Advertisement

ಚರ್ಚೆಗೆ ಅವಕಾಶ ನೀಡಬೇಕೋ, ಬೇಡವೋ: ಅರ್ಧ ದಿನ ಇದೇ ಚರ್ಚೆ

12:30 AM Feb 12, 2019 | Team Udayavani |

ಬೆಂಗಳೂರು: ಆಡಿಯೋ ಪ್ರಕರಣದ ಚರ್ಚೆಗೆ ಅವಕಾಶ ನೀಡಬೇಕೇ ಬೇಡವೋ ಎನ್ನುವ ಬಗ್ಗೆಯೇ ವಿಧಾನಪರಿಷತ್‌ನಲ್ಲಿ ಅರ್ಧದಿನ ಚರ್ಚೆಯಾಗಿದೆ.

Advertisement

ಜೆಡಿಎಸ್‌-ಕಾಂಗ್ರೆಸ್‌ ಸದಸ್ಯರು ಈ ವಿಷಯದ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರೆ, ಬಿಜೆಪಿ ಸದಸ್ಯರು ಅವಕಾಶ ನೀಡಬಾರದೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರು ತೀರ್ಪನ್ನು ಕಾಯ್ದಿರಿಸಿ, ಕಲಾಪವನ್ನು ಮಂಗಳವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.

ಆಡಿಯೋ ಪ್ರಕರಣದ ಚರ್ಚೆ ಮಾಡಬೇಕೇ, ಬೇಡವೇ ಎಂಬುದರ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸುವಂತೆ ಸಭಾಪತಿಯರು ಸೂಚಿಸಿದರು.

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ನಿಯಮ 342ರಡಿಯಲ್ಲಿ ಇಂತಹ ಪ್ರಕರಣಗಳನ್ನು ಚರ್ಚೆಗೆ ನೀಡುವುದು ಸರಿಯಲ್ಲ. ಸಭಾಧ್ಯಕ್ಷರ ಮೇಲೆ ಆಪಾದನೆ ಬಂದಿರುವುದರಿಂದ ಮೇಲ್ಮನೆಯಲ್ಲಿ ಇದನ್ನು ಚರ್ಚೆ ಮಾಡುವುದರಿಂದ ನಿಯಮ ಮೀರಿ ಹೋಗುವ ಸಾಧ್ಯತೆಯೂ ಇದೆ. ಅಂತಿಮವಾಗಿ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಸಭಾಪತಿಗೆ ತಿಳಿಸಿದರು.

ಜೆಡಿಎಸ್‌ ಸದಸ್ಯ ಭೋಜೇಗೌಡ ಮಾತನಾಡಿ, ವಿಧಾನಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆದಿದೆ. ಎಸ್‌ಐಟಿ ತನಿಖೆ ನಡೆಸಬಹುದೇ ಎಂಬುದನ್ನು ಸಭಾಧ್ಯಕ್ಷರೇ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದಕ್ಕೆ ನಮ್ಮ ಸಹಮತವೂ ಇದೆ. ಆದರೆ, ಮೇಲ್ಮನೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡದಿದ್ದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದರು.

Advertisement

ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಮಾತನಾಡಿ, ಆಡಿಯೋದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗದ ಪ್ರಮುಖರ ಮೇಲೆ ಆರೋಪ ಹೊರಿಸಲಾಗಿದೆ. ಹೀಗಾಗಿ ಇದೊಂದು ಗಂಭೀರ ವಿಷಯವಾಗಿ ಪರಿಗಣಿಸಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌ನ ಸದಸ್ಯ ಅಲ್ಲಂವೀರಭದ್ರಪ್ಪ, ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ಜೆಡಿಎಸ್‌ ಸದಸ್ಯರಾದ ಶ್ರೀಕಂಠೇಗೌಡ, ಟಿ.ಎ.ಶರವಣ, ಬಿಜೆಪಿ ಸದಸ್ಯರಾದ ಅರುಣ್‌ ಶಹಾಪುರ, ಎಂ.ಕೆ.ಪ್ರಾಣೇಶ್‌, ಸಚಿವ ವೆಂಕಟರಾವ್‌ ನಾಡಗೌಡ ಚರ್ಚೆಯಲ್ಲಿ ಭಾಗವಹಿಸಿದ್ದರು.

ರಫೆಲ್‌…ವಾದ್ರಾ…ಚೌಕಿದಾರ್‌….
ಬಿಜೆಪಿ ಸದಸ್ಯ ರವಿಕುಮಾರ್‌ ಮಾತನಾಡುತ್ತಾ, ಇಂತಹ ವಿಷಯಗಳ ಚರ್ಚೆಗೆ ಅವಕಾಶ ನೀಡಿದರೆ, ನಾಳೆ ನಾವೂ ಕೂಡ ಇನ್ನೊಂದು ವಿಷಯ ತಂದು ಚರ್ಚೆಗೆ ಅವಕಾಶ ಕೇಳುತ್ತೇವೆ. ಆಗ ಪೀಠ ಅನುಮತಿ ನೀಡಲು ಸಾಧ್ಯವಿದೆಯೇ. ಹೀಗಾಗಿ ವ್ಯರ್ಥ ಚರ್ಚೆ ಬೇಡ ಎಂದರು. ಯುಪಿಎ ಸರ್ಕಾರ ನಡೆಸಿದ 2ಜಿ, ಕೋಲ್‌ಗೇಟ್ ಮೊದಲಾದ ಕೋಟ್ಯಂತರ ರೂಪಾಯಿ ಹಗರಣದ ಚರ್ಚೆಯೂ ನಡೆಯಲಿ ಎಂದರು. ಎಚ್.ಎಂ.ರೇವಣ್ಣ ಎದ್ದು ನಿಂತು, ಚೌಕಿದಾರ್‌ ಏನು ಮಾಡುತ್ತಿದ್ದಾರೆ, ರಫೆಲ್‌ ಹಗರಣದ ಚರ್ಚೆಯಾಗಲಿ, ಅಚ್ಛೇದಿನ ಬಂದಿದೆಯೇ ಎಂದರು. ವಾದ್ರ ಪ್ರಕರಣಗಳು ಚರ್ಚೆ ಬರಲಿ ಎಂದು ರವಿ ಕುಮಾರ್‌ ಮರು ಆಗ್ರಹಿಸಿದರು. ಈ ಮಧ್ಯೆ ಐವಾನ್‌ ಡಿಸೋಜಾ, 50, 35,30, 20 , 5 ಕೋಟಿ ಎಂದು ಕೂಗುತ್ತಾ ಬಿಜೆಪಿ ಸದಸ್ಯರ ಕಾಲೆಳೆದರು. ಮಧ್ಯ ಪ್ರವೇಶಿಸಿದ ಸಭಾಪತಿ ಪ್ರತಾಪ್‌ಚಂದ್ರಶೆಟ್ಟಿ, ಎಲ್ಲರೂ ಎದ್ದು ನಿಂತು ಒಟ್ಟಿಗೆ ಮಾತನಾಡಿದರೆ ಯಾವುದನ್ನೂ ಕಡತದಲ್ಲಿ ರೆಕಾರ್ಡ್‌ ಮಾಡುವುದಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next