Advertisement
2014ರ ಜುಲೈ ತಿಂಗಳಲ್ಲಿ ಆರಂಭಗೊಂಡ ಕಾಲೇಜು ಪುತ್ತೂರು ನಗರದ ಹಲವು ಖಾಲಿ ಕಟ್ಟಡಗಳಿಗೆ ಸುತ್ತಿ ಕೆಲವು ವರ್ಷಗಳಿಂದ ಹಳೆಯ ಜೈಲಿನ ಕಟ್ಟಡ ಹಾಗೂ ಹಳೆಯ ತಾಲೂಕು ಕಚೇರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕಟ್ಟಡಗಳಲ್ಲಿ ಅನುಕೂಲತೆಗಳಿಲ್ಲದೆ ಉತ್ತಮ ಶಿಕ್ಷಣ ಪಡೆದು ಭವಿಷ್ಯದ ಸಂಪನ್ಮೂಲಗಳಾಗಿ ಬೆಳೆಯುವ ಮಕ್ಕಳು ಇಲ್ಲಿ ನರಕಸದೃಶರಾಗಿ ಪಾಠ ಕೇಳುವ ಸ್ಥಿತಿ ಇದೆ.
ಮಹಿಳಾ ಕಾಲೇಜು ಕಟ್ಟಡಕ್ಕೆ ಸ್ವಂತ ಕಟ್ಟಡ ಆಗಬೇಕೆನ್ನುವ ಉದ್ದೇಶದಿಂದ ನಡೆಸಿದ ಪ್ರಯತ್ನದ ಫಲವಾಗಿ ನಗರದಿಂದ ಬೊಳುವಾರು – ಉಪ್ಪಿನಂಗಡಿ ರಸ್ತೆಯ ಬನ್ನೂರು ಆನೆಮಜಲಿನಲ್ಲಿ 4.70 ಎಕ್ರೆ ಜಮೀನು ಸಿಕ್ಕಿದೆ. ಅದರ ಖಾತೆ ಬದಲಾವಣೆ ನಡೆದು ಇಲಾಖೆಯ ಆಯುಕ್ತರ ಹೆಸರಿಗೆ ಪಹಣಿಯೂ ಆಗಿದೆ. ಜತೆಗೆ ಸೌಕರ್ಯಗಳಿಗಾಗಿ ಸರಕಾರಕ್ಕೆ 8 ಕೊಟಿ ರೂ. ಪ್ರಸ್ತಾವನೆ ಸಲ್ಲಿಸಿ, ಅದರಲ್ಲಿ ಸದ್ಯಕ್ಕೆ 4.30 ಕೋಟಿ ರೂ. ಅನುದಾನ ಮಂಜೂರಾತಿಯೂ ಆಗಿದೆ. ಅದರಲ್ಲಿ 25 ಕೊಠಡಿಗಳು, ಪ್ರಾಂಶುಪಾಲರ ಕೊಠಡಿ, ಉಪನ್ಯಾಸಕರ ಕೊಠಡಿ, ವಿಶ್ರಾಂತಿ ಕೊಠಡಿ, ಗ್ರಂಥಾಲಯ, ಶೌಚಾಲಯ, 200 ಮೀ. ಆಟದ ಮೈದಾನ ನಿರ್ಮಾಣದ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕಟ್ಟಡ ನಿರ್ಮಾಣದ ರೇಖಾ ನಕ್ಷೆಗೆ ಅನುಮೋದನೆಯೂ ಸಿಕ್ಕಿದೆ. ಮತ್ತೇನು ಸಮಸ್ಯೆ?
ಇಲಾಖೆಯ ಹೆಸರಿಗೆ ಜಾಗದ ಪಹಣಿ ಆಗಿದ್ದರೂ ಆ ಜಾಗದ ಕುಮ್ಕಿ ಹಕ್ಕುದಾರರೊಬ್ಬರು ರಾಜ್ಯ ಮೇಲ್ಮನವಿ ಪ್ರಾಧಿಕಾರದಿಂದ ತಡೆಯಾಜ್ಞೆ ತಂದಿದ್ದಾರೆ. ಕುಮ್ಕಿ ವಿರಹಿತಗೊಳಿಸಿ ಜಿಲ್ಲಾಧಿಕಾರಿಯವರು ಜಾಗ ನೀಡಿದ ವಿಧಿ ವಿಧಾನ ಸರಿಯಾಗಿಲ್ಲ ಎಂಬ ದೂರು ಅವರದು. ಕಟ್ಟಡ ಕಟ್ಟಲು ತಡೆಯಾಜ್ಞೆ ಇರುವುದರಿಂದ ಇಷ್ಟರವರೆಗೆ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ಭಾಗ್ಯ ಮರೀಚಿಕೆಯಾಗಿದೆ.
Related Articles
ದೂರದೂರುಗಳಿಂದ ಕಾಲೇಜಿಗೆ ಸೇರಿರುವ ಬಡ ವಿದ್ಯಾರ್ಥಿನಿಯರಿಗೆ ಅನಾನುಕೂಲಕರ ಸ್ಥಿತಿಯಲ್ಲಿ ಪಾಠ ಪ್ರವಚನ ಕೇಳಬೇಕಾದ ಸ್ಥಿತಿ ಇದೆ. ಸ್ವಲ್ಪ ಸಮಯಕ್ಕೆ ಹಿಂದಿನ ಪುರಸಭಾ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರ ಮಾಡಿದ್ದರೂ ಅನಿವಾರ್ಯತೆಗೆ ಸಿಲುಕಿ ಮತ್ತೆ ಜೈಲಿನ ಕಟ್ಟಡಕ್ಕೆ ಸ್ಥಳಾಂತರವಾಗಿದ್ದಾರೆ. ಹಳೆಯ ಮತ್ತು ಇಕ್ಕಟ್ಟಾದ ಕೊಠಡಿ, ಜತೆಗೆ ಸೌಕರ್ಯಗಳ ಕೊರತೆ ವಿದ್ಯಾರ್ಥಿಗಳನ್ನು, ಉಪನ್ಯಾಸಕರನ್ನು ಕಾಡುತ್ತಿದೆ.
Advertisement
ವಿದ್ಯಾರ್ಥಿ ಸಂಖ್ಯೆಯಲ್ಲಿ ಪ್ರಗತಿ2014-15ನೇ ಸಾಲಿನಲ್ಲಿ ನೆಲ್ಲಿಕಟ್ಟೆ ದ.ಪ್ರಾ. ಶಾಲೆಯಲ್ಲಿ ಕಾಲೇಜು ಆರಂಭಗೊಂಡಾಗ 2015-16ನೇ ಸಾಲಿನಲ್ಲಿ ಜೈಲಿನ ಕಟ್ಟಡಕ್ಕೆ ಸ್ಥಳಾಂತಗೊಂಡಾಗ ಮೊದಲ ಶೈಕ್ಷಣಿಕ ವರ್ಷದಲ್ಲಿ 120, ಎರಡನೇ ವರ್ಷ 354, ಮೂರನೇ ವರ್ಷ 540, ನಾಲ್ಕನೇ ವರ್ಷ 620, ಐದನೇ ವರ್ಷ 717ಕ್ಕೆ ಏರಿಕೆಯಾಗಿದೆ. ಬಿಎ ಹಾಗೂ ಬಿಕಾಂ ಎರಡೂ ವಿಭಾಗದಲ್ಲೂ ಎ ಹಾಗೂ ಬಿ ತರಗತಿಗಳನ್ನು ವಿಭಾಗಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ನಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ನಮಗೆ ಖುಷಿಯಾಗುತ್ತಿದೆ. ಅದರಲ್ಲೂ ಕಲಾ ವಿಭಾಗಕ್ಕೆ ನಮ್ಮಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿನಿಯರು ಸೇರ್ಪಡೆಯಾಗುತ್ತಿದ್ದಾರೆ. ಆದರೆ ಕಟ್ಟಡದ ಕೊರತೆ ಕಾಲೇಜಿನ ಇನ್ನಷ್ಟು ಪ್ರಗತಿಗೆ ತೊಡಕಾಗುತ್ತಿದೆ. ಆನೆಮಜಲಿನ ಜಾಗದ ಸಮಸ್ಯೆ ಬಗೆಹರಿದರೆ ಹೆದ್ದಾರಿಯ ಬದಿಯಲ್ಲಿ ಅತ್ಯಂತ ಅನುಕೂಲದ ಪರಿಸರದಲ್ಲಿ ಕಾಲೇಜು ಕಾರ್ಯನಿರ್ವಹಿಸಲಿದೆ.
– ಪ್ರೊ| ಝೇವಿಯರ್ ಡಿ’ಸೋಜಾ, ಕಾಲೇಜು ಪ್ರಾಂಶುಪಾಲರು ಶೀಘ್ರ ಕಟ್ಟಡ ನಿರ್ಮಾಣ
ಕುಮ್ಕಿ ಹಕ್ಕುದಾರರು ಮೇಲ್ಮನವಿ ಪ್ರಾಧಿಕಾರದಿಂದ ತಡೆಯಾಜ್ಞೆ ತಂದಿರುವುದರಿಂದ ಅನುದಾನವಿದ್ದರೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ ತೊಂದರೆ ಯಾಗಿದೆ. ತಡೆಯಾಜ್ಞೆಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಮತ್ತು ಶೀಘ್ರದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
– ಸಂಜೀವ ಮಠಂದೂರು , ಶಾಸಕರು, ಪುತ್ತೂರು - ರಾಜೇಶ್ ಪಟ್ಟೆ