Advertisement

ಹಿಂಗಾರು ಬಿಳಿಜೋಳ ಇಳುವರಿ ಹೆಚ್ಚುವ ಹಿಗ್ಗು

03:30 PM Dec 25, 2021 | Team Udayavani |

ವಾಡಿ: ಮಹಾ ಮಳೆ ಬೇಸಾಯಗಾರರಿಗೆ ಪ್ರಸಕ್ತ ವರ್ಷವೂ ಆಘಾತ ತಂದೊಡ್ಡಿದ್ದು, ಕಾಳು ನಾಶದಿಂದ ತೊಗರಿ ಗಿಡಗಳು ಬರಗೆಟ್ಟು ನಿಂತಿವೆ. ಸತತ ಬರಗಾಲದ ಹೊಡೆತ ಅನುಭವಿಸುತ್ತಿರುವ ಅನ್ನದಾತರ ಬದುಕಿಗೆ ಆಸರೆ ಆಗಬೇಕಿದ್ದ ಮುಂಗಾರು ಬೆಳೆಗಳೆಲ್ಲವೂ ಕೈಬಿಟ್ಟಿವೆ.

Advertisement

ಈ ಭಾಗದ ಹಿಂಗಾರು ಬೆಳೆ ಬಿಳಿಜೋಳ ಹುಲುಸಾಗಿ ಫಸಲು ನೀಡಿದ್ದು, ಇಳುವರಿ ಹೆಚ್ಚುವ ಭರವಸೆ ಮೂಡಿಸಿದೆ. ಸೈನಿಕ ಹುಳುಗಳ ಕಾಟದ ಭೀತಿ ನಡುವೆ ಬೆಳೆ ಸಂರಕ್ಷಣೆ ಮಹತ್ವ ಪಡೆದುಕೊಂಡಿದ್ದು, ಒಂದೂವರೆ ತಿಂಗಳ ಜೋಳದ ಬೆಳೆಗೆ ಹುಳು ಬಾಧೆ ತಡೆಯುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹುಳುಗಳು ಎಲೆಗಳನ್ನು ತಿಂದು ಹಾಕದಂತೆ ಎಚ್ಚರವಹಿಸುತ್ತಿದ್ದಾರೆ. ಜೋಳದ ಸುಳಿ ಕೀಟಗಳ ಬಾಯಿಗೆ ಆಹಾರವಾದರೆ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ.

ಬಳವಡಗಿ, ಕೊಂಚೂರು, ನಾಲವಾರ, ಕೊಲ್ಲೂರು, ಹಳಕರ್ಟಿ, ರಾವೂರ, ಸನ್ನತಿ, ಬನ್ನೇಟಿ, ಮಾರಡಗಿ, ಮಳಗ, ಕುಂದನೂರು, ಇಂಗಳಗಿ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಮುಗ್ಗರಿಸಿದ ತೊಗರಿ, ಹತ್ತಿ ನಡುವೆ ಜೋಳ ಹಿಗ್ಗಿನಿಂದ ಬೆಳೆಯುತ್ತಿದೆ. ಡಿಸೆಂಬರ್‌ ತಿಂಗಳ ಕೊರೆಯುವ ಚಳಿಯ ಶೀತಕ್ಕೆ ಬೆಳೆಯುವ ಹಸಿರೆಲೆಯ ಮಾಲ್ದಂಡಿ ಬಿಳಿಜೋಳದ ಫಸಲು, ರೈತರ ಪಾಲಿನ ಸಂಕಷ್ಟದ ದಿನಗಳಲ್ಲಿ ಸಂಗಾತಿಯಾಗುವ ಬೆಳೆಯಾಗಿದೆ. ಮೊದಲೇ ಬರಗಾಲದಿಂದ ಬಳಲಿ ಬೆಂಡಾಗಿರುವ ರೈತರಿಗೆ ಹುಳು ಬಾಧೆ ನುಂಗಲಾರದ ತುತ್ತಾಗಿದೆ.

ಇದರ ನಡುವೆಯೂ ಕೃಷಿಕರು ಜೋಳ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಹೆಣ್ಣುಚಿಟ್ಟೆ ಆರಂಭದಲ್ಲಿ ನೂರರಿಂದ ಇನ್ನೂರು ಮೊಟ್ಟೆಗಳನ್ನು ಗುಂಪುಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಇಡುತ್ತದೆ. ಹುಳಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾದರೆ ಸರಿಸುಮಾರು 1500ರಿಂದ 2000ರ ವರೆಗೆ ಮೊಟ್ಟೆ ಇಡುವ ಸಾಮರ್ಥ್ಯವನ್ನು ಹೆಣ್ಣು ಚಿಟ್ಟೆ ಹೊಂದಿದೆ. ಪ್ರಾಥಮಿಕ ಹಂತದ ಹುಳುಗಳು ಎಲೆಯ ತೆರೆದ ಮೇಲ್ಭಾಗ ತಿನ್ನುತ್ತವೆ. ಪರಿಣಾಮ ತೆರೆದ ಭಾಗವು ಬೆಳಗ್ಗೆ ಕಾಣುತ್ತದೆ. ನಂತರದ ದಿನಗಳಲ್ಲಿ ಗಿಡಗಳ ಸುಳಿಯಲ್ಲಿ ಸೇರಿಕೊಂಡು ಒಳಗಿನಿಂದ ಕಾಂಡ ಕೊರೆಯುತ್ತದೆ. ಇದರಿಂದ ಬೆಳೆಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಜೋಳ ಬಿತ್ತನೆ ಮಾಡಿರುವ ತಾಲೂಕಿನ ಕೃಷಿಕರು, ಎತ್ತರಕ್ಕೆ ಬೆಳೆದಿರುವ ಬೆಳೆ ತೆನೆಕಟ್ಟುವುದನ್ನೇ ಎದುರು ನೋಡುತ್ತಿದ್ದಾರೆ. ಬೆಳೆಗೆ ಮಾರಕವಾಗದ ಪೂರಕ ತೇವಾಂಶ ವಾತಾವರಣ ಸೃಷ್ಟಿಯಾಗಿದರೆ ಮಾತ್ರ ಜೋಳ ಕೈಸೇರುವ ಸಾಧ್ಯತೆಯಿದೆ. ನೇಗಿಲಯೋಗಿ ನಷ್ಟದ ಕೂಪಕ್ಕೆ ಮೈಯೊಡ್ಡುವ ಮೊದಲು ಕೃಷಿ ವಿಜ್ಞಾನಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಬೇಕಿದೆ.

Advertisement

ಹಿಂದಿನ ವರ್ಷದಂತೆ ಪ್ರಸಕ್ತ ವರ್ಷವೂ ಬಹಳ ನಿರೀಕ್ಷೆ ಹುಟ್ಟಿಸಿದ ತೊಗರಿ ಮತ್ತು ಶೇಂಗಾ ಸಂಪೂರ್ಣ ಹಾಳಾಗಿದೆ. ಇಷ್ಟುದಿನ ಜೋಳ ಬೆಳೆಯ ಸುಳಿಗೆ ಸೈನಿಕ ಹುಳುಗಳ ಕಾಟವಿತ್ತು. ಅದೀಗ ನಿವಾರಣೆಯಾಗಿದೆ. ಭೂಮಿ ತೇವಾಂಶ ಕಾಯ್ದುಕೊಂಡಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಇಬ್ಬನಿ ಬೆಳೆ ಬೆಳವಣಿಗೆಗೆ ಸಹಕಾರಿಯಾಗಿದೆ. ಸದ್ಯಕ್ಕಂತೂ ಜೋಳ ಚೆನ್ನಾಗಿದೆ. ತೆನೆಯಾಗಿ ಕಾಳು ಕಟ್ಟಿದರೆ ಮಾತ್ರ ರೈತ ಉಳಿಯುತ್ತಾನೆ. -ಶರಣಪ್ಪ ಗಂಜಿ, ಲಾಡ್ಲಾಪುರ ರೈತ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next