ಬೆಂಗಳೂರು: ಶೇಷಾದ್ರಿಪುರದ ಧನ್ವಂತರಿ ರಸ್ತೆಯಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ವಿಧಾನದಡಿ 4.34 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಯನ್ನು ಸಚಿವ ಕೆ.ಜೆ.ಜಾರ್ಜ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ವಾಹನ ಬಳಕೆದಾರರ ಅನುಕೂಲಕ್ಕಾಗಿ ಧನ್ವಂತರಿ ರಸ್ತೆಯಿಂದ ಬಿಎಂಟಿಸಿ ಬಸ್ ನಿಲ್ದಾಣದವರೆಗಿನ ರಸ್ತೆಯನ್ನು ವೈಟ್ ಟಾಪಿಂಗ್ ವಿಧಾನದಡಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಜತೆಗೆ ವೈಟ್ ಟಾಪಿಂಗ್ ರಸ್ತೆ 40 ವರ್ಷ ಬಾಳಿಕೆ ಬರಲಿದೆ. ಹೀಗಾಗಿ ನಗರದ ಇನ್ನಿತರ ರಸ್ತೆಗಳನ್ನು ವೈಟ್‌ಟಾಪಿಂಗ್ ವಿಧಾನದಡಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ.
ಒಂದು ಬಾರಿ ವೈಟ್‌ಟಾಪಿಂಗ್ ವಿಧಾನದಡಿ ರಸ್ತೆ ಅಭಿವೃದ್ಧಿಪಡಿಸಿದರೆ ರಸ್ತೆ ಗುಂಡಿ ಸಮಸ್ಯೆ ಇರುವುದಿಲ್ಲ. ಹೀಗಾಗಿ ಮತ್ತಷ್ಟು ರಸ್ತೆಗಳನ್ನು ವೈಟ್‌ಟಾಪಿಂಗ್ ವಿಧಾನದಡಿ ಅಭಿವೃದ್ಧಿಪಡಿಸಲಾಗುವುದು. ಈ ಕುರಿತು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಕಿನೋ ಚಿತ್ರಮಂದಿರದ ಬಳಿಯ ಅಂಡರ್ ಪಾಸ್‌ನಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ಪರಿಹರಿಸಲು ಯೋಜನೆ ರೂಪಿಸಿದ್ದು, ಭಾನುವಾರದಿಂದ ರಸ್ತೆಯನ್ನು ಮುಚ್ಚಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ರಾಜಕಾಲುವೆಗಳ ನಿರ್ವಹಣೆಗಾಗಿ 700 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಮುಂದಾಗಿದ್ದು, ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುರಿಯಲಿದೆ ಎಂದು ಹೇಳಿದರು. ಈ ವೇಳೆ ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಇತರರು ಹಾಜರಿದ್ದರು.
ಉತ್ತರಾಖಂಡದಲ್ಲಿ ಮಾತ್ರ ನಮಗೆ ಹಿನ್ನಡೆ ಯಾಗಿದೆ. ಉತ್ತರ ಪ್ರದೇಶ ನಾವು ಮೊದಲು ಇರಲಿಲ್ಲ. ಹಾಗಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಹೊಡೆತ ಬಿದ್ದಿಲ್ಲ. ಪ್ರಧಾನಿ ಯವರು ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ.
-ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ