Advertisement

ಯಾವ ಡಬಲ್‌ ಬೇಕು? ಆಯ್ಕೆ ನಿಮ್ಮದು: ಮೋದಿ

01:03 AM Nov 02, 2020 | mahesh |

ಪಾಟ್ನಾ: “ಒಂದು ಕಡೆ ರಾಜ್ಯದಲ್ಲಿ ಜಂಗಲ್‌ರಾಜ್‌ ತರಲು ಹವಣಿಸುತ್ತಿರುವ “ಡಬಲ್‌ ಯುವರಾಜರು’ (ತೇಜಸ್ವಿ ಯಾದವ್‌ ಮತ್ತು ರಾಹುಲ್‌ಗಾಂಧಿ) ಇದ್ದಾರೆ. ಮತ್ತೂಂದೆಡೆ, ಲಾಟೀನು ಯುಗದಿಂದ ಎಲ್‌ಇಡಿ ಯುಗದತ್ತ ಬಿಹಾರವನ್ನು ತಂದ “ಡಬಲ್‌ ಎಂಜಿನ್‌ ಪ್ರಗತಿ’ ಇದೆ. ಇವೆರಡರಲ್ಲಿ ಯಾವುದು ಬೇಕೆಂದು ನೀವೇ ಆಯ್ಕೆ ಮಾಡಿಕೊಳ್ಳಿ’.

Advertisement

ಬಿಹಾರದ ಜನರಿಗೆ ಇಂಥದ್ದೊಂದು ಆಯ್ಕೆಯನ್ನು ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಎರಡನೇ ಹಂತದ ಮತದಾನದ ಬಹಿರಂಗ ಪ್ರಚಾರ ಅಂತ್ಯಗೊಂಡ ರವಿವಾರ ರಾಜ್ಯಾದ್ಯಂತ ಸರಣಿ ಚುನಾವಣ ಪ್ರಚಾರ ರ್ಯಾಲಿ ನಡೆಸಿದ ಮೋದಿ, ತಮ್ಮ ಭಾಷಣದಲ್ಲಿ ಬಾಲಕೋಟ್‌ ವೈಮಾನಿಕ ದಾಳಿ, ಅಯೋಧ್ಯೆ, 370ನೇ ವಿಧಿ, ಪೌರತ್ವ ಕಾಯ್ದೆ, ಜೆಎನ್‌ಯುನಲ್ಲಿ ಕೂಗಿದ್ದಾರೆನ್ನ ಲಾದ ಘೋಷಣೆಗಳು ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಯುವರಾಜರಿಗೆ ಬುದ್ಧಿ ಕಲಿಸಿ: ಕೆಲವು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲೂ ಡಬಲ್‌ ಯುವರಾಜರು (ರಾಹುಲ್‌-ಅಖೀಲೇಶ್‌) ಮೈತ್ರಿ ಮಾಡಿಕೊಂಡಿದ್ದರು. ಕಪ್ಪು ಜಾಕೆಟ್‌ ಧರಿಸಿ ರಾಜ್ಯಾದ್ಯಂತ ಜನರಿಗೆ ಕೈ ಬೀಸುತ್ತಾ ಪ್ರಚಾರ ಮಾಡಿದರು. ಆದರೆ ಅವರ ಮೈತ್ರಿಯು ಹೀನಾಯ ಸೋಲು ಅನುಭವಿಸಿತು. ಅದೇ ರೀತಿ, ಈಗ ಬಿಹಾರದಲ್ಲೂ ಡಬಲ್‌ ಯುವರಾಜರು(ರಾಹುಲ್‌-ತೇಜಸ್ವಿ) ಮೈತ್ರಿ ಮಾಡಿಕೊಂಡಿದ್ದು, ಅವರಿಗೂ ರಾಜ್ಯದ ಜನತೆ ತಕ್ಕ ಪಾಠ ಕಲಿಸಬೇಕಿದೆ ಎಂದಿದ್ದಾರೆ ಮೋದಿ. ಕೇಂದ್ರದಲ್ಲೂ, ರಾಜ್ಯದಲ್ಲೂ ಒಂದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೆ ಆಗ ಡಬಲ್‌ ಎಂಜಿನ್‌ ಪ್ರಗತಿ ಕಾಣಲು ಸಾಧ್ಯ ಎಂದೂ ಹೇಳಿದ್ದಾರೆ.

2024ರಲ್ಲಿ ಮೋದಿ ವಿರುದ್ಧ ನಿತೀಶ್‌ ಸ್ಪರ್ಧೆ: ವಿಧಾನಸಭೆ ಚುನಾವಣೆ ಫ‌ಲಿತಾಂಶ ಬಂದ ಬಳಿಕ ಸಿಎಂ ನಿತೀಶ್‌ ಕುಮಾರ್‌ ಎನ್‌ಡಿಎಗೆ ಗುಡ್‌ಬೈ ಹೇಳಲಿದ್ದಾರೆ. ನಂತರ 2024ರ ಚುನಾವಣೆ ಯಲ್ಲಿ ಮೋದಿ ವಿರುದ್ಧವೇ ಕಣಕ್ಕಿಳಿಯುವುದು ಅವರ ತಂತ್ರ ಎಂದು ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

ಯಾರಾದರೂ ಪೌರತ್ವ ಕಳೆದುಕೊಂಡರಾ?
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಪ್ರತಿಪಕ್ಷಗಳು ಸುಖಾಸುಮ್ಮನೆ ಜನರಲ್ಲಿ ಭಯ ಬಿತ್ತಿದವು ಎಂದು ಕಿಡಿಕಾರಿದ ಪ್ರಧಾನಿ ಮೋದಿ, “ಸಿಎಎ ಜಾರಿಯಾದರೆ ನಿಮ್ಮ ಪೌರತ್ವವನ್ನು ಕಸಿದುಕೊಳ್ಳಲಾಗುತ್ತದೆ ಎಂದು ಪ್ರತಿಪಕ್ಷಗಳು ಸುಳ್ಳು ಹೇಳಿದವು. ಆದರೆ, ಸಿಎಎ ಜಾರಿಯಾಗಿ ಒಂದು ವರ್ಷವೇ ಕಳೆಯಿತು. ನೀವು ಯಾರಾದರೂ ಪೌರತ್ವ ಕಳೆದುಕೊಂಡಿರಾ’ ಎಂದು ಪ್ರಶ್ನಿಸಿದ್ದಾರೆ. ಸುಳ್ಳು ಹೇಳುವ ಮೂಲಕ, ಭಯಪಡಿಸುವ ಮೂಲಕ ಅವರು ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರುವುದು ಇದರಿಂದ ಸಾಬೀತಾಗಿದೆ ಎಂದೂ ಮೋದಿ ಹೇಳಿದ್ದಾರೆ. ಜತೆಗೆ, ದೇಶದ ಎಲ್ಲರ ಸಹಕಾರದಿಂದ ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆ ಎತ್ತುತ್ತಿದೆ. ಆದರೆ, ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದವರನ್ನು ಮಾತ್ರ ನೀವು ಯಾವತ್ತೂ ಮರೆಯಬಾರದು ಎಂದೂ ಅವರು ಹೇಳಿದ್ದಾರೆ.

Advertisement

ದ್ವೇಷಪೂರಿತ ಭಾಷಣಗಳು, ವೈಯಕ್ತಿಕ ಟೀಕೆಗಳ ಮೂಲಕ ಚುನಾವಣೆ ಗೆಲ್ಲುವುದು ಆರೋಗ್ಯಪೂರ್ಣ ಪ್ರಜಾಸತ್ತೆಗೆ ಒಳ್ಳೆಯದಲ್ಲ.
ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next