ಯಲ್ಲಾಪುರ: ರೋಗಗಳನ್ನು ಪತ್ತೆ ಮಾಡುವ ಮತ್ತು ಉಪಶಮನ ಮಾಡುವ ಆರೋಗ್ಯ ಕೇಂದ್ರಕ್ಕೇ ರೋಗ ಹಿಡಿದರೆ ಜನ ಸಾಮಾನ್ಯರ ಪಾಡೇನು?. ಇಂತಹ ಉತ್ತರವಿಲ್ಲದ ಪ್ರಶ್ನೆಗೆ ಸಾಕ್ಷಿಯಾಗಿ ತಾಲೂಕಿನ ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ ತಲುಪಿದೆ.
ವಜ್ರಳ್ಳಿ ಹಳೆಯ ಕಟ್ಟಡವು ಶಿಥಿಲಾವಸ್ಥೆ ತಲುಪಿದಾಗ ಆರೋಗ್ಯ ಇಲಾಖೆಗೆ ಸ್ವಂತ ಜಾಗವೇ ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಕೃಷಿಕರೊಬ್ಬರು ಆಸ್ಪತ್ರೆ ಕಟ್ಟಡಕ್ಕಾಗಿ ಸ್ವಂತ ಜಮೀನನ್ನು ದಾನವಾಗಿ ನೀಡಿದರು. ಹತ್ತಾರು ಕೋಣೆಗಳನ್ನು ಹೊಂದಿ ಸುಸಜ್ಜಿತವಾಗಿತ್ತು.
ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಿಗೆ ಅನುಕೂಲ ಆಗಲೆಂದು ಒಂದು ಕಾಲಕ್ಕೆ 21ಹಾಸಿಗೆ ವ್ಯವಸ್ಥೆ ಇದ್ದ ಈ ವಜ್ರಳ್ಳಿ ಆರೋಗ್ಯ ಕೇಂದ್ರವು 24X7 ಆಗಿ ಮಾರ್ಪಡಿಸಿ ತನ್ನ ಸೇವೆ ಆರಂಭಿಸುವಷ್ಟರಲ್ಲಿ ಅಧಿಕಾರಿಗಳಿಗೆ ನಿತ್ಯದ ತಲೆನೋವಾಗಿ ರೋಗಿಗಳು ಬರುವುದಿಲ್ಲ ಎಂದು ಹೆಚ್ಚಿನ ಅವಧಿಯನ್ನೇ ಕಡಿತ ಮಾಡಿಸಿಕೊಂಡರು. ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಕಳೆದ ವರ್ಷ ಆಗಸ್ಟ್‌ನಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾಯಿತು. ಅಂದು ಕಟ್ಟಡದ ವಿದ್ಯುತ್ ಸಂಪರ್ಕದ ಅವಘಡಕ್ಕೆ ಕಂಪ್ಯೂಟರ್ ಸೇರಿದಂತೆ ಭಾಗಶಃ ಅಗತ್ಯ, ಪ್ರಯೋಗಾಲಯದ ಯಂತ್ರಗಳು, ಪೀಠೊಪಕರಣ ಸೇರಿ ಹಾನಿಗೊಳಗಾದವು. ಲ್ಯಾಬ್‌ನಲ್ಲಿ ತೀರಾ ಅಗತ್ಯ ಔಷಧ ಸಂಗ್ರಹಕ್ಕೆ ರೆಫ್ರಿಜರೇಟರ್‌ಗೆ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದೆ. ಇನ್ನು ರೋಗಿಗಳ ಹಾಸಿಗೆ ಕಬ್ಬಿಣದ ಬೆಡ್, ಕುರ್ಚಿಗಳು ತುಕ್ಕು ಹಿಡಿದಿವೆ. ಶೌಚಾಲಯಕ್ಕೆ ಹೋದರೆ ನಲ್ಲಿಯಲ್ಲಿ ನೀರು ಬಾರದು. ನಲ್ಲಿ ಬಿಟ್ಟರೆ ಅಡಿ ಪೈಪ್ ಸೋರಿ ನೀರು ಮೈಗೆ ಚಿಮ್ಮುವ ಮೂಲಕ ಅರೆಕ್ಷಣದಲ್ಲಿ ಹೌಹಾರಿ ಓಡಿ ಬರುತ್ತೀರಿ. ಕುಡಿಯಲು ನೀರು ಬೇಕು ಅಂದರೆ ಪಕ್ಕದ ಬೋರವೆಲ್ನ ಕೆಸರು ನೀರೇ ಗತಿ. ಇದ್ದ ಜೀವವೂ ಹಾರಿ ಹೋಗುವ ಅಪಾಯ ರೋಗಿಗಳದ್ದು. ವೈದ್ಯರ ಕೋಣೆ ಪ್ರವೇಶ ಮಾಡುತ್ತಲೇ ಪಕ್ಕದಲ್ಲಿ ಬಿರುಕು ಬಿಟ್ಟ ಗೋಡೆ ಕಾಣುತ್ತದೆ.
ವೈದ್ಯರಿಲ್ಲ: ವಾರದ ಎಲ್ಲಾ ದಿನ ನಿತ್ಯ ರೋಗಿಗಳನ್ನು ಉಪಚರಿಸುವ ವೈದ್ಯರೇ ಇಲ್ಲ. ಇದೀಗ ವೈದ್ಯರನ್ನು ನಿಯೋಜಿಸಿದರೂ ವಾರಕ್ಕೆ ಮೂರು ದಿನ ಲಭ್ಯ. ಇನ್ನುಳಿದ ಮೂರುದಿನ ಮೀಟಿಂಗ್, ತರಬೇತಿಗಳಾದರೆ ರೋಗಿಗಳಿಗೆ ವೈದ್ಯರ ದರ್ಶನ ಸಿಗುವುದೇ ಪುಣ್ಯ. ಒಂದೆರೆಡು ಸಿಬ್ಬಂದಿ ಸದ್ಯ ಕಾರ್ಯನಿರ್ವಹಿಸುತ್ತಿದ್ದರೂ ಅವರಿಗೆ ಕಡತದ ಧೂಳು ತೆಗೆಯುವಷ್ಟರಲ್ಲಿ ಸಾಕಾಗಿರುತ್ತದೆ. ಆಸ್ಪತ್ರೆ ಮಾಹಿತಿ ಪ್ರಕಾರ 18 ಸಿಬ್ಬಂದಿ ಈ ಆರೋಗ್ಯ ಕೇಂದ್ರಕ್ಕೆ ಮಂಜೂರಿ ಇದ್ದು ಸದ್ಯ ಹತ್ತು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆ ಖಾಲಿ ಇದೆ. ಇಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ನಾಲ್ಕು ತಿಂಗಳ ಸಂಬಳವಿಲ್ಲದೇ ಉಪವಾಸ. ತೀರಾ ಘಟ್ಟ ಪ್ರದೇಶವಾದ, ಹೊರಜಗತ್ತಿನ ಸಂಪರ್ಕದಿಂದ ವಂಚಿತವಾದ ಇಲ್ಲಿಯ ನಿವಾಸಿಗಳು ದೂರದ ಯಲ್ಲಾಪುರ ಆಸ್ಪತ್ರೆಗೇ ಎಡತಾಕವುದಾದರೆ ಈ ಆಸ್ಪತ್ರೆ ಅವಶ್ಯಕತೆಯಾದರೂ ಏನುಂಟು ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.
•ನರಸಿಂಹ ಸಾತೊಡ್ಡಿ