Advertisement

ವಧುಪರೀಕ್ಷೆಗೆ ಬಂದವನಾರು?

09:38 AM Jan 23, 2020 | mahesh |

ಅಜ್ಜಿ ನಿಧಾನಕ್ಕೆ ಅಪ್ಪನ ಬಳಿ-“ನನ್ನ ದೂರಸಂಬಂಧಿ ಹುಡುಗನೊಬ್ಬ ಪಕ್ಕದ ಊರಿನಲ್ಲಿದ್ದಾನೆ. ಎಂಜಿನಿಯರ್‌ ಆಗಿ, ಒಳ್ಳೆ ಸಂಬಳ ಪಡೆಯುತ್ತಿದ್ದಾನೆ. ಒಳ್ಳೆಯ ಮನೆತನ, ಸಭ್ಯಸ್ತ ಹುಡುಗ. ನೋಡೋಣವಾ?’ ಎಂದು ಹೇಳಿ, ಅಪ್ಪನನ್ನು ವಧು ಪರೀಕ್ಷೆಗೆ ಒಪ್ಪಿಸಿದಳು.

Advertisement

ಎಂ.ಎಸ್ಸಿಗೆ ಅಡ್ಮಿಶನ್‌ ಮಾಡಿಸುವಾಗಲೇ, “ಓದು ಮುಗಿದ ತಕ್ಷಣ ನಾನು ಹೇಳಿದ ಹುಡುಗನೊಂದಿಗೆ ಮದುವೆ ಮಾಡಿಕೊಳ್ಬೇಕು’ ಎಂದು ಷರತ್ತು ಹಾಕಿದ್ದರು ಅಪ್ಪ. “ಸರಿ’ ಎಂದು ತಲೆಯಾಡಿಸಿ ಕಾಲೇಜಿನ ಮೆಟ್ಟಿಲು ಹತ್ತಿದ್ದಾಗ, ನಮ್ಮ ಕಾಲೇಜಿಗೆ ಸೋಲಾರ್‌ ವರ್ಕ್‌ ಮಾಡಲು ಬಂದಿದ್ದ ಎಂಜಿನಿಯರ್‌ ಒಬ್ಬ ನನ್ನ ಮನ ಕದ್ದು, ಹೃದಯದ ಗೋಡೆ ಮೇಲೆ ಅಂದವೆಂಬ ಕುಂಚದಿಂದ ಪ್ರೀತಿಯ ಚಿತ್ರ ಬಿಡಿಸಿದ್ದ. ನಮ್ಮ ಪ್ರೀತಿ ಬಿಟ್ಟಿರಲಾರದಷ್ಟು ಆಳವಾಗಿ ಹೋಗಿತ್ತು.

ಕೊನೆಯ ಸೆಮ್‌ನಲ್ಲಿದ್ದಾಗ ಅಪ್ಪ, “ಇನ್ನು ಹುಡುಗನನ್ನು ನೋಡೋಕೆ ಪ್ರಾರಂಭಿಸಬೇಕು’ ಅಂತ ಅಮ್ಮನ ಬಳಿ ಹೇಳಿದ್ದನ್ನು ಕೇಳಿ, ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಅಪ್ಪನ ಬಳಿ ಪ್ರೀತಿಯ ವಿಷಯ ಹೇಳಲು ನನಗಂತೂ ಧೈರ್ಯ ಇರಲಿಲ್ಲ. ಅವನು ಆಗಲೇ, ತನ್ನ ಮನೆಯಲ್ಲಿ ಎಲ್ಲರಿಗೂ ನನ್ನ ಫೋಟೊ ತೋರಿಸಿ ಒಪ್ಪಿಸಿಬಿಟ್ಟಿದ್ದ. ಅವನ ಬಗ್ಗೆ ಮನೆಯಲ್ಲಿ ಹೇಳಲೂ ಆಗದೆ, ಅವನನ್ನು ಮರೆಯಲೂ ಆಗದೆ, ಒಳಗೊಳಗೇ ಒದ್ದಾಡುತ್ತಿದ್ದೆ. ಕೊನೆಗೆ, ಆದದ್ದಾಗಲಿ ಅಂತ ಒಂದು ಉಪಾಯ ಮಾಡಿದೆ. ಅಜ್ಜಿಗೆ ವಿಷಯ ಹೇಳಿದರೆ, ಅವಳು ಅಪ್ಪನನ್ನು ಒಪ್ಪಿಸಬಹುದೇನೋ ಅನ್ನಿಸಿತ್ತು. ಎರಡು ದಿನ ಅಜ್ಜಿ ಮನೆಗೆ ಹೋಗಿ ಬರುತ್ತೇನೆಂದು ಹೇಳಿ, ಅಜ್ಜಿ ಊರಿಗೆ ಹೋದೆ. ಅವಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ನಿಧಾನಕ್ಕೆ ನನ್ನ ಪ್ರೀತಿ ವಿಷಯ ತಿಳಿಸಿದೆ. ಅದೇ ಸಮಯಕ್ಕೆ, ನನ್ನ ಹುಡುಗನನ್ನೂ ಅಲ್ಲಿಗೆ ಕರೆಸಿ, ಅಜ್ಜಿಯ ಕಾಲಿಗೆ ಬೀಳಿಸಿದೆ! ಪುಣ್ಯಕ್ಕೆ ಅಜ್ಜಿ, ಅವನ ವ್ಯಕ್ತಿತ್ವಕ್ಕೆ ಫಿದಾ ಆಗಿಬಿಟ್ಟಳು. “ನಿಮ್ಮಪ್ಪನನ್ನು ಒಪ್ಪಿಸುವ ಜವಾಬ್ದಾರಿ’ ನನ್ನದು ಅಂತ ಮಾತೂ ಕೊಟ್ಟಳು. ಆದರೂ, ನನ್ನಪ್ಪ ಪ್ರೀತಿ-ಗೀತಿಯನ್ನು ಒಪ್ಪುವ ಆಸಾಮಿ ಅಲ್ಲ ಅಂತ ನನಗೆ ಗೊತ್ತಿತ್ತು.

ಅಜ್ಜಿಯೂ ನನ್ನೊಡನೆ ಊರಿಗೆ ಬಂದಳು. ಅದಾಗಲೇ ಅಪ್ಪ, ನನ್ನ ವಧುಪರೀಕ್ಷೆಗೆ ದಿನ ಗೊತ್ತು ಮಾಡಿದ್ದರು. “ಈ ಭಾನುವಾರ ನಿನ್ನನ್ನು ನೋಡಲು ದೊಡ್ಡ ನೌಕರಿಯಲ್ಲಿರುವ ಹುಡುಗ ಬರುತ್ತಿದ್ದಾನೆ, ರೆಡಿಯಾಗಿರು’ ಅಂತ ದೊಡ್ಡ ಧ್ವನಿಯಲ್ಲಿ ಹೇಳಿದಾಗ ಅಳುವೇ ಬಂದುಬಿಟ್ಟಿತ್ತು. ಪ್ರೀತಿಯನ್ನು ಕಳೆದುಕೊಳ್ಳುವೆನೆಂಬ ಭಯ ಕಾಡತೊಡಗಿತ್ತು. “ಶನಿವಾರ ಜೋರು ತಲೆನೋವು ಅಂತ ಮಲಗಿಬಿಡು’ ಎಂದು ಅಜ್ಜಿಯೇ ಐಡಿಯಾ ಕೊಟ್ಟಳು. “ಬೀಸೋ ದೊಣ್ಣೆ ತಪ್ಪಿದರೆ ನೂರು ವರ್ಷ ಆಯಸ್ಸು’ ಅಂತ ನಾನು, ತಲೆನೋವಂತ ಮಲಗಿಬಿಟ್ಟೆ. ಆ ವಧುಪರೀಕ್ಷೆ ಮುಂದಕ್ಕೆ ಹೋಯ್ತು!

ಒಂದೆರಡು ದಿನ ಕಳೆದ ನಂತರ, ಅಜ್ಜಿ ನಿಧಾನಕ್ಕೆ ಅಪ್ಪನ ಬಳಿ-“ನನ್ನ ದೂರಸಂಬಂಧಿ ಹುಡುಗನೊಬ್ಬ ಪಕ್ಕದ ಊರಿನಲ್ಲಿದ್ದಾನೆ. ಎಂಜಿನಿಯರ್‌ ಆಗಿ, ಒಳ್ಳೆ ಸಂಬಳ ಪಡೆಯುತ್ತಿದ್ದಾನೆ. ಒಳ್ಳೆಯ ಮನೆತನ, ಸಭ್ಯಸ್ತ ಹುಡುಗ. ನೋಡೋಣವಾ?’ ಎಂದು ಹೇಳಿ ಒಪ್ಪಿಸಿದಳು. ಕೊನೆಗೂ ನನ್ನ ಕನಸಿನ ಹುಡುಗ ನಿಯಮಕ್ಕೆ ನನ್ನ ವಧುಪರೀಕ್ಷೆಗೆ ಬರುವ ದಿನ ಫಿಕ್ಸ್‌ ಆಯ್ತು.

Advertisement

ಅವನು ನನ್ನ ಪ್ರೇಮಿಯೇ ಆಗಿದ್ದರೂ, ಅಂದೇಕೋ ನನ್ನಲ್ಲಿ ಹೇಳಲಾರದಷ್ಟು ಭಯ, ನಾಚಿಕೆ. ಸೀರೆಯುಟ್ಟು ರೆಡಿಯಾದೆ. ಮನೆ ಮುಂದೆ ಬಂದ ಆಕಳಿಗೆ ರೊಟ್ಟಿ ಕೊಡಲು, “ಬೀಗರು ಬಂದುಬಿಟ್ರೆ?’ ಎಂಬ ಭಯದಿಂದಲೇ ಕಳ್ಳಿಯಂತೆ ಹೊರಹೋದಾಗ, “ಅಯ್ಯೋ, ಬೀಗರು ಬಂದೇ ಬಿಟ್ರಾ’ ಎಂದು ತಮ್ಮ ಕೂಗಿದಾಗ ಎದ್ದೋ ಬಿದ್ದೋ ಎನ್ನುವಂತೆ ಒಳಗೆ ಓಡಿಬಂದು ರೂಮ್‌ ಸೇರಿಕೊಂಡೆ.

ಅದುವರೆಗೆ ಎಷ್ಟೋ ಪರೀಕ್ಷೆ ಎದುರಿಸಿದ್ದೆ. ಆದರೆ, ಪ್ರೀತಿಸಿದ ಹುಡುಗನ ವಧುಪರೀಕ್ಷೆಗೆ ನಾಚಿ ನೀರಾಗಿದ್ದೆ. ಹುಡುಗನ ಮನೆಯವ್ರು ಬಂದು ಕುಳಿತು, ಕ್ಷೇಮವೆಲ್ಲಾ ವಿಚಾರಿಸಿ, ಹುಡುಗಿಯನ್ನು ಕರೆಯಿರಿ ಅಂದಾಗ ಕೈಕಾಲು ಹಿಡಿತ ತಪ್ಪಿ ನಡುಗಲಾರಂಭಿಸಿದವು. ತಲೆ ತಗ್ಗಿಸಿಕೊಂಡೇ ಹೋಗಿ ಎಲ್ಲರಿಗೂ ಚಹಾ ಕೊಟ್ಟು, ಹಾಗೇ ಬಂದು ರೂಮ್‌ ಸೇರಿಕೊಂಡು, ನಿಟ್ಟುಸಿರು ಬಿಟ್ಟೆ. ಅವತ್ತು ಅವನನ್ನು ತಲೆ ಎತ್ತಿ ನೋಡಲೇ ಇಲ್ಲ.

ಅವರು ವಾಪಸ್‌ ಮನೆ ಮುಟ್ಟುವ ಮುನ್ನವೇ “ಹುಡುಗಿ ಓಕೆ’ ಎಂದರು. ಅಪ್ಪನಿಗೂ ಹುಡುಗ ಇಷ್ಟ ಆಗಿದ್ದ. ಅಜ್ಜಿಯ ಪ್ಲಾನ್‌ ಸಕ್ಸಸ್‌ ಆಗಿತ್ತು, ಮದ್ವೆ ಫಿಕ್ಸ್‌ ಆಯ್ತು. ಮದುವೆ ದಿನ ನನ್ನ ಗೆಳತಿಯರಿಂದ ಅಪ್ಪನಿಗೆ ಸತ್ಯ ಗೊತ್ತಾಗಿಹೋಯ್ತು. ಆಗ ಅಪ್ಪ ನಕ್ಕು ನನ್ನೆಡೆ ನೋಡಿ, ಸುಮ್ಮನಾದ್ರು.

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ É uv.avalu@gmail.comಗೆ ಬರೆದು ಕಳಿಸಿ.)

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next