Advertisement
ಐಪಿಎಲ್ ಆತ್ಮವಿಶ್ವಾಸದ ಜೊತೆ: ಇದೇ ರೀತಿ ಭಾರತದಲ್ಲಿ ಪ್ರೊ ಕಬಡ್ಡಿ ಎಂಬ ವೃತ್ತಿಪರ ಲೀಗ್ ಕಳೆದ 4 ವರ್ಷಗಳಿಂದ ನಡೆಯುತ್ತಿದೆ. ಸ್ಪರ್ಧೆ ತೀವ್ರ ತುರುಸಿನಿಂದ ನಡೆಯುತ್ತದೆ. ಆಟಗಾರರ ಚಾಕಚಕ್ಯತೆ ಹಾಗೂ ಅವರ ಬ್ಯಾಂಕ್ ಬ್ಯಾಲೆನ್ಸ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕೂಡ ಖರೆ. ಆದರೆ ಪ್ರೊ ಕಬಡ್ಡಿಯಿಂದ ಭಾರತದ ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆ ಮಟ್ಟದ ಲಾಭವಾಗುತ್ತಿಲ್ಲ ಎಂಬುದು ವಿಚಿತ್ರವಾದರೂ ಸತ್ಯ! ಸದ್ಯಕ್ಕೇನೋ ಪ್ರೊ ಕಬಡ್ಡಿಯಲ್ಲಿ ಭಾರತೀಯ ಆಟಗಾರೇ ಹೆಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾ ಆಟಗಾರರು ಈ ಲೀಗ್‌ನಲ್ಲಿ ನಿಯಮಿತವಾಗಿ ಆಡಬಹುದು. ಅಂತಹ ಸನ್ನಿವೇಶದಲ್ಲಿ ಲಾಭ ಪಡೆಯುವುದು ಮಾತ್ರ ವಿದೇಶಗಳೇ!
ಮೊನ್ನೆ ಮೊನ್ನೆ ದುಬೈನಲ್ಲಿ ನಡೆದ ಕಬಡ್ಡಿ ಮಾಸ್ಟರ್ನಲ್ಲಿ ಭಾರತ ಇರಾನ್‌ನ್ನು ಪರಾಭವಗೊಳಿಸಿ ಚಾಂಪಿಯನ್ ಎನಿಸಿಕೊಂಡಿತು. ಆಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿತು. ಆದರೆ ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ದೇಶದ ಅತ್ಯುತ್ತಮ ಡಿಫೆಂಡರ್‌ಗಳಾದ ಸುರ್ಜಿತ್ ಸಿಂಗ್ ಹಾಗೂ ಸುರೇಂದ್ರನ್ ಸಹಾ ಅವರನ್ನು ಏಷ್ಯನ್ ಗೇಮ್ಸ್ ಭಾರತೀಯ ತಂಡದಿಂದ ಕೈಬಿಡಲಾಗಿದೆ. ಕೇವಲ ಕೊನೆಯ ಲೀಗ್ ಪಂದ್ಯವಾಡಿದ್ದ, ಹೆಸರಿನಿಂದಲೇ ಹೆಚ್ಚು ಖ್ಯಾತರಾದ ಮಂಜೀತ್ ಚಿಲ್ಲರ್ ಅವರನ್ನು ಕೈಬಿಡಲಾಗಿದೆ. ಇಂತಹ ಕ್ರಮ, ತಂಡದಲ್ಲಿನ ಏಕತೆಗೆ ಸಮಸ್ಯೆಯಾದರೆ ಆಗಷ್ಟೇ ವಿದೇಶಿ ತಂಡಗಳು ಇದೇ ಮೊದಲ ಬಾರಿಗೆ ಚಿನ್ನದ ಪದಕದತ್ತ ಗುರಿ ಇಡಬಹುದು! ದುಬೈ ಮಾಸ್ಟರ್ನ ಫಲಿತಾಂಶ ಲೆಕ್ಕಕ್ಕೇ ಬರುವುದಿಲ್ಲ. ಅಲ್ಲಿ ಕಣಕ್ಕಿಳಿದಿದ್ದು ಇರಾನ್‌ನ ಎರಡನೇ ಪಂಕ್ತಿಯ ಯುವಕ ತಂಡ. ಎಂದಿನಂತೆ ದಕ್ಷಿಣ ಕೊರಿಯಾ, ಬಾಂಗ್ಲಾ, ನೇಪಾಳ, ಶ್ರೀಲಂಕಾ ತಂಡಗಳ ಸ್ಪರ್ಧೆ ಭಾರತಕ್ಕೆ ಪೈಪೋಟಿಯನ್ನು ನೀಡಬಹುದು. ನೆನಪಿರಲಿ, ಉಳಿದ ತಂಡಗಳಿಗೆ ಕಳೆದುಕೊಳ್ಳುವುದು ಏನೂ ಇಲ್ಲ! ಭಾರತದ ರಿಶಾಂಕ್ ದೇವಾಡಿಗ ಹೇಳುವುದು ಇದನ್ನೇ, ಇರಾನ್‌ನ ಆಟಗಾರರು ತಮ್ಮ ಆಟದ ರೀತಿಯನ್ನು ಬದಲಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಹೊಸ ಮಾದರಿಯನ್ನು ಪ್ರೊ ಕಬಡ್ಡಿಯಲ್ಲಿ ಭಾಗವಹಿಸಿ ಕಲಿತಿದ್ದಾರೆ! ಭಾರತ ತನ್ನ ಚಿನ್ನದ ಸಂಭ್ರಮದಿಂದ ಒಂದು ಹೆಜ್ಜೆ ಹಿಂದೆ ಇರಿಸುವುದು ಕೂಡ ಅವಮಾನಕರ. ಅಂದರೆ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಚಿನ್ನಕ್ಕಿಂತ ಕಡಿಮೆ ಪದಕ ಸಂಪಾದನೆಯನ್ನು ಕಬಡ್ಡಿ ಕೋಚ್ ಶ್ರೀನಿವಾಸ ರೆಡ್ಡಿ ಕ್ಷಮಿಸುವುದಿಲ್ಲ.
Related Articles
Advertisement
ಒಂದು ಸೋಲು, ಅದೇ ಪಾಠ!: 1982ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಪ್ರದರ್ಶನ ಸ್ಪರ್ಧೆಯಾಗಿದ್ದ ಕಬಡ್ಡಿ ತುಂಬಾ ಹಿಂದೆ 1936ರಲ್ಲೊಮ್ಮೆ ಒಲಂಪಿಕ್ಸ್‌ನಲ್ಲೂ ಪ್ರದರ್ಶನ ಸ್ಪರ್ಧೆಯಾಗಿತ್ತು ಎಂಬ ಮಾಹಿತಿ ಕೆದಕಿದಾಗ ಸಿಗುತ್ತದೆ. 1990ರಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಭಾರತ ಕಬಡ್ಡಿ ಚಿನ್ನ ಗೆದ್ದಾಗ ಭಾರತದ ಅಂತಿಮ ಪದಕ ಪಟ್ಟಿಯಲ್ಲಿ ಭಾರತದ ಚಿನ್ನದ ಪದಕದ ಕಾಲಂನಲ್ಲಿ ಕಂಡಿದ್ದು ಇದೊಂದೇ ಚಿನ್ನ! ಭಾರತ ಸತತ ಮೂರು ಕಬಡ್ಡಿ ವಿಶ್ವಕಪ್‌ನ್ನು 2004, 2007 ಹಾಗೂ 2016ರಲ್ಲಿ ಗೆದ್ದಿದೆ. ಈಗಲೂ ಅದೇ ಏಷ್ಯಾಡ್ ಚಿನ್ನದ ಏಕೈಕ ಫೇವರಿಟ್. 2016ರ ಕಬಡ್ಡಿ ವಿಶ್ವಕಪ್‌ನ ಲೀಗ್‌ನಲ್ಲಿ ದಕ್ಷಿಣ ಕೊರಿಯಾ ಎದುರು ಮೊತ್ತಮೊದಲ ಬಾರಿಗೆ ಭಾರತ 34-32ರ ಸೋಲು ಕಂಡಿತ್ತು ಎಂಬುದನ್ನು ಪ್ರತಿ ಬಾರಿ ಅಂಕಣಕ್ಕಿಳಿಯುವಾಗ ಒಮ್ಮೆ ಭಾರತ ನೆನಪಿಸಿಕೊಂಡರೆ ಭಾರತದ ಏಷ್ಯಾಡ್ ಕಬಡ್ಡಿ ಚಿನ್ನದ ಸಂಗ್ರಹ ಒಂದು ಡಜನ್ ದಾಟುತ್ತದೆ!!
ಮಾ.ವೆಂ.ಸ.ಪ್ರಸಾದ್