Advertisement
ಪ್ರಶ್ನೋತ್ತರ ವೇಳೆಯಲ್ಲಿ “ವೈಟ್ ಟಾಪಿಂಗ್ ರಸ್ತೆ ಅಪಘಾತಕ್ಕೆ ಹರದಾರಿ’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಸ್ತಾಪಿಸಿದ ಬಿಜೆಪಿಯ ಹಿರಿಯ ಸದಸ್ಯ ರಾಮಚಂದ್ರಗೌಡ, ಸುಗಮ ಸಂಚಾರಕ್ಕಾಗಿ ಸರ್ಕಾರ ವೈಟ್ ಟಾಪಿಂಗ್ ವಿಧಾನದಡಿ ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗುತ್ತಿರುವ ಬಗ್ಗೆ ಪತ್ರಿಕಾ ವರದಿ ಉಲ್ಲೇಖೀಸಿ ಆತಂಕ ವ್ಯಕ್ತಪಡಿಸಿದರು.
Related Articles
Advertisement
ದಾಖಲೆ ಮಳೆಯಿಂದ ಹಿನ್ನಡೆ: ಇದಕ್ಕೆ ಉತ್ತರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, “ನಗರದಲ್ಲಿ 14,000 ಕಿ.ಮೀ ಉದ್ದದ ರಸ್ತೆಗಳಿವೆ. ಮುಖ್ಯಮಂತ್ರಿಗಳ ನಗರೋತ್ಥಾನದಡಿ 2016-17 ಹಾಗೂ 2017-18ನೇ ಸಾಲಿನಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಬೇಕಿತ್ತು. ಮಳೆಗಾಲಕ್ಕೂ ಮುನ್ನ ಕೆಲಸ ಆರಂಭಕ್ಕೆ ಸಿದ್ಧತೆ ನಡೆಸಿತ್ತು. ಆದರೆ ದಾಖಲೆ ಮಳೆಯಾಗಿದ್ದರಿಂದ ಹಿನ್ನಡೆಯಾಯಿತು.
ನಗರದಲ್ಲಿ ವರ್ಷಕ್ಕೆ 900 ಮಿ.ಮೀ. ಮಳೆಯಾಗುತ್ತದೆ. ಆದರೆ ಕಳೆದ ಬಾರಿ ಎರಡು ತಿಂಗಳಲ್ಲಿ 700 ಮಿ.ಮೀ ಮಳೆಯಾಯಿತು. ಇದರಿಂದ ರಸ್ತೆಗಳು ಹಾಳಾದವು. ಇದೀಗ ರಸ್ತೆ ಅಭಿವೃದ್ಧಿ ಸಮರೋಪಾದಿಯಲ್ಲಿ ನಡೆದಿದೆ. ವೈಟ್ ಟಾಪಿಂಗ್ ರಸ್ತೆ 35ರಿಂದ 40 ವರ್ಷ ಬಾಳಿಕೆ ಬರುತ್ತದೆ. ಸಂಚಾರ ದಟ್ಟಣೆ ನಡುವೆ ಕೆಲಸ ಮಾಡಬೇಕಿರುವುದರಿಂದ ತುಸು ವಿಳಂಬವಾಗಿದೆ,’ ಎಂದು ತಿಳಿಸಿದರು.
ಜಾಗರೂಕರಾಗಿ ಚಾಲನೆ ಮಾಡಿ: “ವೈಟ್ ಟಾಪಿಂಗ್‌ನಡಿ ರಸ್ತೆ ಉತ್ತಮವಾಗಿದೆ ಎಂಬ ಕಾರಣಕ್ಕೆ ವೇಗವಾಗಿ ವಾಹನ ಚಾಲನೆ ಮಾಡದೆ ಜಾಗರೂಕತೆಯಿಂದ ಚಾಲನೆ ಮಾಡಬೇಕು. ರಸ್ತೆ ಚೆನ್ನಾಗಿದೆ ಎಂಬ ಕಾರಣಕ್ಕೆ ಅಪಘಾತ ಉಂಟಾಗುವುದು ವಿಪರ್ಯಾಸ. ವಿದೇಶಗಳಲ್ಲಿ ಸೂಕ್ತ ತರಬೇತಿ ನಂತರವಷ್ಟೇ ಚಾಲನಾ ಪರವಾನಗಿ ನೀಡಲಾಗುತ್ತದೆ. ನಮ್ಮಲ್ಲಿ ಉದಾರತೆಯಿಂದ ಚಾಲನಾ ಪರವಾನಗಿ ನೀಡಲಾಗುತ್ತದೆ. ವಾಹನ ಚಾಲನೆ ವೇಳೆ ಎಚ್ಚರ ವಹಿಸುವುದು ಮುಖ್ಯ,’ ಎಂದು ಸಚಿವ ಜಾರ್ಜ್ ಹೇಳಿದರು.
ನನ್ನ ಕಾಲದಲ್ಲೂ ಇತ್ತು- ನಿಮ್ಮ ಕಾಲದಲ್ಲೂ ಇದೆ: “ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗ, ರಸ್ತೆಗಳಲ್ಲಿ ಹರಡುವುದರಿಂದ ಮಳೆ ಸುರಿದಾಗ ಅನಾಹುತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಬೇಕಾದ ಎಂಜಿನಿಯರ್‌ಗಳು ಕಲೆಕ್ಷನ್ ಮಾಡಿಕೊಂಡು ಹೋಗುತ್ತಾರೆ. ನನ್ನ ಕಾಲದಲ್ಲೂ ಈ ಸಮಸ್ಯೆ ಇತ್ತು. ನಿಮ್ಮ ಕಾಲದಲ್ಲೂ ಇದೆ,” ಎಂದು ಬಿಜೆಪಿಯ ರಾಮಚಂದ್ರಗೌಡ ಹೇಳಿದರು. ಇದಕ್ಕೆ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, “ಹಿಂದೆಲ್ಲಾ ಎಂಜಿನಿಯರ್‌ಗಳು ಎಲ್ಲ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಇದೀಗ ಎಲ್ಲ ಕೆಲಸವನ್ನು ಹೊರ ಗುತ್ತಿಗೆ ನೀಡಲಾಗಿದೆ. ಇಷ್ಟಾದರೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದಿಲ್ಲ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.