ಹರ್ಷಿಕಾ ಪೂಣಚ್ಛ ಖುಷಿಯಾಗಿದ್ದಾರೆ. ಅವರ ಖುಷಿಗೆ ಕಾರಣ “ಚಾರ್‌ಮಿನಾರ್’. ಯಾವ “ಚಾರ್‌ಮಿನಾರ್’ ಎಂದರೆ ಮಲಯಾಳಂ ಸಿನಿಮಾ ತೋರಿಸಬೇಕು. ಹೌದು, ಮಲಯಾಳಂ “ಚಾರ್‌ಮಿನಾರ್’ ಚಿತ್ರದಲ್ಲಿ ಹರ್ಷಿಕಾ ನಾಯಕಿಯಾಗಿ ನಟಿಸಿದ್ದು, ಚಿತ್ರ ಬಿಡುಗಡೆಯಾಗಿದೆ. ಹರ್ಷಿಕಾ ನಟನೆಗೆ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.
ಈ ಮೂಲಕ ಮತ್ತಷ್ಟು ಅವಕಾಶಗಳು ಮಲಯಾಳಂನಲ್ಲಿ ಬರುತ್ತಿವೆಯಂತೆ. ಮೊದಲ ಮಲಯಾಳಂ ಸಿನಿಮಾವನ್ನು ಹೊಸಬರ ಜೊತೆ ಮಾಡಿದ ಹರ್ಷಿಕಾಗೆ ಎರಡನೇ ಸಿನಿಮಾವನ್ನು ಸ್ಟಾರ್ ನಟರ ಜೊತೆ ಮಾಡುವ ಆಸೆ ಇದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಎಲ್ಲಾ ಓಕೆ ಹರ್ಷಿಕಾಗೆ ಕನ್ನಡದಲ್ಲಿ ಅವಕಾಶದ ಕೊರತೆ ಕಾಡುತ್ತಿದೆಯಾ ಎಂದು ನೀವು ಕೇಳಬಹುದು.
ಹರ್ಷಿಕಾ ಹೇಳುವಂತೆ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. “ನಾನು ಇವತ್ತೂ ಮನಸ್ಸು ಮಾಡಿದರೂ ನಾಳೆ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಳ್ಳಬಹುದು. ಆದರೆ, ಮತ್ತೆ ಹೊಸಬರ ಸಿನಿಮಾಗಳನ್ನೇ ಮಾಡಲು ಇಷ್ಟವಿಲ್ಲ. ಒಂದಾ ಕಥೆ ಇಂಪ್ರಸ್ ಆಗಬೇಕು ಅಥವಾ ನಿರ್ದೇಶಕ, ನಟ ಆದರೂ ಗುರುತಿಸಿಕೊಂಡಿರುವವರು ಇರಬೇಕು. ಅದು ಬಿಟ್ಟು ಮತ್ತೆ ಮಾಡಿದ್ದನ್ನೇ ಮಾಡಿದರೆ ಅದಕ್ಕೆ ಅರ್ಥವಿರೋದಿಲ್ಲ.
ಆ ಕಾರಣದಿಂದ ನನಗೆ ನಾನೇ ಹ್ಯಾಂಡ್ ಬ್ರೇಕ್ ಹಾಕಿದ್ದೇನೆ. ಸದ್ಯ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಸಿಗುತ್ತಿದೆ’ ಎನ್ನುತ್ತಾರೆ ಹರ್ಷಿಕಾ. ಆರಂಭದ ದಿನಗಳಲ್ಲಿ ಹರ್ಷಿಕಾ ಕೂಡಾ ತಪ್ಪು ಹೆಜ್ಜೆ ಇಟ್ಟಂತೆ ಕಂಡುಬರುತ್ತದೆ. ಹರ್ಷಿಕಾ ಹೇಳುವಂತೆ ಆ ತಪ್ಪು ಹೆಜ್ಜೆಯ ಹಿಂದೆ ನಾನಾ ಕಾರಣಗಳಿವೆಯಂತೆ. “ನಾನು ಚಿತ್ರರಂಗಕ್ಕೆ 15 ವರ್ಷದವಳಾಗಿದ್ದಾಗ ಬಂದೆ.
ಆ ನಂತರ ಐದು ವರ್ಷ ಎಜುಕೇಶನ್‌ಗಾಗಿ ಗ್ಯಾಪ್ ತಗೊಂಡು ಕೆರಿಯರ್ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಆರು ವರ್ಷಗಳಿಂದ ನಾನು ಸಂಪೂರ್ಣವಾಗಿ ಸಿನಿಮಾ ಕಡೆ ಗಮನಕೊಟ್ಟೆಯಷ್ಟೇ. ಇಲ್ಲಿವರೆಗೆ ಮಾಡಿದ ಯಾವುದೇ ಸಿನಿಮಾಗಳ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲವನ್ನು ಖುಷಿಯಿಂದಲೇ ಮಾಡಿದ್ದೇನೆ. ಕೆಲವೊಮ್ಮೆ ನಾನು ತಪ್ಪು ಹೆಜ್ಜೆ ಇಟ್ಟೆ, ಯಾವುದೋ ಸಿನಿಮಾ ಒಪ್ಪಿಕೊಂಡೆ ಅನಿಸುತ್ತದೆ.
ಆದರೂ ಅದರ ಹಿಂದಿನ ಉದ್ದೇಶ ನನಗೆ ಖುಷಿಕೊಟ್ಟಿದೆ. ನನ್ನ ಮೇಕಪ್ ಮ್ಯಾನ್‌ಗಾಗಿಯೂ ನಾನು ಸಿನಿಮಾ ಒಪ್ಪಿಕೊಂಡೆ. ಸತತವಾಗಿ ಸಿನಿಮಾವನ್ನು ನಂಬಿರುವ ಅವರಿಗೆ ನನ್ನ ಸಿನಿಮಾ ಚಿತ್ರೀಕರಣ ಮುಗಿದಾಗ ಮುಂದೇನು ಎಂದು ಬೇಸರಿಸಿಕೊಂಡರು. ಆಗ ಮತ್ತೂಂದು ಸಿನಿಮಾಕ್ಕೆ ಸಹಿ ಮಾಡಿದೆ. ಆ ಮೂಲಕ ಅವರಿಗೆ ಕೆಲಸ ಸಿಕ್ಕಿತು. ಒಂದಂತೂ ಖುಷಿ ಇದೆ.
ನಾನು ಯಾರ ಸಹಾಯ ಇಲ್ಲದೇ ಚಿತ್ರರಂಗಕ್ಕೆ ಬಂದವಳು. ಅವಕಾಶಕ್ಕಾಗಿ ಯಾವುದೇ ಅಡ್ಡದಾರಿ ಹಿಡಿದಿಲ್ಲ. ನಂದೇ ಆದ ಗತ್ತಲ್ಲಿ ಬಂದಿದ್ದೀನಿ, ಅದನ್ನೇ ಮುಂದುವರೆಸಿಕೊಂಡು ಹೋಗಿದ್ದೀನಿ. ಅವಕಾಶಕ್ಕಾಗಿ ಯಾರ ಕಾಲಿಗೂ ಬಿದ್ದಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನಿಂದ ಯಾವ ನಿರ್ಮಾಪಕರು ಕಣ್ಣೀರು ಹಾಕಿಲ್ಲ’ ಎಂದು ನೇರವಾಗಿ ಹೇಳುತ್ತಾರೆ.