Advertisement

ವೈಟ್‌ಟಾಪಿಂಗ್‌ ಪುನರಾರಂಭ ಶೀಘ್ರ

12:18 PM Jul 30, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಮತ್ತೆ ಆರಂಭಿಸಲಿರುವ ಬಿಬಿಎಂಪಿ, ನಗರದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ.

Advertisement

ವಿವಿಧ ಇಲಾಖೆಗಳೊಂದಿಗೆ ಇತ್ತೀಚೆಗೆ ಸಮನ್ವಯ ಸಮಿತಿ ಸಭೆ ನಡೆಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ, ವೈಟ್‌ಟಾಪಿಂಗ್‌ ಪೂರ್ಣಗೊಳಿಸಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದಾರೆ.

ಹೆಬ್ಟಾಳದಿಂದ ಹೆಣ್ಣೂರು, ನಾಯಂಡಹಳ್ಳಿ ಜಂಕ್ಷನ್‌ನಿಂದ ಸುಮನಹಳ್ಳಿ, ರಾಜ್‌ಕುಮಾರ್‌ ಸ್ಮಾರಕದಿಂದ ಸುಮನಹಳ್ಳಿ ಹಾಗೂ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯ ಟೋಲ್‌ ಗೇಟ್‌ವರೆಗೆ ಕಾಮಗಾರಿ ನಡೆಸಲು ಅನುಮತಿ ದೊರೆಯಲಿದೆ. ಆ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 

ನಗರದ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹಲವು ಪ್ರಮುಖ ರಸ್ತೆಗಳಲ್ಲಿ ಏಕಕಾಲಕ್ಕೆ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭಿಸಿದ್ದರಿಂದ ಪರ್ಯಾಯ ಮಾರ್ಗಗಳಿಲ್ಲದೆ ಜನ ಪರದಾಡಬೇಕಾಯಿತು. ಪಾಲಿಕೆಯ ಈ ಅವೈಜ್ಞಾನಿಕ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.

ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಪಾಲಿಕೆ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲು ಪಾಲಿಕೆ ಅಧಿಕಾರಿಗಳು ಕೋರಿದ್ದರು. ಆದರೆ, ವಾಹನ ದಟ್ಟಣೆ ಉಂಟಾಗುತ್ತದೆ ಎಂಬ ಕಾರಣದಿಂದ ಸಂಚಾರ ಪೊಲೀಸರು ಅನುಮತಿ ನೀಡಿರಲಿಲ್ಲ.

Advertisement

ಈ ವಿಚಾರವನ್ನು ಬಿಬಿಎಂಪಿ ಆಯುಕ್ತರು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕೂಡಲೇ ಅನುಮತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳು ಸಂಚಾರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ವೈಟ್‌ಟಾಪಿಂಗ್‌ ವಸ್ತುಸ್ಥಿತಿ: ನಗರದ ಹೊರ ವರ್ತುಲ ರಸ್ತೆಗಳು ಸೇರಿ ಒಟ್ಟು 29 ರಸ್ತೆಗಳನ್ನು ಪಾಲಿಕೆ ವೈಟ್‌ಟಾಪಿಂಗ್‌ ಅಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಅದರಂತೆ 972.69 ಕೋಟಿ ರೂ. ವೆಚ್ಚದಲ್ಲಿ ಒಟ್ಟು 93.47 ಕಿ.ಮೀ. ಉದ್ದದ ರಸ್ತೆಗಳು ಅಭಿವೃದ್ಧಿಯಾಗಲಿದ್ದು, ಮೊದಲ ಹಂತದಲ್ಲಿ 281 ಕೋಟಿ ರೂ. ವೆಚ್ಚದಲ್ಲಿ ಐದು ಮಾರ್ಗಗಳ 39.80 ಕಿ.ಮೀ. ರಸ್ತೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಈವರೆಗೆ ಪೂರ್ಣಗೊಂಡಿರುವುದು 9.5 ಕಿ.ಮೀ. ಉದ್ದದ ಕಾಮಗಾರಿ ಮಾತ್ರ.

ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿಗಳು, ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಲು ಸಂಚಾರ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ. ಅದರಂತೆ ನಾಲ್ಕು ರಸ್ತೆಗಳಲ್ಲಿ ಏಕಕಾಲದಲ್ಲಿ ಕಾಮಗಾರಿ ನಡೆಸಲು ಅನುಮತಿ ದೊರೆತಿದೆ.
-ಕೆ.ಟಿ.ನಾಗರಾಜ್‌, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next