಹೊಂದಿದ್ದರೂ ಅವರ ಪಕ್ಷದಲ್ಲಿ ಇದೀಗ ಯುವ ಪ್ರತಿಸ್ಪರ್ಧಿ ಬಸನಗೌಡ ಬಾದರ್ಲಿ ನಡೆಸುವ ಪಕ್ಷದ ಚಟುವಟಿಕೆಗಳು ನೆಮ್ಮದಿ ಕದಡಿವೆ. ಈ ನಡುವೆ ಒಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಹಂಪನಗೌಡರಿಗೆ ಪ್ರತಿಸ್ಪರ್ಧಿಯಾಗಿ 2ನೇ ಸ್ಥಾನ ಗಳಿಸಿ, ನಾಡಗೌಡರನ್ನೇ 3ನೇ ಸ್ಥಾನಕ್ಕೆ ತಳ್ಳಿದ್ದ ಕೆ. ಕರಿಯಪ್ಪ ಕೂಡ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಂದಿನ ಸಂಭಾವ್ಯ ಸ್ಪರ್ಧಿಗಳೆಂದು ಬಿಂಬಿಸುವ ಪ್ರಯತ್ನಗಳು ಈಗಾಗಲೇ ತೀವ್ರಗೊಂಡಿವೆ. ಜೆಡಿಎಸ್‌ ಕೂಡ ಪಿಡಬ್ಲುಡಿ ಕ್ಯಾಂಪ್‌, ಸಿಂಧನೂರಿನ ಶಾಸಕರ ಕಾರ್ಯಾಲಯ ಒಳಗೊಂಡು, ಯುವ ಘಟಕಕ್ಕೂ ಪ್ರತ್ಯೇಕ ಕಚೇರಿ ತೆರೆದು ಶಾಸಕ ವೆಂಕಟರಾವ್‌ ನಾಡಗೌಡರ ಪರ ಮುಂದಿನ ಚುನಾವಣೆ ಉದ್ದೇಶದೊಂದಿಗೆ ಚಟುವಟಿಕೆ ಆರಂಭಿಸಲಾಗಿದೆ. ವಿಶೇಷ ಎಂದರೆ, ಜೆಡಿಎಸ್‌ ಪರ ನೂತನ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಯುವಕರನ್ನು ಮುಂದಿಟ್ಟುಕೊಂಡು ಹೊಸ ತಂತ್ರ ಪ್ರಯೋಗಿಸಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಸೌಲಭ್ಯ ಕಲ್ಪಿಸಲು ಕೈ ಪ್ರತಿಭಟನೆ

Advertisement

ಬಿಜೆಪಿಯಲ್ಲಿ ಸೈಲೆಂಟ್‌

ಇದುವರೆಗೂ ನಾನೇ ಮುಂದಿನ ವಿಧಾನಸಭೆ ಚುನಾವಣೆ ಆಕಾಂಕ್ಷಿಎಂದು ಸಾರ್ವಜನಿಕವಾಗಿ ಯಾವುದೇ ಚಟುವಟಿಕೆ ಬಿಜೆಪಿಯಲ್ಲಿ ಆರಂಭಿಸಿಲ್ಲ. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಪರಾಜಿತ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್‌, ಜಿಪಂ ಮಾಜಿ ಸದಸ್ಯರಾದ ಅಮರೇಗೌಡ ವಿರೂಪಾಪುರ, ಎನ್‌. ಶಿವನಗೌಡ ಗೋರೆಬಾಳ ಆಕಾಂಕ್ಷಿಗಳೆಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ. ಅವರು ಆ ನಿಟ್ಟಿನಲ್ಲಿ ರಾಜಕೀಯವಾಗಿ ಯಾವುದೇ ಚಟುವಟಿಕೆ ಆರಂಭಿಸಿಲ್ಲ. ಹೊರಗಿನ ಅಭ್ಯರ್ಥಿ ತರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಡಾ| ಚನ್ನನಗೌಡ ಪಾಟೀಲ್‌, ಉದ್ಯಮಿ ರಾಜೇಶ್‌ ಹಿರೇಮಠ ಹೆಸರು ಕೇಳಿ ಬಂದಿವೆ. ಯಾವುದೇ ವಿಷಯದಲ್ಲೂ ಬಿಜೆಪಿಯಲ್ಲಿ ಸ್ಪಷ್ಟತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಉದ್ದೇಶ ಹೊರತುಪಡಿಸಿಯೂ ನಾನೊಬ್ಬ ಅಭ್ಯರ್ಥಿ ಎಂದು ಹೇಳಿಕೊಳ್ಳುವ ರೀತಿ ಚಟುವಟಿಕೆ ಆರಂಭವಾಗಿಲ್ಲ. ಈ ನಡುವೆ ಜೆಡಿಎಸ್‌, ಕಾಂಗ್ರೆಸ್‌ ಹೊರತುಪಡಿಸಿದಂತೆ ಬಿಜೆಪಿ ಪಕ್ಷದ ವಿಧಾನಸಭೆ ಕ್ಷೇತ್ರದ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌ ಇದೆ ಎಂಬುದು ಬರೀ ಮಾತುಗಳಿಗೆ ಸೀಮಿತವಾಗಿದೆ.

ಯಾರ ಕೈಗೆ ಕಮಲ, ಗೊಂದಲ

ಸಿಂಧನೂರು ತಾಲೂಕಿನ ಚುನಾವಣೆ ಇತಿಹಾಸದಲ್ಲಿ 26 ಸಾವಿರ ಮತ ಪಡೆದು ಐತಿಹಾಸಿಕ ದಾಖಲೆ ಹೊರತುಪಡಿಸಿ, ಬೇರೆ ಹಿರಿಮೆ ಬಿಜೆಪಿಗೆ ದಕ್ಕಿಲ್ಲ. ಚುನಾವಣೆ ಹತ್ತಿರ ಇದ್ದಾಗ ಯಾರಾದರೊಬ್ಬರು ಟಿಕೆಟ್‌ ತರುವುದು, ಮೂರನೇ ಪ್ರತಿ ಸ್ಪರ್ಧಿಯಾಗಿ ಮತಗಳಿಕೆಯಲ್ಲಿ ಉಳಿದಿದ್ದೇ ಇತಿಹಾಸ. ಅಂತಹ ಪರಂಪರೆ ಮುರಿಯುವ ನಿಟ್ಟಿನಲ್ಲಿ ಈವರೆಗೂ ಬಿಜೆಪಿಯಲ್ಲಿ ಪ್ರಯತ್ನಗಳು ಕಂಡು ಬರುತ್ತಿಲ್ಲ. ಪ್ರತಿಪಕ್ಷಗಳ ರಾಜಕೀಯ ಚಟುವಟಿಕೆಗೂ ತನಗೂ ಸಂಬಂಧವಿಲ್ಲದಂತಿರುವ ಬಿಜೆಪಿ, ಮುಂದಿನ ಚುನಾವಣೆಯಲ್ಲೂ ಕೂಡ ಆಟಕ್ಕುಂಟು, ಲೆಕ್ಕಕ್ಕಿಲ್ಲದ ಪಾತ್ರ ವಹಿಸುವುದೇ? ಎಂಬ ಪ್ರಶ್ನೆ ಈಗಿನಿಂದಲೇ ಆರಂಭವಾಗಿವೆ.

ಯಮನಪ್ಪ ಪವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next