Advertisement

ತೇವಾಂಶವಿಲದೆ ಬಾಡುತ್ಲಿದೆ ಬಿಳಿ ಜೋಳ

12:52 PM Dec 08, 2018 | |

ರಾಯಚೂರು: ಮುಂಗಾರು ಮತ್ತು ಹಿಂಗಾರಿನಿಂದ ಸಂಪೂರ್ಣ ವಂಚಿತಗೊಂಡಿರುವ ರೈತನೀಗ ಜೋಳದ ಬೆಳೆ ಉಳಿಸಿಕೊಳ್ಳಲು ತೋಳ್ಬಲ ನೆಚ್ಚಿಕೊಂಡಿದ್ದಾನೆ. ತೇವಾಂಶವಿಲ್ಲದೇ ಬೆಳೆ ಬಾಡಿ ಹೋಗುತ್ತಿದ್ದು, ಅದನ್ನು ಉಳಿಸಿಕೊಳ್ಳಲು “ಭಗೀರಥ’ ಪ್ರಯತ್ನವನ್ನೇ ನಡೆಸಿದ್ದಾನೆ.

Advertisement

ಪ್ರಸಕ್ತ ಸಾಲಿನಲ್ಲಿ ಮಳೆ ಸಂಪೂರ್ಣ ಕೈ ಕೊಟ್ಟ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶವೇ ಉಳಿದಿಲ್ಲ. ಇದರಿಂದ ಹಿಂಗಾರಿನಲ್ಲಿ ರೈತರು ಬಿತ್ತನೆ ಮಾಡಿರುವ ಜೋಳದ ಬೆಳೆ ಕೂಡ ಬಾಡುತ್ತಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರು ಮೂರ್‍ನಾಲ್ಕು ಕಿಮೀ ದೂರದಿಂದ ಪೈಪ್‌ಲೈನ್‌ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇನ್ನೂ ಕೆಲ ರೈತರು ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸುತ್ತಿದ್ದಾರೆ.

ಹಿಂದೆಂದೂ ಕಾಣದಂಥ ಸೈನಿಕ ಹುಳು ಕಾಟ ಈ ಬಾರಿ ಜೋಳಕ್ಕೆ ತಗುಲಿದ್ದು, ಬೆಳವಣಿಗೆ ಕುಂಠಿತವಾಗಿದೆ. ಅದರ ಜತೆಗೆ ತೇವಾಂಶವಿಲ್ಲದೇ ಇಳುವರಿಯೇ ಬರುವುದು ಅನುಮಾನವಾಗಿದೆ. ಸಾಮಾನ್ಯವಾಗಿ ಭೂಮಿಯಲ್ಲಿನ ತೇವ ಹೀರಿಕೊಂಡು ಡಿಸೆಂಬರ್‌, ಜನವರಿಯಲ್ಲಿ ಚಳಿಗೆ ಜೋಳ
ಚೆನ್ನಾಗಿ ಬೆಳೆಯುತ್ತದೆ. ಈ ಬಾರಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ.

ಸಾವಿರಾರು ಖರ್ಚು: ಖರ್ಚಿಲ್ಲದ ಬೆಳೆ ಎಂದು ನಂಬಿದ್ದ ಜೋಳಕ್ಕೆ ನಿತ್ಯ ಸಾವಿರಾರು ಖರ್ಚು ಮಾಡಲಾಗುತ್ತಿದೆ. ಸುಮಾರು ನಾಲ್ಕೈದು ಕಿಮೀ ದೂರದಿಂದ ಪೈಪ್‌ಲೈನ್‌ ಮಾಡಿಸಲು ಸಾವಿರಾರು ಖರ್ಚು ಮಾಡಿರುವ ರೈತರು ಡೀಸೆಲ್‌ ಎಂಜಿನ್‌ ಮೂಲಕ ನೀರು ಹಾಯಿಸುತ್ತಿದ್ದಾರೆ. ನಿತ್ಯ ಏನಿಲ್ಲ ಎಂದರೂ 7-8 ಲೀಟರ್‌ ಡೀಸೆಲ್‌ ಬೇಕಾಗುತ್ತಿದೆ. ಅದರ ಜತೆಗೆ ಕೆಲಸಗಾರರನ್ನು ನೇಮಿಸಬೇಕಿದೆ.

ಎಲ್ಲ ಸೇರಿ ನಿತ್ಯ ಸಾವಿರದಿಂದ ಹದಿನೈದು ನೂರು ಖರ್ಚಾಗುತ್ತಿದೆ. ಇನ್ನು ಒಂದು ಟ್ಯಾಂಕರ್‌ಗೆ 600 ದರ ಇದ್ದು, ನೀರು ತುಂಬಿಸಲು 200 ಕೊಡಬೇಕು. ಚಾಲಕರಿಗೆ 300 ನೀಡಬೇಕಿದೆ.

Advertisement

ನಿಯಂತ್ರಣಕ್ಕೆ ಬಾರದ ಲದ್ದಿ ಹುಳು: ಈ ಬಾರಿ ಕಾಣಿಸಿಕೊಂಡ ಸೈನಿಕ ರೋಗಕ್ಕೆ ಈಗಾಗಲೇ ರೈತರು ಕ್ರಿಮಿನಾಶಕ ಸಿಂಪರಣೆ ಮಾಡಿದ್ದಾರೆ. ಆದರೂ ಲದ್ದಿ ಹುಳು ನಿಯಂತ್ರಣಕ್ಕೆ ಬರುತ್ತಿಲ್ಲ. ರೈತರು ಹೇಳುವ ಪ್ರಕಾರ ಇದಕ್ಕೆ ಭೂಮಿಯಲ್ಲಿ ತೇವಾಂಶ ಇಲ್ಲದಿರುವುದು ಕಾರಣವಾಗಿದೆ.

ದರ ಹೆಚ್ಚಳ: ಮಾರುಕಟ್ಟೆಯಲ್ಲಿ ಈಗ ಜೋಳದ ದರ ಹೆಚ್ಚಾಗಿದೆ. ಇದು ರೈತರಲ್ಲಿ ಆಶಾಭಾವನೆ ಮೂಡಿಸಿದೆ. ಹಿಂದೆ ಎಕರೆಗೆ ಏನಿಲ್ಲ ಎಂದರೂ 7-8 ಕ್ವಿಂಟಲ್‌ ಜೋಳ ಬರುತ್ತಿತ್ತು. ಆದರೆ, ಈ ಬಾರಿ 3-4 ಕ್ವಿಂಟಲ್‌ ಬರುವುದು ಕಷ್ಟವಾಗಿದೆ. ಇಂಥ ವೇಳೆ ಉತ್ತಮ ಬೆಲೆ ಸಿಕ್ಕರೆ ರೈತನಿಗೆ ಅನುಕೂಲವಾಗಲಿದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ದರವೇನೋ ಇದೆ. ಆದರೆ, ಜೋಳ ಮಾರುಕಟ್ಟೆಗೆ ಬರುವ ವೇಳೆ ಅದು ಕುಸಿದರೆ ಎಂಬ ಆತಂಕವೂ ಇದೆ. ಈ ಕಾರಣಕ್ಕೆ ರೈತರು ಜೋಳವನ್ನು ಬೆಂಬಲ ಬೆಲೆಗೆ ಖರೀದಿಸಲಿ ಎಂಬ ಒತ್ತಾಸೆ ವ್ಯಕ್ತಪಡಿಸುತ್ತಿದ್ದಾರೆ.

ಜೋಳದ ಬೆಳೆಗೆ ಇಷ್ಟೊಂದು ಖರ್ಚು ಮಾಡುತ್ತಿರುವುದು ಇದೇ ಮೊದಲು. ಖರ್ಚಿಲ್ಲದ ಬೆಳೆ ಎಂದು ಹಾಕಿದರೆ ಈಗ ನಷ್ಟ ಎದುರಾಗುವ ಸನ್ನಿವೇಶ ನಿರ್ಮಾಣವಾಗಿದೆ. ಒಂದೆಡೆ ರೋಗ, ಮತ್ತೂಂದೆಡೆ ಮಳೆ ಕೊರತೆ. ಹೀಗಾಗಿ ಇರುವ ಬೆಳೆಯನ್ನಾದರೂ ಉಳಿಸಿಕೊಳ್ಳಲು ಸಾವಿರಾರು ಖರ್ಚು ಮಾಡಿ ನೀರು ಹರಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಸಿಕ್ಕರೆ ಅನುಕೂಲ ಇಲ್ಲವಾದರೆ ನಷ್ಟ ತಪ್ಪಿದ್ದಲ್ಲ.
 ಪ್ರಕಾಶ ಪಾಟೀಲ, ರೈತ

Advertisement

Udayavani is now on Telegram. Click here to join our channel and stay updated with the latest news.

Next