ಮಧ್ಯ ಪ್ರದೇಶ : ಈತ ಎಂಬಿಎ ಪದವಿ ಮುಗಿಸಿ, ಜೀವನದ ನೌಕೆ ಸಾಗಿಸಲು ಒಂದು ಜಾಬ್ ಗಿಟ್ಟಿಸಿಕೊಂಡು ನೆಮ್ಮದಿಯಾಗಿ ಇರಬಹುದಿತ್ತು. ಆದರೆ, ಮಧ್ಯಮ ವರ್ಗದ ಕುಟುಂಬದಲ್ಲಿ ಜನಸಿದ ಈ ಉತ್ಸಾಹಿ ಹುಡುಗ ಹಾಗೆ ಮಾಡಲಿಲ್ಲ. ಇವನ ಕಣ್ಣುಗಳಲ್ಲಿ ನಿರೀಕ್ಷೆಗಳ ಹೊಳೆ ಹರಿಯುತ್ತಿತ್ತು. ತಡಮಾಡದೆ ಶಿಕ್ಷಣಕ್ಕೆ ಶರಣು ಹೇಳಿ ಟೀ ಮಾರಲು ಮುಂದಾಗುತ್ತಾನೆ. ಮುಂದೆ ಈತ ವರ್ಷಕ್ಕೆ 3 ಕೋಟಿ ರೂ. ಸಂಪಾದಿಸುವ ಸಾಹಸಿ ಸಾಧಕನಾಗುತ್ತಾನೆ.
ಹೌದು, ಇದು ಯಾವುದೋ ಸಿನಿಮಾದಲ್ಲಿಯ ಅಥವಾ ಕಾದಂಬರಿಯಲ್ಲಿ ಬರುವ ಕಥೆಯಲ್ಲ. ‘ನಾನು ಎಲ್ಲರಂತೆ ಅಲ್ಲ, ಬದುಕಲು ಡಿಗ್ರಿ ಸರ್ಟಿಫಿಕೇಟ್ ಬೇಕಾಗಿಲ್ಲ, ಬೇಕಿರುವುದು ಆತ್ಮವಿಶ್ವಾಸ ಹಾಗೂ ಛಲ ಎಂದು ಎಲ್ಲರಿಗೂ ತೋರಿಸಿಕೊಟ್ಟ 22 ವರ್ಷ ವಯಸ್ಸಿನ ಸಾಹಸಿ ಯುವಕ ಪ್ರಪುಲ್ ಬಿಲ್ಲೋರ್ ಅವರ ರಿಯಲ್ ಕಹಾನಿ.
ಕಿರಿಯ ವಯಸ್ಸಿನಲ್ಲಿಯೇ ಪ್ರಪುಲ್ ಕೋಟ್ಯಧಿಪತಿಯಾಗಿದ್ದಾನೆ. ನಮ್ಮ ಬದುಕು ಇಷ್ಟಕ್ಕೆ ಮುಗಿತು ಎಂದು ಜಿಗುಪ್ಸೆ ಪಟ್ಟುಕೊಳ್ಳುವ ಅದೆಷ್ಟೋ ಜನರಿಗೆ ಸ್ಪೂರ್ತಿಯ ಚಿಲುಮೆ ಆಗಿದ್ದಾನೆ. ಶ್ರದ್ಧೆ, ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಅಷ್ಟಕ್ಕೂ ಪ್ರಪುಲ್ ಸಾಧಿಸಿದ್ದು ಏನು ಗೊತ್ತಾ? ರಸ್ತೆ ಬದಿ ಚಾಯ್ ಮಾರಿ ಕೋಟಿ ಕೋಟಿ ಹಣ ಗಳಿಸುತ್ತಿರುವ ಈ ಯುವಕನ ಅಸಲಿ ಕಥೆ ಇಲ್ಲಿದೆ ನೋಡಿ.
ಸಿಎಟಿ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗದ ಪ್ರಫುಲ್ ಶಿಕ್ಷಣವನ್ನೇ ಮೊಟಕುಗೊಳಿಸಲು ಮುಂದಾಗುತ್ತಾನೆ. ಆದರೆ, ಈತನ ತಂದೆ ತಾಯಿಗಳು ಕೇಳಬೇಕಲ್ಲ. ಎಲ್ಲ ಪೋಷಕರಂತೆ ತನ್ನ ಮಗ ಒಂದು ಡಿಗ್ರಿ ಮುಗಿಸಿ ಎಲ್ಲಿಯಾದರೂ ಕೆಲಸಕ್ಕೆ ಸೇರಲಿ ಎನ್ನುವುದು ಪ್ರಪುಲ್ ಪಾಲಕರ ಬಯಕೆಯಾಗಿರುತ್ತದೆ.
ಶಿಕ್ಷಣಕ್ಕೆ ಗುಡ್ ಬೈ ಹೇಳಿ ದೇಶ ಸಂಚಾರಕ್ಕೆ ಅಣಿಯಾಗಬೇಕೆಂದು ಯೋಜನೆ ಹಾಕಿಕೊಂಡಿದ್ದ ಪ್ರಫುಲ್, ಪಾಲಕರ ಒತ್ತಾಸೆಗೆ ಮಣಿದು ಅಹ್ಮದಾಬಾದ್‍ನಲ್ಲಿರುವ ಕಾಲೇಜ್‍ವೊಂದರಲ್ಲಿ ಎಂಬಿಎ ಅಡ್ಮಿಷನ್ ಪಡೆಯುತ್ತಾನೆ. ಕಾಲೇಜಿಗೆ ಹೋಗುವುದರ ಜತೆಗೆ ರೆಸ್ಟೋರೆಂಟ್‍ವೊಂದರಲ್ಲಿ ಪಾರ್ಟ್ ಟೈಮ್ ಜಾಬ್‍ಗೆ ಸೇರಿಕೊಳ‍್ಳುತ್ತಾನೆ.
ಅದೊಂದು ದಿನ ತಾನೇ ಒಂದು ಟೀ ಅಂಗಡಿ ತೆರೆಯುವ ಯೋಚನೆ ಈತನ ಮಿದುಳಿನಲ್ಲಿ ಮಿಂಚಿನಂತೆ ಸುಳಿಯುತ್ತದೆ. ತಡಮಾಡದೆ ಅಹ್ಮದಾಬಾದ್‍ನಲ್ಲಿ ರಸ್ತೆ ಬದಿ ಪುಟ್ಟ ಟೀ ಸ್ಟಾಲ್ ಶುರು ಮಾಡುತ್ತಾನೆ. ಮೊದಲ ದಿನ ಈತ ಮಾರಿದ್ದು ಕೇವಲ ಒಂದು ಟೀ ಮಾತ್ರ.
ಪ್ರಪುಲ್‍ನ ಈ ನಿರ್ಧಾರಕ್ಕೆ ಯಾರ ಬೆಂಬಲವೂ ಸಿಗುವುದಿಲ್ಲ. ಬದಲಾಗಿ ಈತನನ್ನು ನೋಡಿ ಗೇಲಿ ಮಾಡಿ ಹೀಯಾಳಿಸಿದವರೇ ಜಾಸ್ತಿ. ಸಂಬಂಧಿಕರು, ಸ್ನೇಹಿತರು ಯಾರೂ ಕೂಡ ಪ್ರಪುಲ್‍ನ ಬೆನ್ನಿಗೆ ನಿಲ್ಲುವುದಿಲ್ಲ. ಇದ್ಯಾವುದರಿಂದಲೂ ಎದೆಗುಂದದ ಪ್ರಫುಲ್ ಟೀ ಮಾರುವುದರಲ್ಲಿಯೇ ಮಗ್ನನಾಗುತ್ತಾನೆ. ಕಾಲೇಜು ತೈಜಿಸಿ ಪೂರ್ಣ ಸಮಯ ಟೀ ಅಂಗಡಿಗೆ ಮೀಸಲಿಡುತ್ತಾನೆ. ಕಷ್ಟ ಪಟ್ಟು ದುಡಿಯುತ್ತಾನೆ. ಕೆಲವು ತಿಂಗಳುಗಳ ನಂತರ ತಿಂಗಳಿಗೆ 15,000 ರೂ. ಸಂಪಾದಿಸುತ್ತಾನೆ.
ದಿನಗಳು ಉರುಳಿದಂತೆ ಪ್ರಪುಲ್ ತಯಾರಿಸುವ ಟೀ ಫೇಮಸ್ ಆಗುತ್ತದೆ. ಗ್ರಾಹಕರ ಜತೆ ಈತನ ಒಡನಾಟ ಪ್ರಫುಲ್ ಕೈ ಹಿಡಿಯುತ್ತದೆ. ತನ್ನ ಅಂಗಡಿಗೆ ‘ಎಂಬಿಎ ಚಾಯ್ ವಾಲಾ ’ ಎಂದು ನಾಮಕರಣ ಮಾಡುತ್ತಾನೆ. ನೋಡು ನೋಡುತ್ತಿದ್ದಂತೆ ದೊಡ್ಡ ಉದ್ಯಮಿಯಾಗಿ ಬೆಳೆದು ನಿಲ್ಲುತ್ತಾನೆ. ಸದ್ಯ ಪ್ರಪುಲ್ ಎಂಬಿಎ ಚಾಯ್ ವಾಲಾ ಎಂದು ದೇಶದಲ್ಲಿ ಖ್ಯಾತಿ ಪಡೆದಿದ್ದಾನೆ. ವರ್ಷಕ್ಕೆ 3 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾನೆ. ಛಲ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರಪುಲ್ ಉತ್ತಮ ಉದಾಹರಣೆಯಾಗಿದ್ದಾನೆ.
ಇಂದು ಪ್ರಪುಲ್ ಹೆಸರು ದೇಶದಾದ್ಯಂತ ಪಸರಿಸಿದೆ. ಐಐಎಮ್ ಸೇರಿದಂತೆ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಮೋಟಿವೆಷನ್ ಭಾಷಣ ನೀಡಿದ್ದಾನೆ. ಈತನ ಬಳಿ ಸಲಹೆ ಅರಸಿ ಸಾಕಷ್ಟು ಜನರು ಬರುತ್ತಾರೆ.