Advertisement

ರೋಣ ಕಾಲೇಜಿಗೆ ದಾರಿ ಯಾವುದಯ್ಯ!

02:33 PM Nov 23, 2019 | Suhan S |

ರೋಣ: ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕೆ ಸಾಕಷ್ಟು ಹಣಕಾಸಿನ ನೆರವು ನೀಡಿ ಮೂಲ ಸೌಕರ್ಯ ಒದಗಿಸಲು ಸೂಚಿಸಲಾಗಿದ್ದರೂ ಅದು ಕಾಗದದಲ್ಲಿ ಮಾತ್ರ ಎನ್ನುವುದಕ್ಕೆ ರೋಣ ಸರಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ.

Advertisement

ಕಾಲೇಜಿಗೆ ಹೋಗಲು ಮತ್ತು ಬರಲು ದಾರಿಯಿಲ್ಲ. ಕಳೆದ 28 ವರ್ಷಗಳಿಂದ ದ್ವಾರ ಬಾಗಿಲಿನಿಂದ ಮಕ್ಕಳು ಓಡಾಡುತ್ತಿದ್ದರು. ಈಗ ಏಕಾಏಕಿ ಜಾಗದ ಮಾಲೀಕರು ರಸ್ತೆಗೆ ಬೇಲಿ ಹಾಕಿದ್ದರಿಂದ ಕಾಲೇಜಿನ ವಿದ್ಯಾರ್ಥಿಗಳು ಕಾಂಪೌಂಡ್‌ ಹಾರಿ ಕಾಲೇಜಿಗೆ ಹೋಗುವಂತಾಗಿದೆ. ಗಂಡು ಮಕ್ಕಳು ಹೇಗಾದರೂ ಕಸರತ್ತು ಮಾಡಿಕೊಂಡು ಕಾಲೇಜಿನ ಒಳಗೆ ಹೋಗುತ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ಏನು ಮಾಡಬೇಕು ಎಂದು ತಿಳಿಯದೇ ಪಕ್ಕದಲ್ಲಿರುವ ನೀರಾವರಿ ಕಚೇರಿಯ ಮುಳ್ಳಿನ ಕಂಟಿಯಲ್ಲಿ ಹಾದು ಹೋಗುತ್ತಾರೆ.

ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ತರಗತಿಯಲ್ಲಿ 161 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸೇರಿ ಒಟ್ಟು 102 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ವಿಜ್ಞಾನದ ವಿಭಾಗ ಶಿಕ್ಷಣವು ಇಲ್ಲಿ ಲಭ್ಯವಿತ್ತು. ಶೂನ್ಯ ದಾಖಲಾತಿಯಿಂದ ಇಲ್ಲಿಗೆ ಮಂಜೂರಾಗಿ ಬಂದಿದ್ದ ಉಪಾನ್ಯಾಸಕರು ಬೇರೆಕಡೆ ವರ್ಗಾವಣೆಯಾಗಿ ಹೋಗಿದ್ದಾರೆ.

ಒಟ್ಟು ಮೂರು ಜನ ಅತಿಥಿ ಉಪನ್ಯಾಸಕರು, 5 ಜನ ಕಾಯಂ ಉಪನ್ಯಾಸಕರು, ಒಬ್ಬರು ಶಿರೋಳ ಕಾಲೇಜಿನಿಂದ ನಿಯೋಜನೆಯ ಮೇಲೆ ರೋಣದಲ್ಲಿ ಮೂರು ದಿನ ಹಾಗೂ ಶಿರೋಳ ಕಾಲೇಜಿನಲ್ಲಿ ಮೂರು ದಿನ ಉಪನ್ಯಾಸ ನೀಡುತ್ತಿದ್ದಾರೆ. ಆದರೆ ಇಷ್ಟೊಂದು ಹಾಜರಾತಿ ಇರುವ ಸರ್ಕಾರಿ ಕಾಲೇಜಿಗೆ ಸರ್ಕಾರ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾದಂತೆ ಕಂಡುಬರುತ್ತಿದೆ.

ಹೆಣ್ಣುಮಕ್ಕಳಿಗಿಲ್ಲ ಶೌಚಾಲಯ: ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಿದ್ದೇವೆ ಎಂದು ಅಂಕಿಅಂಶಗಳಲ್ಲಿ ಹೇಳಿಕೊಳ್ಳುವ ಸರ್ಕಾರದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇಲ್ಲಿನ ಕಾಲೇಜಿನ ಹೆಣ್ಣುಮಕ್ಕಳಿಗೆ ಶೌಚಾಲಯ ನೀಡುವಲ್ಲಿ ವಿಫಲವಾಗಿದೆ. ಹೆಣ್ಣುಮಕ್ಕಳು ಮೂತ್ರ ವಿಸರ್ಜನೆಗೆ ಕಾಲೇಜಿನ ಹಿಂದುಗಡೆ ಬೆಳೆದು ನಿಂತಿರುವ ಜಾಲಿಕಂಟಿಗಳಲ್ಲಿ ಹೋಗಬೇಕಾದ ಸ್ಥಿತಿಯಿದೆ.

Advertisement

ಈ ಹಿಂದೆ ಶಾಸಕರು ಕಾಲೇಜಿಗೆ ಭೇಟಿ ನೀಡಿದ ಸಮಯದಲ್ಲಿ ಶಿಥಿಲಗೊಂಡಿರುವ ಕಟ್ಟಡ ವೀಕ್ಷಣೆ ಮಾಡಿ, ಐದು ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಗುತ್ತಿಗೆ ಪಡೆದು ನಿರ್ಮಿತಿ ಕೇಂದ್ರದ ಅಭಿಯಂತರರು ಈ ಅನುದಾನದಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮೊತ್ತೂಂದು ಎಸ್ಟಿಮೆಂಟ್‌ ಮಾಡಿ ಇಲಾಖೆಗೆ ನೀಡಿದ್ದಾರೆ. ಇದರಿಂದ ರಿಪೇರಿ ಕಾಮಗಾರಿ ಅಷ್ಟಕ್ಕೇ ನಿಂತಿದೆ. –ಜೆ. ಬಿಕಲ್ಲನಗೌಡ್ರ, ಪ್ರಭಾರಿ ಪ್ರಾಚಾರ್ಯರ

 

-ಯಚ್ಚರಗೌಡ ಗೋವಿಂದಗೌಡ

Advertisement

Udayavani is now on Telegram. Click here to join our channel and stay updated with the latest news.

Next