Advertisement

ಡಾ. ರಾಜ್‌ ಹಾಡಿದ ಕೊನೆಯ ಹಾಡು ಯಾರಲ್ಲಿದೆ ಗೊತ್ತಾ?

08:30 PM May 19, 2017 | Karthik A |

ಡಾ. ರಾಜಕುಮಾರ್‌ ಅವರು ಹಾಡಿರುವ ಕೊನೆಯ ಹಾಡು ಯಾವುದು? ಇವತ್ತಿಗೂ ಅವರ ಕೊನೆಯ ಜನಪ್ರಿಯ ಹಾಡೆಂದು ಸಿಗುವುದು ‘ಅಭಿ’ ಚಿತ್ರದ ‘ವಿಧಿ ಬರಹ ಎಂಥ ಘೋರ, ಪ್ರೇಮಿಗಳು ದೂರ ದೂರ …’ ಹಾಡು. ಇನ್ನು ಇಂಟರ್‌ನೆಟ್‌ನಲ್ಲಿ ಹುಡುಕಿದರೆ, ಅವರ ಕೊನೆಯ ಹಾಡೆಂದು ಸಿಗುವುದು ‘ತೆರಳುತಿದೆ ಮರಳಿ ಮಣ್ಣಿಗೆ ಜೀವ …’ ಎಂಬ ಹಾಡು. 2007ರಲ್ಲಿ ಬಂದ ‘ಜೀವನ ಧಾರೆ’ ಎಂಬ ಚಿತ್ರಕ್ಕೆ ಹಾಡಿದ ಹಾಡೇ, ಡಾ. ರಾಜಕುಮಾರ್‌ ಅವರ ಕೊನೆಯ ಹಾಡು ಎಂದು ಹೇಳಲಾಗುತ್ತಿದೆ. ಆದರೆ, ರಾಜಕುಮಾರ್‌ ಅವರು ಹಾಡಿರುವ ಒಂದು ಹಾಡು ಇನ್ನೂ ಬಿಡುಗಡೆಯಾಗಿಲ್ಲ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ ಮತ್ತು ಆ ಹಾಡನ್ನು ಸದ್ಯದಲ್ಲೇ ಹೊಸ ಚಿತ್ರವೊಂದರಲ್ಲಿ ಬಳಸಿಕೊಳ್ಳಲಾಗುತ್ತದೆ.

Advertisement

ಹೌದು, ‘ಚಕ್ರವರ್ತಿ’ ಚಿತ್ರದ ಮೂಲಕ ಸುಮಾರು 14 ವರ್ಷಗಳ ನಂತರ ಚಿತ್ರರಂಗಕ್ಕೆ ವಾಪಸ್ಸು ಬಂದ ಕುಮಾರ್‌ ಬಂಗಾರಪ್ಪ ಸದ್ಯದಲ್ಲೇ ಹೊಸ ಚಿತ್ರವೊಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಡಾ. ರಾಜಕುಮಾರ್‌ ಅವರ ಕೊನೆಯ ಹಾಡೊಂದನ್ನು ಬಳಸಿಕೊಳ್ಳುತ್ತಾರಂತೆ. ‘ಬಹಳ ವರ್ಷಗಳ ಹಿಂದೆ ಒಂದು ಚಿತ್ರ ನಿರ್ಮಿಸುವುದಕ್ಕೆ ತಯಾರಿ ನಡೆಸಿದ್ದೆ. ಆಗ ಅಪ್ಪಾಜಿ ಅವರಿಂದ ಒಂದು ಹಾಡನ್ನೂ ಹಾಡಿಸಿದ್ದೆ. ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡು ಅದು. ಆ ನಂತರ ಏನೋ ಆಗಿ, ಆ ಚಿತ್ರವನ್ನು ಶುರು ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಆ ಚಿತ್ರಕ್ಕೆಂದು ಮಾಡಿಟ್ಟುಕೊಂಡಿದ್ದ ಹಾಡು, ಇನ್ನೂ ನನ್ನ ಬಳಿಯೇ ಇದೆ. ಆ ಹಾಡನ್ನು ಕೊಡಿ ಎಂದು ಹಲವರು ಕೇಳಿದರು. ಆದರೆ, ನಾನು ಯಾರಿಗೂ ಕೊಟ್ಟಿಲ್ಲ. ಆ ಹಾಡನ್ನು ಮೂಲವಾಗಿಟ್ಟುಕೊಂಡು, ಈಗೊಂದು ಚಿತ್ರ ಮಾಡುವ ಯೋಚನೆ ಇದೆ. ಸದ್ಯಕ್ಕೆ ಆ ಚಿತ್ರದ ತಯಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಆ ಚಿತ್ರದ ಬಗ್ಗೆ ಹೇಳುತ್ತೇನೆ’ ಎನ್ನುತ್ತಾರೆ ಕುಮಾರ್‌ ಬಂಗಾರಪ್ಪ. ವಿಶೇಷವೆಂದರೆ, ಡಾ. ರಾಜಕುಮಾರ್‌ ಬೇರೆಯವರ ಚಿತ್ರಕ್ಕೆಂದು ಮೊದಲಿಗೆ ಹಾಡಿದ್ದು ಕುಮಾರ್‌ ಬಂಗಾರಪ್ಪ ಅಭಿನಯದ ‘ಅಶ್ವಮೇಧ’ ಚಿತ್ರಕ್ಕಾಗಿ. ಆ ಹಾಡು ಇವತ್ತಿಗೂ ಜನಪ್ರಿಯ ಮತ್ತು ಆರ್ಕೆಸ್ಟ್ರಾಗಳಲ್ಲಿ ಆ ಹಾಡು ಹಾಡದೆ, ಕಾರ್ಯಕ್ರಮ ಮುಗಿಯುವುದಿಲ್ಲ ಎಂದರೆ ತಪ್ಪಿಲ್ಲ. ಈಗ ಡಾ. ರಾಜಕುಮಾರ್‌ ಅವರ ಕೊನೆಯ ಹಾಡು ಸಹ ಕುಮಾರ್‌ ಬಂಗಾರಪ್ಪ ಚಿತ್ರಕ್ಕೇ ಆಗಿರುತ್ತದೆ ಎನ್ನುವುದು ವಿಶೇಷ.

‘ಅಪ್ಪಾಜಿ ಅವರು ಅದುವರೆಗೂ ಬೇರೆಯವರ ಚಿತ್ರಗಳಿಗೆ ಹಾಡುತ್ತಿರಲಿಲ್ಲ. ‘ಅಶ್ವಮೇಧ’ ಚಿತ್ರದ ಟೈಟಲ್‌ ಸಾಂಗ್‌ ಹಾಡುವುದಕ್ಕೆ ಕೇಳಿದೆ. ತಕ್ಷಣವೇ, ಯಾವಾಗ ರೆಕಾರ್ಡಿಂಗ್‌ ಎಂದು ಕೇಳಿದರು. ತಕ್ಷಣ ಹಾಡು ಬರೆಸಿದೆ. ಕೇಳಿ ಚೆನ್ನಾಗಿದೆ ಎಂದರು. ಮೊದಲು ಅದೊಂದು ಹಿನ್ನೆಲೆ ಹಾಡು ಎಂದು ಫಿಕ್ಸ್‌ ಆಗಿತ್ತು. ಚಿತ್ರೀಕರಣ ಮಾಡುವಾಗ, ಡ್ಯಾನ್ಸ್‌ ಮಾಸ್ಟರ್‌ ಯಾಕೋ ಕಿಕ್‌ ಬರುತ್ತಿಲ್ಲ ಎಂದರು. ಬರೀ ಹಿನ್ನೆಲೆ ಹಾಡಾಗಿ ಬೇಡ, ಅದಕ್ಕೆ ಲಿಪ್‌ ಮೂವ್‌ಮೆಂಟ್‌ ಕೊಡಿ ಎಂದರು. ಡಾ. ರಾಜಕುಮಾರ್‌ ಅವರು ಹಾಡಿದ ಹಾಡಿಗೆ ನಾನು ಲಿಪ್‌ ಮೂವ್‌ಮೆಂಟ್‌ ಕೊಡೋದಾ ಅಂತ ಭಯವಾಯಿತು. ಕೊನೆಗೆ ಅವರಿಗೆ ರಷಸ್‌ ತೋರಿಸಿದೆ. ಹಾಡು ನೋಡಿದವರೇ, ‘ಇಲ್ಲ ಕಂದ, ಇದೇ ಬಹಳ ಚೆನ್ನಾಗಿದೆ. ಹೀಗೇ ಇರಲಿ ಬಿಡು’ ಎಂದಿದ್ದರು. ಆ ಚಿತ್ರ ಬಿಡುಗಡೆಯಾದಾಗ, ಮೊದಲ ದಿನ ಅವರಿಗೆ ಊರ್ವಶಿ ಚಿತ್ರಮಂದಿರದಲ್ಲಿ ಚಿತ್ರ ತೋರಿಸಿದ್ದೆ. ಚಿತ್ರ ನೋಡಿದ ಅವರು, ‘ಈ ಹಾಡಿನಿಂದ ನೀನು ದೊಡ್ಡ ಹೀರೋ ಆಗ್ತೀಯ’ ಎಂದು ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಕುಮಾರ್‌ ಬಂಗಾರಪ್ಪ.

– ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next