Advertisement

ತಾಯಿ ಮರೆತು, ಮೆರೆದವರುಂಟೆ?

12:28 PM May 16, 2018 | |

ನಾಲ್ಕು ಜನಕ್ಕೆ ನೆರಳಾಗೋನು ಅಂತ ಮಗನನ್ನು ಬೈದೂ ಬೈದೂ ಓದಿಸಿ ಜವಾಬ್ದಾರಿ ಕಲಿಸುವುದು ಸುಲಭವಲ್ಲ. ಶಿಸ್ತು ಕಲಿಸುವಷ್ಟರಲ್ಲಿ ತಾಯಿ- ಮಕ್ಕಳ ಸಂಬಂಧಗಳು ಹಳಸಿರುತ್ತವೆ. ಕುಲಭೂಷಣ ಸಂಸ್ಕಾರವಂತನಾಗಲು ಏನೇನೋ ಸರ್ಕಸ್‌ ಮಾಡುತ್ತಾಳೆ, ತಾಯಿ. ಕುಡುಕ ಗಂಡ ಸತ್ತಮೇಲೆ ಹೇಗೆಗೋ ಹಣ ಒಗ್ಗೂಡಿಸಿ ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದ ದಿನ, ಹಬ್ಬದಡುಗೆ ಮಾಡಿ ಸಂಭ್ರಮಿಸಿದ ತಾಯಿಗೆ ಮಗ ತನ್ನಿಂದ ದೂರ ಹೋದದ್ದು ಗೊತ್ತೇ ಆಗುವುದಿಲ್ಲ. ಕೆಲಸಕ್ಕೆ ಬೇರೆ ಊರು ಸೇರಿದ ಮಗ. 

Advertisement

ಇತ್ತ ಮನೆಯ ಗೋಡೆ ಗೋಡೆಯಲ್ಲಿ ಮಗನ ಬಾಲ್ಯ, ಆಲಸ್ಯ, ತುಂಟತನ, ದುಷ್ಟತನ, ಕಳ್ಳತನದ ನೆನಪು. ಹತ್ತು ರೂಪಾಯಿ ಕದ್ದಿದ್ದಕ್ಕೆ ಬೆಲ್ಟಿನಲ್ಲಿ ಹೊಡೆದ ರಭಸ, ಪ್ರತಿಯೊಂದು ಘಟನೆಯೂ ನರ್ತನವಾಡುತ್ತದೆ. ಶಾಲೆಯಲ್ಲಿ ಸುವರ್ಣ ಮೇಡಂ ತಾಯಿಂದಲೇ ಮಕ್ಕಳು ಹಾಳಾಗೋದು ಅಂದುಬಿಟ್ಟರು!! ಅಕ್ಕ ಪಕ್ಕದ ಮನೆಯವರು ಇವನ ತುಂಟಾತಕ್ಕೆ ಬೇಸತ್ತು, “ಪೊಲೀಸ್‌ ಕರೆಸ್ತೀವಿ’ ಎಂದು ಹೆದರಿಸಿದ್ದರು. ಆ ಸಂಕಟಗಳನ್ನೆಲ್ಲ ತಾಯಿ ಹೊಟ್ಟೆಗೆ ಹಾಕಿಕೊಂಡಳು.

ಆದರೆ, ಮಗನೀಗ ದೊಡ್ಡ ಆಫೀಸರ್‌. ಪೂರ್ತಿ ತೋಳಿನ ಅಂಗಿ ಧರಿಸಿ, ಕಚೇರಿಗೆ ಹೊರಟು ನಿಂತರೆ ಮಗ ಥೇಟ್‌ ರಾಜಕುಮಾರನಂತೆ ಕಾಣಿಸುತ್ತಾನೆ. ಮಗನ ದೂರವಾಣಿ ಕರೆಗೆ ತಾಯಿ ಹಾತೊರೆಯುತ್ತಿದ್ದರೆ, ಅಲ್ಲಿ ಮಗನಿಗೆ ಸಂಗಾತಿಯೊಬ್ಬಳ ಪ್ರೀತಿ- ಪ್ರೇಮ ಸಿಕ್ಕಿತ್ತು.  ಪುರುಷ ಎಂಬ ಭಾವಕ್ಕೆ ಒಂದು ಮಾಯಾವೀ ಹರಿವು. ಎಂಥ ಸೆಳೆತ. ತಾಯಿಂದ ಬೈಸಿಕೊಂಡು ಜಡ್ಡುಗಟ್ಟಿದ್ದ ಮೈಗೆ, ಹೆಂಡತಿಯ ಸಲುಗೆ divine ಎನಿಸಿಬಿಡುತ್ತದೆ.

ಮನ್ಮಥ- ಚಾಣಾಕ್ಯರು ಮೇಳೈಸಿದಂತೆ ಇದ್ದವನು ಸೊಸೆಯ ಇಡೀ ಕುಟುಂಬಕ್ಕೆ ಹೀರೋ. ಅತ್ತೆ- ನಾದಿನಿಯರ ಹೊಗಳಿಕೆಯ ಮತ್ತಿನಲ್ಲಿ ಅವರಿಗೇ ಶರಣಾಗಿ ಹೋಗಿದ್ದ. ತಾಯಿಯನ್ನು ಮರೆತೇಬಿಟ್ಟಿದ್ದ. ಮಧ್ಯೆ ಕೆಲಸದ ಮೇಲೆ ಊರಿಗೆ ಬಂದಾಗ ತಾಯಿಯ ಜೊತೆಯÇÉೇ ಇದ್ದರೂ, ಯಾವುದೋ ತಂತು ಕಡೆದು ಹೋದಂತೆ ಅನ್ನಿಸಿಬಿಟ್ಟಿತ್ತು. ಆಕೆಯ ಕಣ್ಣುಗಳು ನಿರೀಕ್ಷೆಯಲ್ಲಿ ನಿಸ್ತೇಜವಾದಂತೆ ಕಂಡಿತು. ಹೆಂಡತಿ ಒಳ್ಳೆಯವಳೇ?

ತಾಯಿಯನ್ನು ನೋಡಿಕೊಳ್ಳುವಷ್ಟು ಒಳ್ಳೆಯವಳೇ? ಎಂಬುದು ಅವನಿಗೆ ಪ್ರಶ್ನಾರ್ಥಕ! ತಾಯಿಗೆ ಮಾಸ್ಟರ್‌ ಹೆಲ್ತ್‌ ಚೆಕಪ್ಪು ಮಾಡಿಸಿದ. ಶಾರೀರಿಕ ಆರೋಗ್ಯ ಸರಿಯಾಗಿತ್ತು. ತಾಯಿಗೆ ಏನು ಬೇಕೆಂದು ಕೊನೆಯವರೆಗೂ ಆತ ಕೇಳಿರಲೇ ಇಲ್ಲ. ತಾಯಿ ಸತ್ತುಹೋದ ಮೇಲೆ ಈಗ ಅವನಿಗೆ ಪಾಪಪ್ರಜ್ಞೆ ಕಾಡುತ್ತಿದೆ. ಹಿಪ್ಪೊಕ್ರೆಟಿಸ್‌ ಪ್ರಕಾರ, ಪಾಪಪ್ರಜ್ಞೆ ಅನ್ನೋದೇ ಒಂದು ಕ್ಯಾನ್ಸರ್‌ಗಿಂತ ಭಯಾನಕ ಕಾಯಿಲೆಯಂತೆ.

Advertisement

Pannic attack ಆಗಿ ನನ್ನ ಬಳಿ ಸಲಹೆ ಮತ್ತು ಚಿಕಿತ್ಸೆಗೆ ಬರುತ್ತಿದ್ದಾನೆ. ಮನಸ್ಸಿಗಿಂತ ಬೇರೆ ರೋಗವಿಲ್ಲ. ವೃದ್ಧಾಶ್ರಮಗಳಿಗೆ ದಾನಮಾಡುತ್ತಾನೆ. ಸುಖವಿಲ್ಲ. ಮನಸ್ಸಿನ ಕಿಚ್ಚು ಶಮನವಾಗಲು ಸಮಯ ಬೇಕು. ಅವನ ಕೌನ್ಸೆಲಿಂಗ್‌ ಮುಗಿಸಿ, ಮನೆಗೆ ವಾಪಸಾಗುತ್ತಿದ್ದಾಗ, ಆಟೋ ಹಿಂದಿನ ಬರಹವೊಂದು ಆಕಸ್ಮಿಕವಾಗಿ ಕಣ್ಣಿಗೆ ಬಿತ್ತು: “ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರೀಬೇಡ’! 

* ಶುಭ ಮಧುಸೂದನ್‌

Advertisement

Udayavani is now on Telegram. Click here to join our channel and stay updated with the latest news.

Next