ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಓ) ಯ ಮುಖ್ಯಸ್ಥ ಟೆಡ್ರೊಸ್ ಅಡನೊಮ್ ಗೆಬ್ರೆಯೆಸಸ್ ಅವರು ಸ್ವತಃ ಕ್ವಾರಂಟೈನ್ ಗೆ ಒಳಗಾಗಲು ನಿರ್ಧರಿಸಿದ್ದಾರೆ. ಕೋವಿಡ್-19 ಸೋಂಕು ದೃಢಪಟ್ಟ ವ್ಯಕ್ತಿಯ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.
ಸ್ವತಃ ಟೆಡ್ರೊಸ್ ಅಡನೊಮ್ ಅವರೇ ಈ ವಿಚಾರವನ್ನು ಟ್ವೀಟ್ ಮೂಲಕ ಸ್ವಷ್ಟ ಪಡಿಸಿದ್ದಾರೆ. ನಾನು ಸಂಪರ್ಕಕ್ಕೆ ಬಂದ ವ್ಯಕ್ತಿಯೊಬ್ಬರಿಗೆ ಕೋವಿಡ-19 ಸೋಂಕು ಪಾಸಿಟಿವ್ ಕಂಡುಬಂದಿದೆ. ಆದರೆ ನನಗೆ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಆದರೆ ಕೆಲವು ದಿನಗಳ ಕಾಲ ನಾನು ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಮನೆಯಿಂದಲೇ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಆರೋಗ್ಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಾವೆಲ್ಲರೂ ನಡೆದುಕೊಳ್ಳಬೇಕಾದ್ದು ಅಗತ್ಯ. ಸೋಂಕಿನ ಸರಪಳಿ ತುಂಡರಿಸುವುದಕ್ಕೆ ಅದು ಅನಿವಾರ್ಯವೂ ಆಗಿದೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ತನ್ನನ್ನು ಪ್ರಸಿದ್ದಿ ಮಾಡಿದ ಯೂಟ್ಯೂಬರ್ ವಿರುದ್ಧ ದೂರು ನೀಡಿದ ಬಾಬಾ ಕಾ ಡಾಬಾ ಮಾಲಕ
ಇಥಿಯೋಪಿಯಾ ಮೂಲದ 55 ವರ್ಷದ ಟೆಡ್ರೊಸ್ ಅಡನೊಮ್ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.