ರಾಯಚೂರು: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಡೆಸುವ ಕೃಷಿ ಮೇಳ ಅಕ್ಷರಶಃ ವ್ಯಾಪಾರ ಮೇಳವಾಗುತ್ತಿದೆಯೇ? ಈ ಬಾರಿ ಮಳಿಗೆಗಳ ದರ ನೋಡಿದರೆ ಅಂಥ ಅನುಮಾನ ಮೂಡದೆ ಇರದು.
ಕೃಷಿ ಚಟುವಟಿಕೆ ಸಂಬಂಧಿಸಿದ ಮಾಹಿತಿ ನೀಡಲು, ಯಂತ್ರೋಪಕರಣಗಳ ಪರಿಚಯಿಸಲು ಹಾಗೂ ನೂತನ ಪದ್ಧತಿಗಳ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಕೃಷಿ ಮೇಳ ಆಯೋಜಿಸಲಾಗುತ್ತದೆ. ಈ ಬಾರಿಯೂ ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಡಿ.8 ರಿಂದ 11ರವರೆಗೆ “ನೆಲ ಜಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ’ ಎಂಬ ಶೀರ್ಷಿಕೆಯಡಿ ಕೃಷಿ ಮೇಳ ಆಯೋಜಿಸಲಾಗಿದೆ. ಆದರೆ, ಮಳಿಗೆಗಳ ದರ ಕಂಡು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಮಾತ್ರ ಕಂಗಾಲಾಗಿದ್ದಾರೆ.
ಕಳೆದ ವರ್ಷದಂತೆ ಈ ಬಾರಿಯೂ 300 ಮಳಿಗೆಗಳನ್ನು ನಿರ್ಮಿಸುತ್ತಿದ್ದು, ದರ ಮಾತ್ರ ದುಪ್ಪಟ್ಟಾಗಿದೆ. 10x10x8 ಅಳತೆಯ ಎಕಾನಮಿ ಸ್ಟಾಲ್‌ಗೆ 9500 ರೂ. ದರ ನಿಗದಿ ಮಾಡಲಾಗಿದೆ. ಫೆಬ್ರಿಕೇಟ್ (ಹೈಟೆಕ್) 10x10x8 ಮಳಿಗೆಗೆ 18,000 ರೂ. ನಿಗದಿ ಮಾಡಲಾಗಿದೆ. 30×40 ಅಳತೆಯ ಬಯಲು ಸ್ಥಳಕ್ಕೆ 18,000 ರೂ. ಹಾಗೂ 60×40 ಅಳತೆಯ ಬಯಲು ಪ್ರದೇಶಕ್ಕೆ 36,000 ರೂ. ದರ ನಿಗದಿ ಮಾಡಲಾಗಿದೆ. ಇನ್ನು ಪ್ರಚಾರಾರ್ಥ ಅಳವಡಿಸುವ ಫ್ಲೆಕ್ಸ್ ಬಂಟಿಂಗ್ಸ್‌ಗಳಿಗೂ 30ರಿಂದ 50 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಸಣ್ಣಪುಟ್ಟ ವ್ಯಾಪಾರಿಗಳು ಎಕಾನಮಿ ಸ್ಟಾಲ್ ಬಳಸುತ್ತಿದ್ದು, ನಾಲ್ಕು ದಿನಕ್ಕೆ 9500 ಸಾವಿರ ರೂ. ನಿಗದಿ ಮಾಡಿರುವುದು ದುಬಾರಿ ಎನ್ನುತ್ತಿದ್ದಾರೆ. ಮೇಳಕ್ಕೆ ಬರುವವರೆಲ್ಲ ವ್ಯಾಪಾರ ಮಾಡುವುದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ವಹಿವಾಟು ನಡೆಯದಿದ್ದಲ್ಲಿ ಕೈಯಿಂದ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ. ಅಲ್ಲದೇ, ಕಳೆದ ಬಾರಿ ಕೂಡ ಸಾಕಷ್ಟು ಮಳಿಗೆಗಳು ಖಾಲಿ ಉಳಿದಿದ್ದವು.
ಮಳಿಗೆಗಳಿಗೂ ಜಿಎಸ್‌ಟಿ ಬಿಸಿ: ವಿಪರ್ಯಾಸ ಎಂದರೆ ಮಳಿಗೆಗಳಿಗೂ ಜಿಎಸ್‌ಟಿ ಬಿಸಿ ತಟ್ಟಿದೆ. 10 ಸಾವಿರ ರೂ. ಮೇಲ್ಪಟ್ಟ ಮಳಿಗೆಗೆ ಜಿಎಸ್‌ಟಿ ಪಾವತಿಸಬೇಕಿರುವುದರಿಂದ 500 ರೂ. ಕಡಿತಗೊಳಿಸಿ 9500 ನಿಗದಿ ಮಾಡಲಾಗಿದೆ. ಆದರೆ, ಫೆಬ್ರಿಕೇಟ್ ಮಳಿಗೆಗಳಿಗೆ 15 ಸಾವಿರ ರೂ. ದರವಿದ್ದರೂ ಜಿಎಸ್‌ಟಿ ಸೇರಿ 18 ಸಾವಿರ ರೂ. ಪಾವತಿಸಬೇಕಿದೆ. ಉಳಿದೆಲ್ಲ ಮಳಿಗೆಗಳಿಗೂ ತೆರಿಗೆ ಸಹಿತ ಶುಲ್ಕ ಪಾವತಿಸಬೇಕಿದೆ. ಹೀಗಾಗಿ ಜಿಎಸ್‌ಟಿ ಹೊರೆ ವರ್ತಕರ ಹೆಗಲೇರಿದೆ.
ಸಾಹಿತ್ಯ ಸಮ್ಮೇಳನದಲ್ಲೇ ಕಡಿಮೆಯಿತ್ತು: ಕಳೆದ ವರ್ಷ ಇದೇ ಸ್ಥಳದಲ್ಲೇ ನಡೆದಿದ್ದ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ 400 ಮಳಿಗೆಗಳನ್ನು ಅಳವಡಿಸಲಾಗಿತ್ತು. ಅಲ್ಲಿ ವಾಣಿಜ್ಯ ಉದ್ದೇಶಕ್ಕೆ ಒಂದು ಮಳಿಗೆಗೆ 4 ಸಾವಿರ ರೂ., ಪುಸ್ತಕ ಮಳಿಗೆಗಳಿಗೆ 2500 ರೂ. ದರ ನಿಗದಿ ಮಾಡಲಾಗಿತ್ತು. ಅಳತೆಯಲ್ಲೂ ಕೂಡ ಯಾವುದೇ ವ್ಯತ್ಯಾಸವಿರಲಿಲ್ಲ. ಕಲಾವಿದರಿಗೆ ಕೇವಲ ಒಂದು ಸಾವಿರ ರೂ. ಪಡೆಯಲಾಗಿತ್ತು. ಆದರೆ, ರೈತಪರ ಕಾರ್ಯಕ್ರಮವಾದ ಕೃಷಿ ಮೇಳದಲ್ಲಿ ಈ ರೀತಿ ಮನಸೋ ಇಚ್ಛೆ ದರ ನಿಗದಿ ಮಾಡುವುದರಿಂದ ಸಣ್ಣ ಮಧ್ಯಮ ವ್ಯಾಪಾರಿಗಳು ಮೇಳದಿಂದ ದೂರವುಳಿಯುವಂತಾಗುತ್ತದೆ.
ಕೃಷಿ ಮೇಳವನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಸ್ಥಳೀಯ ರೈತರು ಹಾಗೂ ಕೃಷಿ ಉತ್ಪನ್ನಗಳ ಆಧಾರಿತ ವರ್ತಕರಿಗೆ ನೆರವಾಗುವ ನಿಟ್ಟಿನಲ್ಲಿ ದರ ನಿಗದಿ ಮಾಡಲಿ ಎಂಬ ಒತ್ತಾಯ ಕೇಳಿ ಬರುತ್ತಿವೆ ಕಳೆದ ಬಾರಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯೇ ಮಳಿಗೆಗಳ ದರ ನಾಲ್ಕು ಸಾವಿರ ರೂ. ಇತ್ತು. ಆದರೆ, ಇದು ರೈತರ ಮೇಳ. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ನೂ ಕಡಿಮೆ ದರ ನಿಗದಿ ಮಾಡಿದ್ದರೆ ಸೂಕ್ತವಾಗುತ್ತಿತ್ತು. ಮಳಿಗೆ ದರ ಹೆಚ್ಚಾದರೆ ವಸ್ತುಗಳ ದರವೂ ಹೆಚ್ಚಾಗಿ ಬಡ, ಮಧ್ಯಮ ಜನರು ಏನೂ ಖರೀದಿಸಲು ಮುಂದಾಗುವುದಿಲ್ಲ. ಈ ಬಗ್ಗೆ ಕೃಷಿ ವಿವಿ ಚಿಂತನೆ ನಡೆಸಬೇಕು.
ವಿರೂಪಾಕ್ಷಪ್ಪ, ಶಿವಲಿಂಗ ಬುಕ್ ಡಿಪೋ
ಕೃಷಿ ಮೇಳಕ್ಕೆ 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 300 ಮಳಿಗೆ ನಿರ್ಮಿಸುತ್ತಿದ್ದು, 70 ಹೈಟೆಕ್ ಹಾಗೂ ಉಳಿದವು ಸಾಮಾನ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಕೆಲವೊಂದು ರಿಯಾಯಿತಿ ದರದಲ್ಲಿ ಸಿಗಲಿವೆ. ಸರ್ಕಾರ ನೀಡುವ ಅನುದಾನ ಜತೆಗೆ ಮಳಿಗೆಗಳಿಂದ ಸಂಗ್ರಹವಾದ ಹಣದಿಂದ ಮೇಳ ನಿರ್ವಹಣೆ ಮಾಡಬೇಕಿದೆ. ಕಳೆದ ಬಾರಿ 40 ಲಕ್ಷ ರೂ.
ಗಿಂತ ಹೆಚ್ಚು ಖರ್ಚು ಮಾಡಲಾಗಿತ್ತು.
ಪಿ.ಎಂ.ಸಾಲಿಮಠ ,ಕುಲಪತಿ, ಕೃಷಿ ವಿವಿ, ರಾಯಚೂರು.