ಹೊಸದಿಲ್ಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಇಂಡಿಯಾ ಬಣವನ್ನು ಲೇವಡಿ ಮಾಡಿದ್ದಾರೆ. ಅವಿಶ್ವಾಸ ನಿರ್ಣಯವನ್ನು ತಂದವರಿಗೆ ಅದರಲ್ಲಿ ವಿಶ್ವಾಸವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬುಧವಾರ ಪ್ರಧಾನಿಯವರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಮಾತಿನ ದಾಳಿಗೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ನಿನ್ನೆ ರಾಹುಲ್ ಗಾಂಧಿ ಅವರು ಪ್ರಧಾನಿಯವರಿಗೆ ಮಣಿಪುರ ಭಾರತದ ಭಾಗವಲ್ಲ ಎಂದಿದ್ದರು. ಆದರೆ ಈ ಪ್ರಧಾನಿ ಈಶಾನ್ಯವನ್ನು ಪ್ರಪಂಚದೊಂದಿಗೆ ಜೋಡಿಸಿದ್ದಾರೆ, ಅವರು ಈಶಾನ್ಯದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ, ಭಾರತವನ್ನು ಇಬ್ಭಾಗವಾಗಿ ನೋಡುವ ಸಿದ್ಧಾಂತ ನಿಮ್ಮದು, ನಮ್ಮದಲ್ಲ” ಎಂದು ಸಿಂಧಿಯಾ ಹೇಳಿದರು.
ಇದನ್ನೂ ಓದಿ:No trust motion;ಭಾಷಣಕ್ಕೆ ಕ್ಷಣಗಣನೆ-ವಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಮೋದಿ ಉತ್ತರ
“ನಾನು ಸಂಸತ್ತಿನಲ್ಲಿ 20 ವರ್ಷಗಳನ್ನು ಕಳೆದಿದ್ದೇನೆ, ಆದರೆ ಇಂತಹುದನ್ನು ನಾನು ಎಂದಿಗೂ ನೋಡಿಲ್ಲ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ, 140 ಕೋಟಿ ಭಾರತೀಯರ ಹೃದಯದಲ್ಲಿ ನೆಲೆಸಿರುವ ಪ್ರಧಾನಿಯ ಬಗ್ಗೆ ಪ್ರತಿಪಕ್ಷಗಳು ಬಳಸಿದ ಪದಕ್ಕಾಗಿ ಸಂಸತ್ತಿನ ಮುಂದೆ ಇಲ್ಲದಿದ್ದರೆ ದೇಶದ ಜನರ ಮುಂದೆ ಕ್ಷಮೆಯಾಚಿಸಬೇಕಾಗುತ್ತದೆ” ಎಂದು ಅವರು ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಹೇಳಿದರು.
“ಈ ಅವಿಶ್ವಾಸ ನಿರ್ಣಯವು ಮಣಿಪುರದ ಬಗ್ಗೆ ಅಲ್ಲ, ಇದು ಅವರ ರಾಜಕೀಯ ಕೇಕ್ ಅನ್ನು ಬೇಯಿಸುವ ನೆಪವಾಗಿದೆ, ಸಂಸತ್ತಿನ ಹೊರಗೆ ಮಣಿಪುರ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಸೂಕ್ಷ್ಮ ಹೇಳಿಕೆ ನೀಡಿದ್ದಾರೆ ಆದರೆ ಅವರು ಸಂಸತ್ತಿನ ಒಳಗೆ ಮಾತನಾಡಬೇಕು ಎಂದು ಅವರು ಹಠ ಮಾಡುತ್ತಿದ್ದಾರೆ” ನಾಗರಿಕ ವಿಮಾನಯಾನ ಸಚಿವರು ಹೇಳಿದರು.