Advertisement

ಪ್ರಯಾಣಿಕರಿಗೆ ಕಾದಿದೆಯೇ ಅಪಾಯ?

12:55 PM Jun 09, 2019 | Team Udayavani |

ಹೊನ್ನಾವರ: ಮಧ್ಯೆ ಕೈಯಾಡಿಸುವವರಿಂದಾಗಿ ಚತುಷ್ಪಥ ಕಾಮಗಾರಿ ಕುಂಟುತ್ತ ಸಾಗಿದೆ. ಹಾದಿತಪ್ಪಿದೆ ಎಂದು ತಜ್ಞರ ಸಮಿತಿ ದೆಹಲಿಗೆ ವರದಿ ಮಾಡಿದೆ. ಖಾಸಗಿ ಭೂಮಿಯಲ್ಲಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೆದ್ದಾರಿಗೆ ಹೊಂದಿಕೊಂಡೇ ಎತ್ತರದ ಸಡಿಲಮಣ್ಣಿನ ಗುಡ್ಡಗಳಿದ್ದು ಎಷ್ಟೇ ಪ್ರಯತ್ನಿಸಿದರೂ ಕುಸಿಯುವ ಅಪಾಯ ಇದ್ದೇ ಇದೆ.

Advertisement

ಭೂಮಿಯ ಅಂತರಂಗ ಕೊಂಕಣ ರೇಲ್ವೆಯನ್ನು ಸಾಕಷ್ಟು ಸತಾಯಿಸಿತು. ಈಗ ಚತುಷ್ಪಥಕ್ಕೆ ಸವಾಲಾಗಿದೆ. ಹೊನ್ನಾವರ ನಗರದಲ್ಲಿ ಹಾದು ಹೋಗುವ ಚತುಷ್ಪಥದ ಸಂಚಾರ ಸುಗಮಗೊಳಿಸಲು ಕಾಲೇಜು ಸರ್ಕಲ್ನಲ್ಲಿ ಮೇಲ್ಸೇತುವೆ ನಿರ್ಮಿಸುವ ಯೋಜನೆ ಇನ್ನೂ ಕಡತದಲ್ಲಿದೆ. ಒಂದು ಗುಂಪು ಎಡಕ್ಕೆ ಹೋಗಲಿ ಎಂದರೆ ಇನ್ನೊಂದು ಗುಂಪು ಬಲ ತೋರಿಸುತ್ತದೆ. ರಾಜಕಾರಣಿಗಳು ತಮಗೆ ಬೇಕಾದವರಿಗೆ ಬೈಪಾಸ್‌ ಎಂದರೆ ಇನ್ನೊಂದೆಡೆ ಮೇಲ್ಸೇತುವೆ ಬೇಡ ಎಂದರು. ಒಮ್ಮೆ 60ಅಡಿ, ಮತ್ತೂಮ್ಮೆ 45ಅಡಿ ಹೀಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೂ ಗೊಂದಲ ಮಾಡಿದರು.

ಗುತ್ತಿಗೆ ಕಂಪನಿ ಬಹುಕೋಟಿ ಹಣ ಹೂಡಿದ್ದು ಹೇಗಾದರೂ ಮುಗಿಸಿ ಟೋಲ್ ಸಂಗ್ರಹ ಮಾಡಿದರೆ ಸಾಕು ಎನ್ನುತ್ತಿದೆ. ಆದ್ದರಿಂದ ಕೊರೆದ ಗುಡ್ಡಗಳಿಗೆ ರಂದ್ರ ಕೊರೆದು ಬೋಲ್r ಕೂರಿಸಿ, ಸಿಮೆಂಟ್ ಮೆತ್ತುತ್ತಿದೆ. ಕಾಸರಕೋಡ ಕೆಳಗಿನೂರಿನಲ್ಲಿ ಕೊಂಕಣ ರೇಲ್ವೆ ಇಂತಹದೇ ಗುಡ್ಡ ಕುಸಿತ ನಿಲ್ಲಿಸಲು 4ವರ್ಷ ಕಷ್ಟಪಟ್ಟಿತ್ತು. ಕಳೆದ ವರ್ಷ ಗುಣವಂತೆಯ ಬಳಿ ಹೀಗೆ ಮೆತ್ತಿದ್ದು ಮಣ್ಣುಪಾಲಾಗಿದೆ. ಕಂದಾಯ ಇಲಾಖೆ ನಿರ್ಲಕ್ಷದಿಂದ ಖಾಸಗಿ ಭೂಮಿ ವಶಪಡಿಸಿಕೊಳ್ಳುವ ಕ್ರಿಯೆ ಮುಗಿದಿಲ್ಲ. ಆದ್ದರಿಂದ ಹೊನ್ನಾವರ- ಕುಮಟಾ ಮಧ್ಯೆ ಹತ್ತೆಂಟು ಕಡೆ ದಿಕ್ಕು ಬದಲಾಯಿಸಲಾಗಿದೆ. ಚತುಷ್ಪಥ ಕಿರಿದಾಗಿ, ಸರ್ವಿಸ್‌ ರಸ್ತೆ ಮತ್ತು ಫ್ಲೈಓವರ್‌ ಇಲ್ಲದಾಗಿ ಯಥಾ ಸ್ಥಿತಿಯಲ್ಲಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಿತು. ಕಳೆದ ಒಂದು ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 1103 ಅಪಘಾತಗಳಾಗಿವೆ. 239ಜನ ಸತ್ತಿದ್ದಾರೆ. 522ಜನ ಗಂಭೀರ ಗಾಯಗೊಂಡಿದ್ದಾರೆ. 1331 ಜನ ಸಣ್ಣಪುಟ್ಟ ಗಾಯಗಳಿಂದ ನರಳಿದರು. ಇದರಲ್ಲಿ ಶೇ.75ರಷ್ಟು ಅಪಘಾತ ಕರಾವಳಿಯ 5ತಾಲೂಕುಗಳಲ್ಲಿ ನಡೆದಿದೆ.

ಇದೇ ಐಆರ್‌ಬಿ ಕಂಪನಿ ಉಡುಪಿ-ಕುಂದಾಪುರ ಮಧ್ಯೆ ಒಂದು ವರ್ಷ ಮೊದಲು ಆರಂಭಿಸಿದ ಕೆಲಸ ಮುಗಿಯುತ್ತ ಬಂದಿದೆ. ಹೊನ್ನಾವರ ಕಾಲೇಜು ಸರ್ಕಲ್ನಷ್ಟೇ ಸಂಚಾರವಿರುವ ಕುಂದಾಪುರ ಶಾಸ್ತ್ರಿ ಸರ್ಕಲ್ನಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದೆ. ಮಧ್ಯೆ 5ಊರುಗಳಲ್ಲಿ ಎತ್ತರದಲ್ಲಿ ಚತುಷ್ಪಥ ಹೋಗಿದೆ, ತಗ್ಗಿನಲ್ಲಿ ಸರ್ವಿಸ್‌ ರಸ್ತೆ ಒದಗಿಸಲಾಗಿದೆ. ಅಲ್ಲಿ ಊರ ಮಧ್ಯೆ ಹೋದರೆ ಸರಿ ನಮ್ಮೂರಲ್ಲಿ ಬೇಡ ಎನ್ನುವವರಿಗೆ ತಿಳಿಸಿ ಹೇಳುವವರಿಲ್ಲ. ಅಪೂರ್ಣ ಕಾಮಗಾರಿ ಹಲವು ಅನಾಹುತಗಳಿಗೆ ದಾರಿ ಆಗಲಿದೆ. ಇದಕ್ಕೆ ಭೂ ಗುಣ, ಆಡಳಿತದವರ ಹೊಣೆಗೇಡಿತನ ಕಾರಣ. ಜನರ ಕೂಗು ದೂರ ಕೇಳುವುದಿಲ್ಲ, ಕಷ್ಟ ಕಾಣಿಸುವುದಿಲ್ಲ.

•ಜೀಯು, ಹೊನ್ನಾವರ

Advertisement
Advertisement

Udayavani is now on Telegram. Click here to join our channel and stay updated with the latest news.