ಮೊದಲೆಲ್ಲ ಚಿತ್ರರಂಗಕ್ಕೆ ಬರಬೇಕು, ಅಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಹಂಬಲಿಸುವ ಪ್ರತಿಭೆಗಳು ಒಂದು ಅವಕಾಶಕ್ಕಾಗಿ ತಿಂಗಳು ಗಟ್ಟಲೆ, ವರ್ಷ ಗಟ್ಟಲೆ ಕಾಯಬೇಕಿತ್ತು. ತಮ್ಮ ಪ್ರತಿಭೆಯನ್ನು ಪರಿಚಯಿಸುವ ಸಲುವಾಗಿ ಸಣ್ಣ ಅವಕಾಶಕ್ಕಾಗಿ ಅದೆಷ್ಟೋ ನಿರ್ಮಾಪಕರು, ನಿರ್ದೇಶಕರ ಬೆನ್ನು ಬೀಳಬೇಕಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.
ನಿಮ್ಮಲ್ಲಿ ಪ್ರತಿಭೆಯಿದ್ದರೆ, ಅದನ್ನು ಮುಕ್ತವಾಗಿ ಪ್ರದರ್ಶಿಸಲು ಹತ್ತಾರು ಮಾರ್ಗಗಳಿವೆ. ಅದರಲ್ಲಿ ಶಾರ್ಟ್ ಫಿಲಂ ಮೇಕಿಂಗ್ ಕೂಡ ಒಂದು. ಇಂದು ಚಿತ್ರರಂಗದ ಕಡೆಗೆ ಆಸಕ್ತರಾದ ಅನೇಕ ಯುವ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪರಿಚಯಿಸಲು ಶಾರ್ಟ್‌ಫಿಲಂ ಅನ್ನು ಉತ್ತಮ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಅಂಥದ್ದೇ ಒಂದು ಯುವಕರ ತಂಡ ಸಿನಿಮಾದ ಕಡೆಗಿರುವ ತಮ್ಮ ಆಸಕ್ತಿ, ಕೌಶಲ್ಯವನ್ನು ಪ್ರದರ್ಶಿಸುವ ಸಲುವಾಗಿ “ವೈಟ್’ ಎಂಬ ಕಿರುಚಿತ್ರವನ್ನು ನಿರ್ಮಿಸಿದೆ. ಇನ್ನೊಂದು ವಿಷಯವೆಂದರೆ, ಈ ಹುಡುಗರ ಸಿನಿಮಾಸಕ್ತಿಯನ್ನು ಮೆಚ್ಚಿರುವ ನಟಿ ಪ್ರಿಯಾಮಣಿ ಯಾವುದೇ ಸಂಭಾವನೆ ಪಡೆಯದೆ ಈ ಕಿರುಚಿತ್ರದಲ್ಲಿ ಅಭಿನಯವನ್ನೂ ಮಾಡಿದ್ದಾರೆ.
ಹಿಂದಿ ಚಿತ್ರರಂಗದ ದಿಗ್ಗಜ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಹುಡುಗರ ಕಿರುಚಿತ್ರವನ್ನು ನೋಡಿ, ಅದಕ್ಕೆ ಧ್ವನಿಯನ್ನು ನೀಡಿದ್ದಾರೆ. ದೃಷ್ಟಿ ಹೀನತೆಯ ಬಗ್ಗೆ ಜಾಗೃತಿ ಮೂಡಿಸುವ “ವೈಟ್’ ಕಿರುಚಿತ್ರವನ್ನು “ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ, ಐ ಬ್ಯಾಂಕ್ ಅಸೋಸಿಯೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ ನಿರ್ಮಿಸಲಾಗಿದೆ.
ಎಸ್. ರಾಜಶೇಖರ್ ಈ ಕಿರುಚಿತ್ರವನ್ನು ನಿರ್ಮಿಸಿದ್ದು, ಯುವ ನಿರ್ದೇಶಕ ಮನು ನಾಗ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ “ವೈಟ್’ ಕಿರುಚಿತ್ರದ ಪ್ರದರ್ಶನವನ್ನು ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ತಂಡ ಪ್ರದರ್ಶಿಸಿತು. ನಟಿ ರಾಧಿಕಾ ಪಂಡಿತ್ ಈ ಕಿರುಚಿತ್ರದ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಲಹರಿ ವೇಲು, ನಟರಾದ ಸುಚೇಂದ್ರ ಪ್ರಸಾದ್ ಮೊದಲಾದವರು ಈ ಕಿರುಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ವೈಟ್’ ಕಿರುಚಿತ್ರದಲ್ಲಿ ಪ್ರಿಯಾಮಣಿ ಮತ್ತು ರಾಕಿ ಎನ್ನುವ ಹೆಸರಿನ ಶ್ವಾನ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು,
-ಜಯದೇವನ್ ಛಾಯಾಗ್ರಹಣ, ನವೀನ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ “ವೈಟ್’ ಕಿರುಚಿತ್ರದ ಮೂಲಕ ಚಿತ್ರರಂಗದಲ್ಲಿ ಹಲವರ ಗಮನ ಸೆಳೆದಿರುವ ಈ ತಂಡ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಚಿತ್ರವನ್ನು ನಿರ್ಮಿಸಿ ತೆರೆಗೆ ತರುವ ಯೋಜನೆಯಲ್ಲಿದೆ.