ಬೆಂಗಳೂರು: ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಿದ್ದು, ಇದರ ಪರಿಣಾಮ ಸುತ್ತಮುತ್ತಲಿನ ಭಾಗಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸವಾರರು ತೊಂದರೆ ಅನುಭವಿಸುವಂತಾಗಿದೆ.
ನಗರದ 93.47 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ 972.69 ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಮೊದಲ ಹಂತವಾಗಿ ನಗರದ ಐದು ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ ಆರಂಭಿಸಲು ಮುಂದಾಗಿರುವ ಅಧಿಕಾರಿಗಳು ಈಗಾಗಲೇ ಸಂಚಾರ ಪೊಲೀಸರಿಂದ ಕಾಮಗಾರಿಗೆ ಅನುಮತಿ ಪಡೆದುಕೊಂಡಿದ್ದಾರೆ.
ಅದರಂತೆ ಮೈಸೂರು ರಸ್ತೆಯ ನಾಯಂಡಹಳ್ಳಿ, ಹೊಸೂರು ರಸ್ತೆಯ ಲಸ್ಕರ್ ರಸ್ತೆ ಹಾಗೂ ನಾಗಾವರ ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್ ಬಳಿ ಪಾಲಿಕೆಯಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿದೆ. ಪರಿಣಾಮ ಈ ಭಾಗದ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸಂಚಾರ ಪೊಲೀಸರು ದಟ್ಟಣೆ ನಿವಾರಣೆಗೆ ಹರಸಾಹಸ ಪಡಬೇಕಾಗಿದೆ.
ಇದರೊಂದಿಗೆ ಸಿ.ವಿ.ರಾಮನ್ ರಸ್ತೆ ಹಾಗೂ ಕೋರಮಂಗಲದ 28ನೇ ಮುಖ್ಯರಸ್ತೆಯಲ್ಲಿ ಕಾಮಗಾರಿ ಆರಂಭಿಸಲು ಸಂಚಾರ ಪೊಲೀಸರು ಅನುಮತಿ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಮಗಾರಿಗೆ ಅಗತ್ಯ ಸಿದ್ಧತೆಗಳನ್ನು ನಡೆಸಲು ಅಧಿಕಾರಿಗಳು ಮುಂದಾಗಿದ್ದು, ಶೀಘ್ರದಲ್ಲಿಯೇ ನಗರದ ಐದು ರಸ್ತೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಹೆಣ್ಣೂರು ಜಂಕ್ಷನ್ ಬಳಿ ಸುಮಾರು 300 ಮೀಟರ್ ರಸ್ತೆಗೆ ಕಾಂಕ್ರಿಟ್ ಹಾಕಲಾಗಿದ್ದು, ಉಳಿದ ರಸ್ತೆಯ ಡಾಂಬರೀಕರಣ ತೆರವುಗೊಳಿಸಲಾಗುತ್ತಿದೆ. ಅದೇ ರೀತಿ ಲಸ್ಕರ್ ರಸ್ತೆ ಹಾಗೂ ಮೈಸೂರು ರಸ್ತೆಗಳಲ್ಲಿಯೂ ಬ್ಯಾರಿಕೇಡ್ ಅಳವಡಿಸಿ ಡಾಂಬರು ತೆಗೆಯುವ ಕೆಲಸ ನಡೆಯುತ್ತಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಿರುವುದರಿಂದ ಈ ಎಲ್ಲ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ.