Advertisement

ಲೋಕ ಸಮರಕ್ಕೆ ಕಲಿಗಳು ಯಾರು?

11:41 AM Jan 24, 2019 | |

ವಿಜಯಪುರ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದರೂ ವಿಜಯಪುರ ಲೋಕಸಭೆ ಕ್ಷೇತ್ರದ ಮಟ್ಟಿಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಳ್ಳದೇ ನೀರಸ ಕಾಣಿಸುತ್ತಿದೆ. ಕಳೆದ ಮೂರು ಅವಧಿಯಿಂದಲೂ ಬಿಜೆಪಿ ಕ್ಷೇತ್ರದಲ್ಲಿ ಹೊಂದಿರುವ ಹಿಡಿತ ಸಡಿಲಿಸಲು ಕಾಂಗ್ರೆಸ್‌ ಹವಣಿಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷದಲ್ಲಿ ಆಕಾಂಕ್ಷಿಗಳ ಸಂಖ್ಯೆ ಆರ್ಧ ಡಜನ್‌ಗೂ ಮೀರಿ ಹೆಸರು ಕೇಳಿ ಬರುತ್ತಿದ್ದು ಹೊರಗಿನ ಪ್ರಭಾವಿಗಳ ಹೆಸರೂ ಕೇಳಿ ಬರುತ್ತಿದೆ. ಜೆಡಿಎಸ್‌ ಕೂಡ ಈ ಬಾರಿ ಮೈತ್ರಿ ಅವಕಾಶ ಸಿಕ್ಕರೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ.

Advertisement

ವಿಜಯಪುರ ಲೋಕಸಭೆ ಕ್ಷೇತ್ರ 2008ರಿಂದ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಈ ಅವಧಿಯಲ್ಲಿ ನಡೆದ ಸತತ ಎರಡು ಚುನಾವಣೆಯಲ್ಲೂ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅಯ್ಕೆಯಾಗಿದ್ದಾರೆ. ಅ ಮೂಲಕ ಬಿಜೆಪಿ ಇಲ್ಲಿ ಹ್ಯಾಟ್ರಿಕ್‌ ವಿಜಯ ಸಾಧಿಸಿರುವ ಬಿಜೆಪಿ ಭದ್ರಕೋಟೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಈ ಬಾರಿಯೂ ಬಹುತೇಕ ರಮೇಶ ಜಿಗಜಿಣಗಿ ಅವರ ಸ್ಪರ್ಧೆ ಖಚಿತ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಅದರೆ ಬಿಜೆಪಿ ಪರಿಸ್ಥಿತಿ ಈ ಬಾರಿ ಸರಿ ಇಲ್ಲ.

ಕಳೆದ ವಿಧಾನಸಭೆ ಚುನಾವಣೆ ಹಂತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವಿಠಲ ಕಟಕದೊಂಡ ಅವರು ನಾಗಠಾಣ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗದಿದ್ದರಿಂದ ಕಾಂಗ್ರೆಸ್‌ ಸೇರಿದ ನಂತರ ಬಿಜೆಪಿಗೆ ಜಿಲ್ಲಾಧ್ಯಕ್ಷರ ನೇಮಕವೇ ಆಗಿಲ್ಲ. ಪಕ್ಷದಲ್ಲಿ ಜಿಗಜಿಣಗಿ, ಯತ್ನಾಳ, ಪಟ್ಟಣಶೆಟ್ಟಿ ಬಣ ಅಂತೆಲ್ಲ ಹೆಚ್ಚಿರುವ ಗುಂಪುಗಾರಿಕೆ ಕಾರಣ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಜಿಗಜಿಣಗಿ ಅವರು ಮತ್ತೆ ಸ್ಪರ್ಧಿಸದಂತೆ ನೋಡಿಕೊಳ್ಳಲು ಕೇಂದ್ರದ ಮಾಜಿ ಸಚಿವರೂ ಆಗಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಂಪು ಪ್ರಯತ್ನ ನಡೆಸಿದೆ. ಇದಕ್ಕೆ ಪೂರಕ ಎಂಬಂತೆ ರಾಘವ ಅಣ್ಣಿಗೇರಿ ಸೇರಿದಂತೆ ಯತ್ನಾಳ ಬೆಂಬಲಿಗರು ರಮೇಶ ಜಿಗಜಿಣಗಿ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಸಂಸದರಿಗೆ ದಿನಕ್ಕೊಂದು ಪ್ರಶ್ನೆ ಎಂದು ವಿರೋಧಿ ಅಭಿಯಾನ ಆರಂಭಿಸಿದೆ. ಇದರೊಂದಿಗೆ ಜಿಗಜಿಣಗಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ಜನವಿರೋಧಿ ಅಭಿಮತ ಮೂಡಿಸಲು ಮುಂದಾಗಿದೆ. ಮತ್ತೂಂದೆಡೆ ಜಿಗಜಿಣಗಿ ಅವರನ್ನು ಸಮರ್ಥಿಸಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಕೃಷ್ಣ ಗುನಾಳಕರ ಸಮರ್ಥ ಪರ್ಯಾಯ ಅಭ್ಯರ್ಥಿ ಯಾರಿದ್ದಾರೆ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡುತ್ತಿದ್ದಾರೆ.

ಇದರೊಂದಿಗೆ ಪಕ್ಷದ ಈ ಆಂತರಿಕ ಬೀದಿ ಜಗಳ ಬಿಡಿಸಲು ಸಮರ್ಥ ನಾಯಕತ್ವ ಹಾಗೂ ಜಿಲ್ಲಾಧ್ಯಕ್ಷರೇ ಇಲ್ಲದೇ ಬಿಜೆಪಿ ಸ್ವಯಂ ಮಾನ ಹರಾಜು ಹಾಕಿಕೊಳ್ಳುತ್ತಿದೆ. ಇದರ ಲಾಭ ಪಡೆಯಲು ಯೋಚಿಸುತ್ತಿರುವ ಮಾಜಿ ಪೊಲೀಸ್‌ ಅಧಿಕಾರಿ ಮಹೇಂದ್ರ ನಾಯಕ, ಮಾರುತಿ ಬಂಡಿ ಅವರೂ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ.

Advertisement

ಇನ್ನು ಈ ಬಾರಿ ಶತಾಯಗತಾಯ ವಿಜಯಪುರ ಕ್ಷೇತ್ರದ ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್‌ ಹವಣಿಕೆ ನಡೆಸಿದೆ. ಮಾಜಿ ಶಾಸಕರಾದ ವಿಠಲ ಕಟಕದೊಂಡ, ರಾಜು ಆಲಗೂರ, ಜಿಪಂ ಮಾಜಿ ಅಧ್ಯಕ್ಷ ಆರ್ಜುನ ರಾಠೊಡ, ಕಾಂತಾ ನಾಯಕ, ಶ್ರೀದೇವಿ ಉತ್ಲಾಸಕರ, ಮನೋಹರ ಐನಾಪುರ ಸೇರಿದಂತೆ ಹಲವರು ಟಿಕೇಟ್ಗಾಗಿ ಜಿಲ್ಲಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದಾರೆ.

ಆದರೆ ಈ ಬಾರಿ ಜಿಗಜಿಣಗಿ ಅವರನ್ನು ಸೋಲಿಸಲು ಇನ್ನೂ ಪ್ರಬಲ ಅಭ್ಯರ್ಥಿ ಹುಟುಕಾಟದಲ್ಲಿ ತೊಡಗಿದೆ. ಕಲಬುರಗಿ ಮೀಸಲು ಕ್ಷೇತ್ರದಲ್ಲಿ ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯ ಸರ್ಕಾರದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ ನಿಭಾಯಿಸಿ ನಿವೃತ್ತರಾಗಿರುವ ರತ್ನಫ‌್ರಭಾ ಆವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಹೀಗಾಗಿ ಈ ಬಾರಿ ಸೋಲುವ ಭೀತಿ ಎದುರಿಸುತ್ತಿರುವ ಖರ್ಗೆ ಅವರನ್ನು ವಿಜಯಪುರಕ್ಕೆ ಕರೆ ತರುವ ಯತ್ನಗಳು ಪಕ್ಷದ ವಲಯದಲ್ಲಿ ನಡೆದಿವೆ. ಇದಲ್ಲದೇ ವಿಜಯಪುರ ಜಿಲ್ಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಾಗೂ ತಮ್ಮ ಸಮಾಜದ ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಕೇಂದ್ರದ ಮಾಜಿ ಸಚಿವ ಸುಶೀಲಕುಮಾರ ಸಿಂಧೆ ಅವರ ಪುತ್ರಿ ಪ್ರಣತಿ ಅವರನ್ನು ಜಿಗಜಿಣಗಿ ಮಣಿಸಲು ಕಣಕ್ಕಿಳಿಸುವ ಯತ್ನಗಳೂ ನಡೆದಿವೆ. ಮತ್ತೂಂದೆಡೆ ಮಾಜಿ ಸಚಿವ ಶಿವರಾಜ್‌ ತಂಗಡಗಿ ಕೂಡ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. ಕಾರಣ ಕಾಂಗ್ರೆಸ್‌ ಸತತ ಸೋಲಿನ ಸೇಡು ತೀರಿಸಿಕೊಳ್ಳಲು ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ.

ಇನ್ನು ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಹೊಂದಿರುವ ಹಾಗೂ ಇತರೆ ಕೆಲ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡಿರುವ ಜೆಡಿಎಸ್‌ ಕೂಡ ಸ್ಪರ್ಧೆಗೆ ಚಿಂತನೆ ನಡೆಸಿದೆ. ಒಂದೊಮ್ಮೆ ರಾಜ್ಯದ ಮೈತ್ರಿ ಸರ್ಕಾರದ ಪಾಲುದಾರ ಕಾಂಗ್ರೆಸ್‌ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟರೆ ವಿಜಯಪುರ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಜೆಡಿಎಸ್‌ ಪಕ್ಷಕ್ಕೆ ವಿಜಯಪುರ ಬಿಟ್ಟುಕೊಟ್ಟರೆ ಕಾಂಗ್ರೆಸ್‌ನ ಮೂವರು ಶಾಸಕರ ಬೆಂಬಲದೊಂದಿಗೆ ಗೆಲುವು ಸುಲಭ ಎಂಬ ಲೆಕ್ಕಾಚಾರ ನಡೆಸಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಪೊಲೀಸ್‌ ಅಧಿಕಾರಿ ಬೆಳ್ಳುಬ್ಬಿ, ಸಿದ್ದು ಕಾಮತ್‌ ಮಾತ್ರವಲ್ಲ ಜೆಡಿಎಸ್‌ ಪರಿಶಿಷ್ಟ ಘಟಕದ ಆನಂದ ಅಂಜಿನಪ್ಪ ಎಂಬವರು ಕೂಡ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ಹೊರತಾಗಿಯೂ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ಈ ವರೆಗೆ ರಾಜಕೀಯ ವಲಯದ ಮಂದಿ ನಿರೀಕ್ಷಿಸಿದ ಪ್ರಮಾಣದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಚಟುವಟಿಕೆಗಳು ಮಾತ್ರ ಬಿರುಸುಗೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next