Advertisement
ಒಮ್ಮೆ ವೇದಗಳ ಮಹತ್ವವನ್ನು ಕೇಳಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ ತನಗೂ ಅದನ್ನು ಕಲಿಸಿಕೊಡುವಂತೆ ಒಬ್ಬ ಬ್ರಾಹ್ಮಣನಲ್ಲಿ ಕೇಳಿದನಂತೆ. “ಅದು ಸಾಧ್ಯವಿಲ್ಲ. ಆಷೇಯ ಪರಂಪರೆಯಂತೆ ತಂದೆ, ಮಗನಿಗೆ ಮಾತ್ರ ಕಲಿಸಲು ಮಾತ್ರ ಸಾಧ್ಯ’ ಎಂದು ನಿರಾಕರಿಸಿದನಂತೆ. ಸಿಟ್ಟಾದ ಅಧಿಕಾರಿ “ನಾಳೆಯವರೆವಿಗೂ ಗಡುವು ಕೊಡುತ್ತೇನೆ. ಇಲ್ಲದಿದ್ದರೆ ನಿನ್ನಲ್ಲಿರುವ ಎಲ್ಲವನ್ನು ಸುಟ್ಟುಹಾಕುತ್ತೇನೆ’ ಎಂದನಂತೆ.
Related Articles
ಸಾಮವೇದದಲ್ಲಿ ಕೌತುಮಿ, ರಾಣಾಯನಿ ಮತ್ತು ಜೈಮುನಿ ಎಂಬ ಮೂರು ಶಾಖೆಗಳಿವೆ. ರಾಣಾಯನಿ ಶಾಖೆಯು ಗೋಕರ್ಣ, ಮಹಾರಾಷ್ಟ್ರ ಮತ್ತು ಹೊನ್ನಾವರದ ಪಂಚಗ್ರಾಮಗಳಲ್ಲಿ ಮಾತ್ರ ಪ್ರಚಲಿತದಲ್ಲಿದೆ. “ಸಂಗೀತ ಕೂಡ ಬಂದದ್ದು ವೇದದಿಂದಲೇ. ಮುಂದೆ ಅದನ್ನು ಜನಸಾಮಾನ್ಯರ ಮನರಂಜನೆಗೆ, ಆ ಮೂಲಕ ಕಲಾಭಿವ್ಯಕ್ತಿಯ ಮೂಲಕ ವ್ಯಕ್ತಿತ್ವದ ಔನ್ಯತ್ಯಕ್ಕೆ ಬಳಸಿಕೊಳ್ಳಲಾಯಿತು. ಸಾಮವೇದದಲ್ಲಿರುವ ಮಂತ್ರಗಳು ಮಾತ್ರ ವ್ಯಕ್ತಿಯ ಆಂತರಂಗಿಕ ಔನ್ಯತ್ಯಕ್ಕೆ ಕಾರಣವಾದವು’ ಎನ್ನುವುದು ಶಿವರಾಮ ಭಟ್ಟರ ವಿವರಣೆ. ಅವರ ಪ್ರಕಾರ ಯಾವ ವೇದಗಳು ಮೇಲಲ್ಲ ಕೀಳೂ ಅಲ್ಲ. ಅವೆಲ್ಲವೂ ಪ್ರಕೃತಿಯಲ್ಲಿರುವ ವೈವಿಧ್ಯಮಯ ಗಿಡ ಮರ ಬಳ್ಳಿಗಳಂತೆ ಎನ್ನುವ ನಂಬಿಕೆ ಅವರದು “ವೇದಮಂತ್ರಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದಕ್ಕೆ ಎಂ. ಎಸ್. ಸುಬ್ಬಲಕ್ಷ್ಮೀ ದೊಡ್ಡ ಉದಾಹರಣೆ. ಅವರು ವಿಷ್ಣು ಸಹಸ್ರನಾಮವನ್ನು ಹೇಳಿರುವ ಕ್ರಮ ತುಂಬಾ ಅಪೂರ್ವವಾದುದು. ಅವರು ಲಘು, ದೀರ್ಘ ಸ್ವರ (ಅಲ್ಪಪ್ರಾಣ ಮಹಾಪ್ರಾಣ) ಗಳನ್ನು ಉಚ್ಚರಿಸಿರುವ ಕ್ರಮಗಳಲ್ಲಿ ಸಣ್ಣ ತಪ್ಪೂ ಇಲ್ಲ. ಅವರ ಸ್ವರಸೌಂದರ್ಯ ನಮ್ಮ ಮನಸ್ಸನ್ನು ಮುಟ್ಟುವಂಥದು ಶಿವರಾಮ ಭಟ್ ಎಷ್ಟೇ ಸಂಪ್ರದಾಯವಾದಿಗಳಾದರೂ ವೇದಮಂತ್ರಗಳನ್ನು ಪುರುಷರು- ಅದರಲ್ಲಿಯೂ ಅದು ವೈದಿಕ ಬ್ರಾಹ್ಮಣರ ಆಸ್ತಿ ಎಂದು ನಂಬಿದವರಲ್ಲ. ಎಲ್ಲಿ ಪ್ರತಿಭೆ, ಸಾಮರ್ಥ್ಯಗಳಿವೆಯೋ ಅವುಗಳನ್ನು ಒಪ್ಪಿಕೊಳ್ಳಬೇಕೆಂಬ ಅವರ ಮನಃಸ್ಥಿತಿ ದೊಡ್ಡದು ಮಾತ್ರವಲ್ಲ; ಪೂರ್ಣ ಆಷೇìಯವಾದುದು ಆಧುನಿಕವಾಗಿಯೂ ಇರುತ್ತದೆ ಎನ್ನುವುದಕ್ಕೆ ಉದಾಹರಣೆ.
Advertisement
ಈಚೆಗೆ ಬೆಂಗಳೂರಿನ ಅಭಿನವ ಹೊನ್ನಾವರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಅವರ ಜೊತೆಗಿನ ಒಡನಾಟದಿಂದ ನನಗೆ ವಿಶೇಷ ಅನುಭೂತಿ ದೊರೆಯಿತು. ಅವರು ವೇದಮಂತ್ರಗಳನ್ನು ಉಚ್ಚರಿಸುವ ರೀತಿಯಲ್ಲಿ ಮಾತ್ರವಲ್ಲ, ಅದನ್ನು ಹೇಗೆ ಕಲಿಸಬೇಕೆಂಬುದಕ್ಕೆ ಕೊಡುತ್ತಿದ್ದ ಉದಾಹರಣೆಗಳು ಕೂಡ ಅಶ್ಚರ್ಯ ಹುಟ್ಟಿಸಿತು. ಒಂದು ಋಕ್ಕನ್ನು ಹೇಳಿ “ಇದನ್ನು ಬಾಯಿಯಲ್ಲಿ ಗಾಳಿಯನ್ನು ಶೇಖರಿಸಿಟ್ಟುಕೊಂಡು ಕಪ್ಪೆಯು ಹಾರುವಂತೆ ಉಚ್ಚರಿಸಬೇಕು’ ಎಂದು ವಿವರಿಸಿದರು. ಕುದುರೆ, ಆನೆಗಳ ಚಿತ್ರಗಳನ್ನು ನಮ್ಮ ಮುಂದೆ ತಂದು ಅವುಗಳ ನೆನಪಿನಲ್ಲಿ ಆ ಮಂತ್ರಗಳು ಉಳಿಯುವಂತೆ ಮಾಡುವಲ್ಲಿನ ನಮ್ಮ ಹಿರಿಯರ ಜ್ಞಾನ ಎಷ್ಟು ದೊಡ್ಡದಿರಬೇಡ? ಎಷ್ಟು ವೈಜ್ಞಾನಿಕವಾಗಿರಬೇಡ ! ಭಟ್ಟರು ಮಂತ್ರಗಳನ್ನು ಪಠಿಸುತ್ತಿದ್ದರೆ ನನಗೆ ಮಳೆಗಾಲದಲ್ಲಿನ ಕಡಲಿನ ಮೊರೆತದ ಹಾಗೆ ಕೇಳಿಸುತ್ತಿತ್ತು. ಇನ್ನೊಮ್ಮೆ ಮರದ ಎಲೆಗಳ ಮೇಲಿಂದ ನೀರು ನೆಲಕ್ಕೆ ಬೀಳುವಲ್ಲಿನ ಲಯವಾಗಿ. ಒಮ್ಮೆಯಂತೂ ಅವರು ಉಚ್ಚರಿಸುತ್ತಿದ್ದ ಮಂತ್ರಗಳ ಮಧ್ಯೆಯೇ ಅವರ ಅಂಗಳದಲ್ಲಿದ್ದ ಹಸುವೊಂದು ಕೂಗಿತು. ಈ ಮಂತ್ರದ ಉಚ್ಚಾರಕ್ಕೂ ಗೋವಿನ ಕರೆಗೂ ಸಂಬಂಧವಿರುವಂತಿದೆಯಲ್ಲ! ಎನ್ನುವ ಭಾವ ನನ್ನಲ್ಲಿ ಸುಳಿದು ಹೋಯಿತು. ಅದನ್ನು ನನ್ನ ಆಧುನಿಕ ಮನಸ್ಸು ಸುಲಭವಾಗಿ ಒಪ್ಪಬೇಕಲ್ಲ? ಅದೊಂದು ಕಾಕತಾಳೀಯವಿರಬೇಕು ಎಂದುಕೊಳ್ಳುತ್ತಿರುವಂತೆಯೇ ಮತ್ತೂಂದು ಋಕ್ಕಿನ ಉಚ್ಚಾರ ಸಮಯದಲ್ಲಿ ಮತ್ತೂಂದು ಹಸು ಕೂಗಿತು. ಹೌದು, ನಮ್ಮಲ್ಲಿನ ಹಸುಗಳ ಕರೆಯಲ್ಲಿ ಎಷ್ಟೆಲ್ಲ ವೈವಿಧ್ಯವಿದೆಯಲ್ಲ – ಮಂತ್ರಗಳ ಉಚ್ಚಾರಣೆಯಲ್ಲೂ ಇರುವಂತೆ.
ಶಿವರಾಮ ಭಟ್ ಅವರು ತಮ್ಮ ಮಗ ಶಂಭುವಿಗೆ ಈ ಪಾಠವನ್ನು ಕಲಿಸಿ¨ªಾರೆ. ಅವರ ನಂತರ? “ಇವತ್ತು ಇದು ಯಾರಿಗೂ ಬೇಕಿಲ್ಲ. ಕಲಿಯಲಿಕ್ಕೆ ಬರುವವರಿಗೆ ಒಂದೇ ಗುಕ್ಕಿನಲ್ಲಿ ಎಲ್ಲವೂ ಸಿಕ್ಕಿಬಿಡಬೇಕು. ಆದರೆ, ಇದಕ್ಕೆ ಏಳೆಂಟು ವರ್ಷಗಳ ಸತತ ಅಭ್ಯಾಸ ಬೇಕು. ಯಾರಾದರೂ ಬಂದು ಕಲಿಯುತ್ತೇವೆಂದರೆ ಕಲಿಸಿಕೊಡಲು ನಾವು ಸಿದ್ಧ’ ಎನ್ನುತ್ತಾರೆ ಶಂಭು. ತಮ್ಮ ಮಕ್ಕಳು ಕಾನ್ವೆೆಂಟಿನಲ್ಲಿ ಓದಿ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಜೇಬು ತುಂಬ ಹಣ ತರಬೇಕೆಂದು ನಿರೀಕ್ಷಿಸುವ ಯಾವ ತಂದೆ-ತಾಯಿಯರಿಗೆ ತಮ್ಮ ಮಗ ಹೀಗೆ ಕಲಿಯಬೇಕೆಂಬ ಆಸೆ ಇರುತ್ತದೆ? ಅದು ಅವರ ತಪ್ಪಲ್ಲ ಬಿಡಿ. ಆದರೆ, ನಾವು ನಿರಾಶರಾಗಬೇಕಿಲ್ಲ. ಎಷ್ಟೋ ವರ್ಷಗಳಿಂದ ಅಡೆತಡೆಗಳಿಂದ ಉಳಿದು ಬಂದಿರುವ ಈ ಪರಂಪರೆ ಮುಂದೆಯೂ ಉಳಿದೇ ಉಳಿಯುತ್ತದೆ ಎಂಬ ನಂಬಿಕೆ ನನ್ನದು.
ಶಿವರಾಮಭಟ್ಟರ ಮಂತ್ರಗಳು ನನ್ನಲ್ಲಿ ಅನಂತ ಭಾವನೆಗಳನ್ನು ಸ್ಪುರಿಸಿದ್ದು ಮಾತ್ರವಲ್ಲ , ಅವತ್ತು ರಾತ್ರಿಯಿಡಿ ನನ್ನ ಕಣ್ಣುಗಳಲ್ಲಿ ಕೋರೈಸುವ ಬೆಳಕಾಗಿ ತುಂಬಿತ್ತು. ಮಾರನೆಯ ದಿನ ಎದ್ದವಳೇ ದೊಡ್ಡಹೊಂಡದಲ್ಲಿ ಎಂದಿನಂತೆ ವಾಕಿಂಗ್ ಹೊರಟೆ. ಸುತ್ತಲೂ ಕಾಡುಕೋಳಿ, ನವಿಲು ಮುಂತಾದ ಅಸಂಖ್ಯ ಹಕ್ಕಿಗಳ ಕೂಗು ಕಿವಿಯನ್ನು ತುಂಬುತ್ತಿತ್ತು. ಒಂದೂರಿಗೆ ಹೋಗುವ ತಿರುವಿನಲ್ಲಿ ಒಂದು ಮರದ ಮೇಲೆ ಹಕ್ಕಿಯ ಹಾಡು ಕೇಳುತ್ತಿತ್ತು. ಆ ಹಕ್ಕಿ ಎಲ್ಲಿದೆ ಎಂದು ಗುರುತಿಸಲು ನನಗೆ ಐದು ನಿಮಿಷ ಬೇಕಾಯಿತು. ಆ ಹಕ್ಕಿಗೆ ಇರುವ ಹೆಸರಾವುದು? ಗೊತ್ತಿಲ್ಲ. ಆ ಹಕ್ಕಿ ಮತ್ತೆ ಹಾಡಲು ಶುರುಮಾಡಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಕಾಡಿನ ಮತ್ತೂಂದು ಮೂಲೆಯಿಂದ ಅಂತಹದ್ದೇ ಹಾಡು. ನಾನು ಮುಂದೆ ನಡೆದೆ. ಆ ಹಕ್ಕಿಯೂ ಸ್ವಲ್ಪದೂರ ಮುಂದೆ ಬಂದು ಒಂದು ಕಾಡಿನ ಬಳ್ಳಿಯ ಮೇಲೆ ಕುಳಿತುಕೊಂಡಿತು. ಆ ಹಕ್ಕಿಯ ಭಾರವನ್ನು ಆ ಬಳ್ಳಿ ತಡೆಯುತ್ತದೆಯೇ? ಎಂದುಕೊಂಡೆ. ಆ ಹಕ್ಕಿ ತನ್ನ ಕೊಕ್ಕನ್ನು ಸುತ್ತಮುತ್ತ ಹೊರಳಿಸಿ ಹಾಡಲು ಸುರುಮಾಡಿತು. ಒಂದರೆ ನಿಮಿಷ ಮಾತ್ರ. ಆ ಹಾಡಿನ ರಾಗ ಯಾವುದು? ಅದರ ಭಾವವನ್ನು ಯಾವ ಶಬ್ದಗಳಲ್ಲಿ ಬರೆಯಲು ಸಾಧ್ಯ? ಕಲಿಸುವುದಾದರೆ ಹೇಗೆ? ಆ ಪುಟ್ಟ ಹಕ್ಕಿ ಆ ಬಳ್ಳಿಯನ್ನು ಬಿಟ್ಟು ಕಾಡಿನ ಕಡೆ ಹಾರಿತು. ಆ ಬಳ್ಳಿಯ ಭಾಗ್ಯವೇ! ಬಳ್ಳಿ ಹಕ್ಕಿ ಎದ್ದು ಹೋದ ಭಾರಕ್ಕೆ ಮೇಲೆ- ಕೆಳಗೆ ತೊನೆಯಿತು. ಅದು ಹಕ್ಕಿಯ ಹಾಡಿನ ಲಯದಂತಲೇ?
ನನಗೆ ಶಿವರಾಮ ಭಟ್ ಅವರೂ ಹೀಗೆಯೇ ಒಂದು ಹಕ್ಕಿಯೆಂದು ಅನಿಸಿತು.
ಸಂಧ್ಯಾ ಹೆಗಡೆ ದೊಡ್ಡಹೊಂಡ