Advertisement
ಮಾರ್ಕ್ ಜುಕರ್‌ರ್ಬರ್ಗ್ “ಫೇಸ್‌ಬುಕ್’ ಅಂತ ಯಾವ ಗಳಿಗೆಯಲ್ಲಿ ಹೆಸರಿಟ್ಟನೊ; ಅದು ಎಂಥ ಸಭ್ಯನೊಳಗಿನ ಒಂದು ಅಸಂಬದ್ಧ ಮುಖವನ್ನು ಪಟಾರನೆ ತೆಗೆದು ಹಾಕಿ, ಜಗತ್ತಿನ ಮುಂದೆ ಅಂಟಿಸಿ ಬಿಡುತ್ತದೆ. ಅದನ್ನು ನೋಡಿದವರು “ಇವ್ರು, ಹೀಗೇನಾ..’ ಅಂತ ಒಳಗೊಳಗೇ ಯೋಚಿಸಿ, ಕಡೆಗೆ ಯಾವುದೋ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನ್ಯೂಸ್ಪಿಡ್‌ನಲ್ಲಿ ಒಳ್ಳೊಳ್ಳೆ ಪೋಸ್ಟ್ ಹಾಕಿ ಪ್ರಬುದ್ಧನಂತೆ ತೋರುವ ಕೆಲವರು, ಒಬ್ಬಳು ಚಂದದ ಹುಡುಗಿಗೆ ಮಾಡುವ ಕೆಲಸ ಏನು ಗೊತ್ತಾ? ಆಕೆಯ ಮೆಸೆಂಜರ್‌ನಲ್ಲಿ ಹೊಗಳಿ ಹೊಗಳಿ ಕವನ ಬರೆದು ಕಾಟ ಕೊಡುವುದು. ನೋಡುವಷ್ಟು ನೋಡಿ, ಆಕೆ ಅದನ್ನು ನಾಲ್ಕು ಜನಕ್ಕೆ ತೋರಿಸಿ, ಒಮ್ಮೆ ತನ್ನ ಪೇಜಿನಲ್ಲಿ ಅಂಟಿಸಿಕೊಂಡರೆ ಇವರ ಕತೆ ಮುಗೀತು; ಬೆತ್ತಲಾಗುತ್ತಾರೆ.
Related Articles
Advertisement
ಏನಿದು ವಾಚ್ ಪಾರ್ಟಿ?ನಿಮಗೆ ಪಾರ್ಟಿ ಬಗ್ಗೆ ಗೊತ್ತಲ್ಲ? ಒಂದಷ್ಟು ಜನ ಒಂದು ಕಡೆ ಸೇರಿಕೊಂಡು ಏನಾದರೂ ಮುಕ್ಕುತ್ತಾ ಹರಟೆ ಹೊಡೆಯುವುದು. ಈ ವಾಚ್ ಪಾರ್ಟಿಯು ಕೂಡ ಅದೇ ತರಹ. ನಾವೆಲ್ಲ ಒಂದು ಕಡೆ ಇರೋಕೆ ಆಗಲ್ಲ, ಆಗ ಎಲ್ಲರೂ ಒಟ್ಟಿಗೆ ಒಂದೇ ವಿಡಿಯೋ ನೋಡಬಹುದು. ಅದರ ಬಗ್ಗೆ, ನೋಡಿದ ಪ್ರತಿಯೊಬ್ಬರೂ ಒಟ್ಟಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು. ಎಲ್ಲೆಲ್ಲೋ ಇರುವವರು ಒಟ್ಟಿಗೆ ಕುಳಿತು ನೋಡಬಹುದಾದ ವಿಡಿಯೋ ವೀಕ್ಷಣೆಯನ್ನು “ವಾಚ್ ಪಾರ್ಟಿ’ ಅನ್ನಲಾಗುತ್ತದೆ. ಮೊದಲೇ ಯಾರೋ ಹೋಸ್ಟ್ ಮಾಡಿದ ವಾಚ್ ಪಾರ್ಟಿಗೆ ನೀವು ಸೇರಿಕೊಳ್ಳಬಹುದು. ಇದು ಲೈವ್ ವಿಡಿಯೋ ಅಲ್ಲ. ಮೊದಲೇ ಚಿತ್ರೀಕರಿಸಿಕೊಂಡ ಯಾವುದೇ ವಿಡಿಯೋ ಆಗಬಹುದು, ಅದನ್ನು ಎರಡಕ್ಕಿಂತ ಹೆಚ್ಚು ಜನ ಒಟ್ಟಿಗೆ ವೀಕ್ಷಿಸಬಹುದು. “ವಾಚ್ ಪಾರ್ಟಿ’, ಪೇಸ್‌ಬುಕ್ಕಿನಲ್ಲಿ ತುಂಬಾ ಒಳ್ಳೆಯ ಆಯ್ಕೆ. ಆದರೆ ಬಳಸಲು ಬರೆದಿದ್ದರೆ ಮಾತ್ರ ಎಡವಟ್ಟುಗಳು ಗ್ಯಾರಂಟಿ. ಎಲ್ಲೋ ದೂರ ದೂರ ಇರುವ ಗೆಳೆಯರೆಲ್ಲ ಒಂದೆಡೆ ಕೂತು ವಿಡಿಯೋ ನೋಡಲಾಗುವುದಿಲ್ಲ. ಅದರ ಬಗ್ಗೆ ಮಾತನಾಡಲಾಗುವುದಿಲ್ಲ. ಆದರೆ, ಅದನ್ನು ವಾಚ್ ಪಾರ್ಟಿ ಸಾಧ್ಯ ಮಾಡುತ್ತದೆ. ಕಾಳಜಿ ಇರಲಿ
ಕೆಲವರಂತೂ ತಮ್ಮ ಪೇಜ್‌ನಲ್ಲಿ ಏನೇ ಬರೆದುಕೊಂಡರೂ, ಅದರೊಂದಿಗೆ ಒಂದು ಹುಡುಗಿಯ ಚಿತ್ರ ಹಾಕುತ್ತಾರೆ. ಅವರ ಎಲ್ಲಾ ಭಾವನೆಗಳಿಗೂ ಹುಡುಗಿಯ ಚಿತ್ರಗಳೇ ದೃಷ್ಟಾಂತ. ಅದರ ಹಿಂದೆ ಅವರ ಮನೋಸ್ಥಿತಿ ಮತ್ತು ಕೇವಲ ಲೈಕ್ ಗಳಿಸಲು ಪಡುವ ಪಡಿಪಾಟಲು ಅರ್ಥವಾಗುತ್ತದೆ. ನೀವು ಏನೇ ಹೇಳಿ, ಯಾರದೇ ಆಗಲಿ, ಅವರ ಫೇಸ್‌ಬುಕ್ ಪೇಜನ್ನು ಆರಂಭದಿಂದ ಗಮನಿಸಿ ಬಿಟ್ಟರೆ, ಇವರು ಇಂಥವರೇ ಅಂತ ಹೇಳಿಬಿಡಬಹುದು. ಗುಟ್ಟಾಗಿ ಅವರಿವರ ಇನ್ ಬಾಕ್ಸಿಗೆ ತಡಕಾಡುವ, ಕದ್ದು ಏನೇನೋ ನೋಡುವ ವಿಚಾರಗಳು ಇದರ ಲೆಕ್ಕದಲ್ಲಿ ಇಲ್ಲ. ಹೀಗೆ ಗುಟ್ಟು-ಗುಟ್ಟು ವಿಚಾರಗಳನ್ನು ಕೆಲವೊಮ್ಮೆ ವಾಚ್ ಪಾರ್ಟಿ ಬಹಿರಂಗಪಡಿಸಿ ಬಿಡುವ ಅಪಾಯವಿದೆ. ಅದಕ್ಕೆ ಕಾರಣ ಅದರ ಬಗ್ಗೆ ಸರಿಯಾದ ಜ್ಞಾನ ಇಲ್ಲದಿರುವುದೇ ಆಗಿದೆ. ಅಷ್ಟೇ ಅಲ್ಲ, ನೀವು ನೋಡುವ ವಿಡಿಯೋಗಳು ನಿಮ್ಮ ವ್ಯಕ್ತಿತ್ವವನ್ನು ಹೇಳಿಬಿಡುತ್ತವೆ. ಆದ್ದರಿಂದ , ವಾಚ್ ಪಾರ್ಟಿಗೆ ಸೇರುವ ಮುನ್ನ ಒಮ್ಮೆ ಯೋಚಿಸಿ. ಚೆಂದದ ವಿಡಿಯೋ ಬಂತು ಅಂತ ನುಗ್ಗಿ ಬಿಡಬೇಡಿ. ನೀವು ನೋಡುತ್ತಿರುವ ವಿಡಿಯೋ ಬಗ್ಗೆ ಬರೆಯುವ ಕಾಮೆಂಟ್‌ಗಳನ್ನು ಎಲ್ಲರೂ ಗಮನಿಸುತ್ತಾರೆ. ಒಂದು ಸಭ್ಯ ರೀತಿಯಲ್ಲಿ ನೀವು ಅಲ್ಲಿ ನಡೆದುಕೊಳ್ಳಬೇಕಾಗುತ್ತದೆ. ವಾಚ್ ಪಾರ್ಟಿ ಫೇಸ್‌ಬುಕ್‌ನಲ್ಲಿ ಒಂದು ಒಳ್ಳೆಯ ಆಯ್ಕೆ. ಆದರೆ ಅದನ್ನು ಯಾವಾಗ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿರ್ಧರಿತವಾಗುತ್ತದೆ. ಅಂದ ಹಾಗೆ ನೀವು ಯಾವ ಪಾರ್ಟಿ? ಸದಾಶಿವ ಸೊರಟೂರು