Advertisement

May 29ರಿಂದ ಶಾಲೆಗಳು ಪುನರಾರಂಭ: ಮುಂದಿನ ವರ್ಷವೂ ಬೋರ್ಡ್‌ ಪರೀಕ್ಷೆ ಫಿಕ್ಸ್‌

10:31 PM Apr 06, 2024 | Team Udayavani |

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2024-25ರ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾ ಯೋಜನೆಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ 29ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.

Advertisement

ಈ ವರ್ಷ ಕಾನೂನಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಮೌಲ್ಯಾಂಕನ ಪರೀಕ್ಷೆ ಮುಂದಿನ ವರ್ಷವು ಮುಂದುವರಿಯಲಿದೆ. ಆದರೆ ಮೌಲ್ಯಾಂಕನದ ಬಗ್ಗೆ ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ಶೈಕ್ಷಣಿಕ ವರ್ಷದ ಮೊದಲ ಅವಧಿ ಮೇ 29ರಿಂದ ಅ. 2ರ ವರೆಗೆ ಎರಡನೇ ಅವಧಿ ಅ. 21ರಿಂದ 2025ರ ಎಪ್ರಿಲ್‌ 10ರ ವರೆಗೆ ಇರಲಿದೆ. ಒಟ್ಟು 244 ಶಾಲಾ ಕರ್ತವ್ಯದ ದಿನಗಳಿರಲಿದ್ದು, 180 ದಿನಗಳು ಕಲಿಕೆ-ಬೋಧನೆ ಪ್ರಕ್ರಿಯೆಗೆ ಉಳಿಯಲಿದೆ. ದಸರಾ ರಜೆ ಅ. 3ರಿಂದ 20ರ ವರೆಗೆ ಇರಲಿದೆ. ಒಟ್ಟಾರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ 121 ದಿನ ರಜೆ ಇರಲಿದೆ.

ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನದ ಉದ್ದೇಶದಿಂದ ಈ ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮಾರ್ಗಸೂಚಿಯಲ್ಲಿ ತಿಂಗಳುವಾರು ಪಾಠ ಹಂಚಿಕೆ, ಪಠ್ಯೇತರ ಚಟುವಟಿಕೆಗಳು, ಫ‌ಲಿತಾಂಶಮುಖೀ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್‌ ಡೇ), ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್‌ ನಿರ್ವಹಣೆ, ಪರೀಕ್ಷೆಗಳು, ಮೌಲ್ಯಾಂಕನ ವಿಶ್ಲೇಷಣೆಗೆ ಅವಕಾಶ ಮತ್ತು ಸಮಯ ನಿಗದಿ ಪಡಿಸಲಾಗಿದೆ.

244 ಶಾಲಾ ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನಕ್ಕಾಗಿ 26 ದಿನ, ಪಠ್ಯೇತರ ಚಟುವಟಿಕೆಗಳಿಗೆ 24 ದಿನ, ಮೌಲ್ಯಮಾಪನ ಮತ್ತು ಫ‌ಲಿತಾಂಶ ನಿರ್ವಹಣೆಗೆ 10 ದಿನ, ಸ್ಥಳೀಯ ರಜೆಗೆ 4 ದಿನವನ್ನು ನಿಗದಿ ನಿಗದಿಪಡಿಸಲಾಗಿದೆ.

Advertisement

ಹಾಗೆಯೇ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಎರಡು ಜತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ, ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳು ತಾಲೂಕುಗಳಿಗೆ ಸರಬರಾಜು ಆಗುತ್ತಿದ್ದು, ಮೊದಲ ಹಂತದಲ್ಲಿ ಎ. 10ರಂದು ಮುಖ್ಯೋಪಾಧ್ಯಯರು ಈ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ.

ಜೂ. 30ರೊಳಗೆ ಶಾಲಾ ದಾಖಾಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ,

ಎಸೆಸೆಲ್ಸಿ ಪರೀಕ್ಷೆ ಮುಕ್ತಾಯ:
ಆಕ್ಷೇಪಣೆಗೆ 8ರ ವರೆಗೆ ಅವಕಾಶ
ಬೆಂಗಳೂರು: ಶನಿವಾರ ದ್ವಿತೀಯ ಭಾಷೆ ಪರೀಕ್ಷೆ ನಡೆಯುವುದರೊಂದಿಗೆ ಪ್ರಸಕ್ತ ವರ್ಷದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ -1 ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಮಾ.15ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಶನಿವಾರ ನಡೆದ ದ್ವಿತೀಯ ಭಾಷೆ ಕನ್ನಡ ಮತ್ತು ಆಂಗ್ಲ ಭಾಷಾ ಪರೀಕ್ಷೆಗೆ 8.41 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 8.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 15,402 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ ಶೇ. 98.2ರ ಹಾಜರಾತಿ ದಾಖಲಾಗಿದೆ. ಪರೀಕ್ಷೆ ಅಕ್ರಮ ವರದಿ ಆಗಿಲ್ಲ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸೆಸೆಲ್ಸಿ ಪರೀಕ್ಷೆ-1ರ ವಿಷಯವಾರು ಕೀ ಉತ್ತರಗಳನ್ನು ತನ್ನ ಜಾಲ ತಾಣದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ ವಿದ್ಯಾರ್ಥಿ ಮತ್ತು ಪೋಷಕರಿಂದ ಎ. 8ರ ಸಂಜೆ 4ರ ಒಳಗೆ ಮಂಡಳಿಯ ಜಾಲತಾಣ https://kseab.karnataka.gov.in ಕ್ಕೆ ಸಲ್ಲಿಸಬೇಕು. ಅನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಮಂಡಳಿಯ ಪರೀಕ್ಷಾ ವಿಭಾಗದ ನಿರ್ದೇಶಕ ಎಚ್‌. ಎನ್‌.ಗೋಪಾಲಕೃಷ್ಣ ತಿಳಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next